ಭತ್ತ ಕೊಯ್ಯುವ ಯಂತ್ರಗಳಿಗೆ ಬೆಲೆ ನಿಗದಿ

ದೇವದುರ್ಗ.ನ.೦೯- ಕೂಲಿಕಾರರ ಕೊರತೆ ಬಂಡವಾಳ ಮಾಡಿಕೊಂಡ ಭತ್ತ ಕೊಯ್ಯುವ ಯಂತ್ರದ ಮಾಲೀಕರು ಹೆಚ್ಚಿನ ಬಾಡಿಗೆ ನಿಗದಿ ಮಾಡಿದ್ದಾರೆ.
ಡಿಸೇಲ್ ಬೆಲೆ ಏರಿಕೆ ನೆಪದಲ್ಲಿ ಪ್ರತಿಗಂಟೆಗೆ ೨೫೦೦-೨೮೦೦ರೂ. ವಸೂಲಿ ಮಾಡುತ್ತಿದ್ದಾರೆ. ಬಹುತೇಕ ರೈತರು ಬೇಸಿಗೆ ಬೆಳೆಗೆ ಹೊಲಹದ ಮಾಡಬೇಕಾದ ಕಾರಣ, ಬೆಲೆ ಹೆಚ್ಚಾದರೂ ಯಂತ್ರಗಳಿಂದ ರಾಶಿ ಮಾಡಿಸುತ್ತಿದ್ದಾರೆ. ತಾಲೂಕಿನಲ್ಲಿ ಇರುವ ಬೆರಳೆಣಿಕೆಯಷ್ಟು ಯಂತ್ರಗಳು ಕೂಡ ಬೆಲೆ ಏರಿಕೆ ಕಾರಣವಾಗಿವೆ.
ಅಧಿಕಾರಿಗಳು ಭತ್ತ ಕೊಯ್ಯುವ ಯಂತ್ರಗಳ ಮಾಲೀಕರ ಸಭೆ ಕರೆದು ಪ್ರತಿಗಂಟೆಗೆ ೧೮೦೦ರೂ. ಬೆಲೆ ನಿಗದಿ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಈ ಬೇಡಿಕೆ ಕೆಲಜಿಲ್ಲೆಗಳಲ್ಲಿ ಈಡೇರಿದ್ದರಿಂದ ನಮ್ಮಲ್ಲೂ ಜಾರಿಮಾಡಿದರೆ ರೈತರಿಗೆ ಬೀಳುವ ಅಧಿಕ ಹೊರೆ ಕಡಿಮೆಯಾಗಲಿದೆ.
ತಾಲೂಕಿನ ೨೯,೦೨೧ಹೆಕ್ಟೇರ್‌ನಲ್ಲಿ ಭತ್ತ ನಾಟಿಯಾಗಿದೆ. ೫೦ಸಾವಿರ ಹೆಕ್ಟೇರ್‌ನಲ್ಲಿ ಹತ್ತಿ ಬಿತ್ತನೆಯಾಗಿದೆ. ಮಾಲೀಕರು ಲಂಗುಲಗಾಮು ಇಲ್ಲದೆ ಬೆಲೆ ನಿಗದಿ ಮಾಡಿದ್ದಾರೆ. ಅಧಿಕಾರಿಗಳು ಸಭೆ ನಡೆಸಿ ಕಠಿಣ ಎಚ್ಚರಿಕೆ ನೀಡಿದರೆ ಹೆಚ್ಚಿನ ವಸೂಲಿ ತಡೆಯಬಹುದು ಎನ್ನುತ್ತಾರೆ ರೈತ ಬೂದಯ್ಯಸ್ವಾಮಿ ಗಬ್ಬೂರು.
ಕೃಷಿಕರಿಗೆ ಗಾಯದ ಮೇಲೆ ಬರೆ:ತಾಲೂಕಿನ ರೈತರು ಈ ವರ್ಷ ಎರಡೆರಡು ನೋವು ಅನುಭವಿಸುತ್ತಿದ್ದಾರೆ. ಒಂದೆಡೆ ಅತಿಯಾದ ಮಳೆ, ಕೃಷ್ಣಾ ನದಿ ನೆರೆಯಿಂದ ಸುಮಾರು ೨ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಇನ್ನೊಂದೆಡೆ ಕೂಲಿಕಾರರು ಹಾಗೂ ಯಂತ್ರಗಳ ಬೆಲೆ ಏರಿಕೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪಟ್ಟಣದ ಕೃಷಿ ಯಂತ್ರಧಾರೆಯಲ್ಲಿ ೧, ಅರಕೇರಾದಲ್ಲಿ ೧ಭತ್ತಕೊಯ್ಯುವ ಯಂತ್ರವಿದ್ದು, ೧೮೦೦ರೂ. ನಿಗದಿ ಮಾಡಲಾಗಿದೆ. ಆದರೆ, ಖಾಸಗಿ ಯಂತ್ರಗಳಿಗೆ ಬೆಲೆ ನಿಗದಿಯಾಗಿಲ್ಲ. ಇನ್ನೊಂದೆಡೆ ಕೂಲಿಕಾರರ ಬೇಡಿಕೆ ಹೆಚ್ಚಿದ್ದು, ೨೨೦ರಿಂದ ೨೫೦ರೂ. ಕೂಲಿಯಿದೆ. ಅವರನ್ನು ಕರೆದೊಯ್ಯುವ ವಾಹನದ ಬಾಡಿಕೆ ಕೂಡ ರೈತರೇ ನೀಡಬೇಕಿದೆ.

ಕೋಟ್======

ಭತ್ತ ಕೊಯ್ಯುವ ಯಂತ್ರಗಳ ಮಾಲೀಕರ ಸಭೆ ಕರೆದು ಬೆಲೆ ನಿಗದಿ ಮಾಡುವಂತೆ ರೈತರು ಒತ್ತಾಯ ಮಾಡುತ್ತಿದ್ದಾರೆ. ಕೃಷಿ ಇಲಾಖೆಯಿಂದ ೨ಯಂತ್ರಗಳಿದ್ದು, ೧೮೦೦ರೂ. ಬಾಡಿಕೆಯಿದೆ. ತಹಸೀಲ್ದಾರ್ ನೇತೃತ್ವದಲ್ಲಿ ಮಾಲೀಕರ ಸಭೆ ನಡೆಸಿ ಬೆಲೆ ನಿಗದಿ ಮಾಡಲಾಗುವುದು.
| ಡಾ.ಎಸ್.ಪ್ರಿಯಾಂಕ
ಕೃಷಿ ಇಲಾಖೆ ತಾಲೂಕು ಸಹಾಯಕ ನಿರ್ದೇಶಕಿ

೦೯-ಡಿವಿಡಿ-೩

೦೯-ಡಿವಿಡಿ-೪