ಭತ್ತ ಕಟಾವು ಯಂತ್ರಗಳ ಆಟಾಟೋಪಕ್ಕೆ ಕಡಿವಾಣ ಹಾಕಿ; ಬಿಜೆಪಿ ರೈತ ಮೋರ್ಚಾ ಆಗ್ರಹ

ಯಾದಗಿರಿ;ನ.7: ಜಿಲ್ಲೆಯ ಪ್ರಮುಖ ಬೆಳೆಯಾದ ಬತ್ತದ ಬೆಳೆಯ ಸಂದರ್ಭದಲ್ಲಿ ಬತ್ತ ಕಟಾವು ಯಂತ್ರದ ಬಾಡಿಗೆ ದರ ಅಂಕೆ ಮೀರಿ ಹೆಚ್ಚಿಸಿದ್ದು, ಕಡಿವಾಣ ಹಾಕುವಂತೆ ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ರೈತ ಮೋಚಾ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಶುಕ್ರವಾರ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶೇಖರ ದೊರೆ ಕಕ್ಕಸಗೇರಾ ನೇತೃತ್ವದಲ್ಲಿ ಡಿಸಿ ಕಚೇರಿಗೆ ತೆರಳಿದ ರೈತರು ಮನವಿ ಸಲ್ಲಿಸಿ ಜಿಲ್ಲಾದ್ಯಂತ ಕೃಷ್ಣ ಮೇಲ್ದಂಡೆ ಯೋಜನೆಗೆ ಒಳಪಟ್ಟ ಪ್ರದೇಶ ಸೇರಿದಂತೆ ಕೆರೆ ಭಾವಿ, ಕೊಳವೆಬಾವಿ, ನದಿ ದಂಡೆಯ ಪ್ರದೇಶದಲ್ಲಿ ಎಲ್ಲೆಡೆ ಬತ್ತ ಬೆಳೆಯುತ್ತಾರೆ.
ಆದರೆ ಈ ಬಾರಿ ಕೋವಿಡ್ ಬೀಗಮುದ್ರೆ ನಂತರ ಹಾಗೂ ಅತಿವೃಷ್ಟಿ, ಪ್ರವಾಹದ ಪರಿಸ್ಥಿತಿಯಿಂದ ಕಂಗಾಲಾಗಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಬತ್ತ ಕಟಾವು ಮಾಡುವ ಯಂತ್ರಗಳ ಮಾಲೀಕರು ಗಂಟೆಗೆ 2500-3000 ರೂ. ಬೆಲೆ ನಿಗದಿ ಮಾಡಿ ಕಂಗಾಲಾಗಿರುವ ರೈತರಿಗೆ ಇನ್ನಷ್ಟು ಸಂಕಷ್ಟಕ್ಕೆ ಈಡು ಮಾಡಿದ್ದಾರೆ.
ಆದ್ದರಿಂದ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಂಡು ಗಂಟೆಗೆ 1800 ಕ್ಕೆ ಮೀರದಂತೆ ಬೆಲೆ ನಿಗದಿಪಡಿಸಿ ರೈತರ ರಕ್ಷಣೆಗೆ ಮುಂದಾಗಬೇಕೆಂದು ರೈತಮೋರ್ಚಾ ಒತ್ತಾಯಿಸುತ್ತದೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಬಸವರಾಜಪ್ಪಗೌಡ ಬಿ. ಮಾಲಿಪಾಟೀಲ್, ಸಿದ್ರಾಮಪ್ಪ ಕುಂಬಾರ, ಸಿದ್ದಣ್ಣ ಗು. ಕಿಲಾರಿ, ಶರಣಗೌಡ ಮಾಲಿ ಪಾಟೀಲ್, ನಿಂಗಣ್ಣ ಗೋಡಿಹಾಳ್ಕರ್, ಸಂಗಣ್ಣ ತುಂಬಗಿ, ಗೌಡಪ್ಪಗೌಡ ಅಸಂತಪೂರ, ದೇವೀಂದ್ರಪ್ಪ ಯಾಳಗಿ, ಹಳ್ಳೆಪ್ಪ ಕವಾಲ್ದಾರ್, ಶಂಕರ ಕರಣಗಿ, ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಮೌನೇಶ ಬೆಳಗೇರಾ, ಗಿತರಿರಾಜ ಶಹಾಪೂರ, ಶ್ರೀನಿವಾಸ ನಾಯಕ, ಶೇಖರ ಬಿರಾದಾರ, ಆನಂದ ಶಹಾಪೂರ, ಸುನಿಲ್ ಪಾಟೀಲ್ ಇನ್ನಿತರರು ಇದ್ದರು.