ಭತ್ತಬೆಳೆಗಾರರ ಅನುಕೂಲಕ್ಕಾಗಿ ಆ.೧ ರಂದು ಭದ್ರನಾಲಾ ನೀರು ಹರಿಸಲು ಒತ್ತಾಯ

ಸಂಜೆವಾಣಿ ವಾರ್ತೆ

ದಾವಣಗೆರೆ. ಜು.೨೪: ಮಧ್ಯ ಕರ್ನಾಟಕದ ರೈತರ ಜೀವನಾಡಿ ಭದ್ರಾ ಜಲಾಶಯಕ್ಕೆ ಕಳೆದೆರಡು ದಿನಗಳಿಂದ ಒಳ ಹರಿವಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಆಗಸ್ಟ್ ೧ ರಿಂದಲೇ ನಾಲೆಗಳಿಗೆ ನೀರು ಬಿಡಬೇಕೆಂದು ದಾವಣಗೆರೆ ಜಿಲ್ಲಾ ರೈತರ ಒಕ್ಕೂಟದ ಸಂಚಾಲಕ ಬಿ.ಎಂ ಸತೀಶ್ ಕೊಳೇನಹಳ್ಳಿ ಒತ್ತಾಯಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭದ್ರಾ ಜಲಾಶಯದಲ್ಲಿ ಇಂದಿನ ಒಳ ಹರಿವು 39,348 ಕ್ಯೂಸೆಕ್ಸ್ ಇದ್ದು ನೀರಿನ ಮಟ್ಟ 149’5″ ಅಡಿ ಇದೆ.ಭದ್ರಾ ಅಚ್ಚುಕಟ್ಟು ಪ್ರದೇಶದ ದಾವಣಗೆರೆ ಜಿಲ್ಲೆಯ ಅರ್ಧದಷ್ಟು ರೈತರು ಬೇರೆ ಮೂಲಗಳ ನೀರು ಬಳಸಿ, ಭತ್ತದ ಸಸಿ ಬೆಳಸಿಕೊಂಡಿದ್ದಾರೆ. ಇನ್ನುಳಿದ ಅರ್ಧದಷ್ಟು ರೈತರು ಭದ್ರಾ ನೀರು ಹರಿಸಿದ ಮೇಲೆ ಬೀಜ ಚೆಲ್ಲುವವರಿದ್ದಾರೆ. ಇದರಿಂದ ಮುಂಗಡವಾಗಿ ಸಸಿ ಬೆಳಸಿಕೊಂಡವರಿಗೂ ತಡವಾಗಿ ಸಸಿ ಬೆಳಸಿಕೊಳ್ಳುವವರಿಗೂ 2 ತಿಂಗಳ ಅವಧಿಯ ಅಂತರವಾಗುತ್ತದೆ. ಮುಂದೆ ಭತ್ತ ಕಟಾವು ಅವಧಿಯಲ್ಲಿ 2 ತಿಂಗಳು ಹೆಚ್ಚುವರಿಯಾಗಿ ನೀರು ಹರಿಸಬೇಕಾಗುತ್ತದೆ. ಆದ್ದರಿಂದ ಆಗಸ್ಟ್ 1ರೊಳಗೆ ನಾಲೆಗಳಿಗೆ ನೀರು ಬಿಡಬೇಕು ಎಂದು ಒತ್ತಾಯಿಸಿದರು.ಭದ್ರಾ ಡ್ಯಾಂನ ಕಳೆದ 60 ವರ್ಷಗಳ ಇತಿಹಾಸ ಪರಿಶೀಲಿಸಿದಾಗ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ತುಂಬಿರುವ ಉದಾಹರಣೆ ಹೆಚ್ಚು ಇದೆ. ಇದು ಮಳೆಗಾಲವಾಗಿರುವುದರಿಂದ ನೀರಿನ ಸಂಗ್ರಹ ನೋಡಿಕೊಂಡು ವೇಳಾಪಟ್ಟಿ ಪ್ರಕಾರ ನೀರು ಹರಿಸಿದರೂ ನಡೆಯುತ್ತದೆ. ಬೇಸಿಗೆಯಲ್ಲಿ ಮಾತ್ರ ನಿರಂತರ ನೀರು ಹರಿಸಬೇಕು. ನೀರಾವರಿ ಇಲಾಖೆ 2 ಹಂಗಾಮಿನಲ್ಲಿಯೂ ನೀರಿನ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು ಎಂದರು.ಈಗ ವಿಶ್ವದಾದ್ಯಂತ ಅಕ್ಕಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಅಕ್ಕಿ ಬೆಲೆ ಹೆಚ್ಚಳವಾಗುವ ಸಂಭವವಿದೆ. ಪ್ರಪಂಚದ ಅಕ್ಕಿ ಉತ್ಪಾದನೆಯಲ್ಲಿ ಭಾರತದ ಪಾಲು ಶೇಕಡ 40 ರಷ್ಟು ಇದೆ. ಕಳೆದ 2022-23ನೇ ಸಾಲಿನಲ್ಲಿ ನಮ್ಮ ದೇಶದಿಂದ ವಿದೇಶಗಳಿಗೆ 42.12 ಲಕ್ಷ ಟನ್ ಅಕ್ಕಿ ರಪ್ತು ಆಗಿದೆ. ಈಗ ಕೇಂದ್ರ ಸರ್ಕಾರ ಬಾಸ್ಮತಿ ಅಕ್ಕಿ ಹೊರತುಪಡಿಸಿ ಇನ್ನುಳಿದ ಎಲ್ಲಾ ನಮೂನೆಯ ಅಕ್ಕಿ ರಪ್ತುನ್ನು ನಿಷೇಧಿಸಿದೆ. ಯಾವುದೇ ಅಡೆತಡೆ ಇಲ್ಲದೆ ನಿಗದಿತ ದರದಲ್ಲಿ ನಮ್ಮ ದೇಶದ ಜನರಿಗೆ ಅಕ್ಕಿ ಪೂರೈಕೆಯಗಬೇಕು ಮತ್ತು ಮೊದಲು ನಮ್ಮ ದೇಶದ ಜನರಿಗೆ ಊಟ, ಆಮೇಲೆ ವ್ಯಾಪಾರ ಎಂಬುದು ಕೇಂದ್ರ ಸರ್ಕಾರದ ಉದ್ದೇಶ. ಆದರೆ ಇದರಿಂದ ಭತ್ತಕ್ಕೆ ಚಿನ್ನದ ಬೆಲೆ ಸಿಗುವ ಅವಕಾಶ ಕೈ ತಪ್ಪುವ ಸಾಧ್ಯತೆಗಳಿವೆ. ಆದ್ದರಿಂದ ಅಕ್ಕಿ ರಫ್ತು ನಿಷೇಧ ಹಿಂಪಡೆದು, ಪ್ರಸ್ತುತ ಟೊಮೆಟೊಗೆ ಸಿಕ್ಕ ಚಿನ್ನದ ಬೆಲೆ ಭತ್ತಕ್ಕೂ ಸಿಗುವಂತೆ ಮಾಡಬೇಕು. ಅನೇಕ ವರ್ಷಗಳಿಂದ ಬಸವಳಿದು ಭತ್ತ ಬೆಳೆದು ದೇಶದ ಜನರಿಗೆ ಅನ್ನ ನೀಡಿದ ಅನ್ನದಾತ ರೈತರಿಗೆ ಒಂದು ಸುವರ್ಣಾವಕಾಶ ಸಿಗುವಂತೆ ಮಾಡಬೇಕು ಎಂದರು.ಮುಖಂಡರಾದ ಬೆಳವನೂರು ನಾಗೇಶ್ವರರಾವ್ ಮಾತನಾಡಿ ಕಳೆದ ವರ್ಷ ಜುಲೈ ೬ ರಂದೇ ಭದ್ರಾ ನಾಲೆಯಿಂದ ನೀರು ಹರಿಸಲಾಗಿತ್ತು.ಈ ಬಾರಿ ಮಳೆ ತಡವಾಗಿದೆ ಆದ ಕಾರಣ ಆಗಸ್ಟ್ ೧ ರಂದು ನೀರು ಹರಿಸಿದರೆ ಉತ್ತಮ ಬೆಳೆ ಬೆಳೆಯಲು ಸಾಧ್ಯ. ಮುಂದೆ ಚಳಿಗಾಲ ಬಂದರೆ ೪೦ ಚೀಲ ಅಕ್ಕಿ ಬದಲಿಗೆ ಕೇವಲ ೧೫ ರಿಂದ ೨೦ ಚೀಲ ಇಳುವರಿ ಬರಲು ಸಾಧ್ಯವಾಗುತ್ತದೆ ಆದ್ದರಿಂದ ಆ. ೧ ರೊಳಗೆ ನೀರು ಹರಿಸಿದರೆ ಭತ್ತ ಬೆಳೆಗಾರರಿಗೆ ಅನುಕೂಲವಾಗುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ಮಳಲ್ಕೆರೆ ಸದಾನಂದ,ಅನೇಕಲ್ಲು ವಿಜಯಕುಮಾರ್, ಹೆಚ್.ಎನ್ ಗುರುನಾಥ್,ಹೊಸಹಳ್ಳಿ ಶಿವಮೂರ್ತಿ,ತುರ್ಚಘಟ್ಟದ ಪುಟ್ಟರಾಜು,ಗೋಣಿವಾಡದ ಪಿ.ಎ ನಾಗರಾಜಪ್ಪ ಉಪಸ್ಥಿತರಿದ್ದರು.