ಭತ್ತದ ಹಳೇಯ ಬಾಕಿ ಪಾವತಿಗೆ ಸಲಹೆ

ಹೊನ್ನಾಳಿ.ಡಿ.೨೭; ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಭತ್ತದ ಹಲ್ಲಿಂಗ್‌ನ ಹಳೆಯ ಬಾಕಿಯನ್ನು ಶೀಘ್ರವೇ ಪಾವತಿ ಮಾಡಬೇಕು ಎಂದು ಹೊನ್ನಾಳಿಯ ಶ್ರೀ ಮಂಜುನಾಥ ರೈಸ್ ಮಿಲ್ಸ್ ಮಾಲೀಕರಾದ ಎಚ್.ಎ. ಉಮಾಪತಿ ಅವರು ಬಿ.ಎಚ್. ಅನಿಲ್‌ಕುಮಾರ್ ಅವರಿಗೆ ವಿನಂತಿಸಿದರು.ತಮ್ಮ ಇಲಾಖೆಗೆ ಸಂಬಂಧಿಸಿದಂತೆ  ದಾವಣಗೆರೆಗೆ ಆಗಮಿಸಿದ್ದ ರಾಜ್ಯ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಕಾರ್ಯದರ್ಶಿ ಬಿ.ಎಚ್. ಅನಿಲ್‌ಕುಮಾರ್ ಅವರಿಗೆ ಮನವಿಪತ್ರ ಸಲ್ಲಿಸಿ ಅವರು ಮಾತನಾಡಿದರು.ಅನೇಕ ತಿಂಗಳುಗಳಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಭತ್ತದ ಹಲ್ಲಿಂಗ್‌ನ ಬಾಕಿ ಪಾವತಿಯಾಗದೇ ಉಳಿದಿದೆ. ಈ ಬಾಕಿ ಹಣವನ್ನು ಪಾವತಿ ಮಾಡಬೇಕು ಎಂಬುದು ಅಕ್ಕಿ ಗಿರಣಿ ಮಾಲೀಕರ ಮನವಿಯಾಗಿದೆ. 2020-21ನೇ ಸಾಲಿನ ರೈತರ ಭತ್ತ ಖರೀದಿ ಹಾಗೂ ಮಿಲ್ಲಿಂಗ್ ಅನ್ನು ಶೀಘ್ರವೇ ಪ್ರಾರಂಭಿಸುವಂತೆಯೂ ಒತ್ತಾಯಿಸಲಾಗಿದೆ ಎಂದು ಅವರು ತಿಳಿಸಿದರು.ಮನವಿ ಸ್ವೀಕರಿಸಿದ ರಾಜ್ಯ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಕಾರ್ಯದರ್ಶಿ ಬಿ.ಎಚ್. ಅನಿಲ್‌ಕುಮಾರ್ ಮಾತನಾಡಿ, ರೈತರಿಂದ ಎಂಎಸ್‌ಪಿ ಭತ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ ಸಂಗ್ರಹಿಸಿ ಇಟ್ಟುಕೊಳ್ಳಲು ಕೇಂದ್ರ ಸರಕಾರ ತಿಳಿಸಿದೆ. ಈ ಬಗ್ಗೆ ಒತ್ತು ನೀಡಬೇಕು ಎಂದು ಅಕ್ಕಿ ಗಿರಣಿ ಮಾಲೀಕರಿಗೆ ಕರೆಯಿತ್ತರು. ರೈತರ ಅನುಕೂಲಕ್ಕಾಗಿ 10 ಲಕ್ಷ ಟನ್ ಭತ್ತವನ್ನು ಖರೀದಿಸಲು ಕೇಂದ್ರ ಸರಕಾರ ಅನುಮತಿ ನೀಡಿದೆ ಎಂದು ಹೇಳಿದರು.ರಾಜ್ಯಕ್ಕೆ ಬೇಕಾಗುವ ಪಡಿತರ ಅಕ್ಕಿಯನ್ನು ಎಂಎಸ್‌ಪಿ ಭತ್ತದ ಮೂಲಕ ರೈತರಿಂದ ಖರೀದಿಸಿ ಮಿಲ್‌ಗಳಿಗೆ ಭತ್ತವನ್ನು ನೀಡಲಾಗುವುದು ಎಂದು ತಿಳಿಸಿದರು.ಜಿಲ್ಲಾ ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ರಾಜ್ಯ ರೈಸ್ ಮಿಲ್ ಮಾಲೀಕರ ಸಂಘದ ಮುಖಂಡ ಕೋಗುಂಡಿ ಬಕ್ಕೇಶಪ್ಪ, ರೈಸ್ ಮಿಲ್ ಮಾಲೀಕರಾದ ಚಂದ್ರಪ್ಪ, ಅನಿಲ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.