ಭತ್ತದ ಖರೀದಿ ಕೇಂದ್ರ ಶೀಘ್ರ ಆರಂಭಿಸಲು ಓತ್ತಾಯ

ಗಂಗಾವತಿ ನ.20: ಎಪಿಎಂಸಿ ಮಾರುಕಟ್ಟೆಯಲ್ಲಿ ಭತ್ತದ ದರ ಸಂಪೂರ್ಣವಾಗಿ ಕುಸಿದಿದ್ದು, ಶೀಘ್ರ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಕನಕಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಎಪಿಎಂಸಿ ನಿರ್ದೇಶಕ ರೆಡ್ಡಿ ಶ್ರೀನಿವಾಸ ಒತ್ತಾಯಿಸಿದರು.
ಅವರು ಗುರುವಾರ ಮಧ್ಯಾಹ್ನ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರೈತರು ಕಳೆದ ವರ್ಷ ಒಂದು ಎಕರೆಗೆ 50ರಿಂದ 60 ಚೀಲ ಭತ್ತ ಬೆಳೆದಿದ್ದರು. ಆದರೆ, ಭತ್ತಕ್ಕೆ ನಾನಾ ರೋಗ ಆವರಿಸಿದ ಪರಿಣಾಮ ಇಳುವರಿ ಸಂಪೂರ್ಣ ಕುಸಿದಿದೆ. ಭತ್ತಕ್ಕೆ ರೋಗ ಹೆಚ್ಚಿದಂತೆ ಖರ್ಚು-ವೆಚ್ಚ ಸಹ ಹೆಚ್ಚಾಗಿದೆ. ಅಲ್ಲದೆ ಭತ್ತಕ್ಕೆ ಬೆಲೆ ಇಲ್ಲದಂತೆ ಆಗಿದೆ. ಕೇವಲ 950 ರೂ.(75 ಕೆ.ಜಿ.) ದರವಿದೆ. ಇದರಿಂದ ರೈತರು ಕಣ್ಣಿರು ಸುರಿಸುವಂತಾಗಿದೆ ಎಂದರು.
ಈಗಾಗಲೇ ಭತ್ತಕೆ 1800 ಬೆಂಬಲ ಬೆಲೆ ಘೋಷಣೆ ಮಾಡಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ಖರೀದಿ ಕೇಂದ್ರ ಆರಂಭಿಸಲು ಹಿಂದೇಟು ಹಾಕುತ್ತಿವೆ. ಭತ್ತದ ಖರೀದಿ ಕೇಂದ್ರ ಶೀಘ್ರ ಆರಂಭಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಮಹ್ಮದ್ ರಫೀ, ತಾಪಂ ಸದಸ್ಯ ಪಕೀರಯ್ಯ, ಮುಖಂಡ ರಮೇಶ ಕಲ್ಗುಡಿ, ಪ್ರಸಾದ ಜಂಗಮರ ಕಲ್ಲುಡಿ, ಸತ್ಯನಾರಾಯಣ, ಯಮನೂರಪ್ಪ, ವೆಂಕೋಬ ಮೇಲಸಕ್ರಿ, ವೀರನಗೌಡ ಸೇರಿದಂತೆ ಇತರರಿದ್ದರು.