ಭತ್ತದ ಕೆಸರುಗದ್ದೆಗೆ ಇಳಿದು ರಾಹುಲ್ ನಾಟಿ

ಸೋನಿಪತ್ (ಹರಿಯಾಣ):ಜು.೮: ಕೆಲ ದಿನಗಳ ಹಿಂದೆ ಬೈಕ್ ರಿಪೇರಿ ಮಾಡಿ ಗಮನ ಸೆಳೆದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇಂದು ಹರಿಯಾಣದಲ್ಲಿ ಗದ್ದೆಗೆ ಇಳಿದು ರೈತರ ಜೊತೆ ಕೆಲ ಸಮಯ ಕಳೆದಿದ್ದಾರೆ.
ಅಲ್ಲದೇ, ಭತ್ತದ ಕೃಷಿಯ ಬಗ್ಗೆ ರೈತರೊಂದಿಗೆ ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡರು. ದೆಹಲಿಯಿಂದ ಹಿಮಾಚಲ ಪ್ರದೇಶದ ಶಿಮ್ಲಾಗೆ ಹೊರಟಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹರಿಯಾಣದ ಸೋನಿಪತ್ ಜಿಲ್ಲೆಯ ಬರೋಡಾದ ವಿವಿಧ ಗ್ರಾಮಗಳಲ್ಲಿ ರೈತರೊಂದಿಗೆ ಬೆರೆತರು. ಬರೋಡಾ ಮತ್ತು ಮದೀನಾದಲ್ಲಿ ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತರೊಂದಿಗೆ ನಾಟಿ ಕೆಲಸದಲ್ಲಿ ತೊಡಗಿಸಿಕೊಂಡರು.
ಭತ್ತದ ಗದ್ದೆಯಲ್ಲಿ ಟ್ರ್ಯಾಕ್ಟರ್ ಓಡಿಸಿ ಟ್ರ್ಯಾಕ್ಟರ್ ಮೂಲಕ ಗದ್ದೆಯನ್ನು ಹದ ಮಾಡುತ್ತಿದ್ದ ರೈತನ ಜೊತೆಗೆ ರಾಹುಲ್ ಗಾಂಧಿ ಟ್ರ್ಯಾಕ್ಟರ್ ಚಲಾಯಿಸಿದರು. ಕೆಸರುಗದ್ದೆಯಲ್ಲಿ ಭತ್ತವನ್ನು ನಾಟಿ ಕೂಡ ಮಾಡಿದರು.
ಇದಾದ ಬಳಿಕ ಭತ್ತ ಕೃಷಿಯ ಬಗ್ಗೆ ರೈತರಿಂದಲೇ ಮಾಹಿತಿ ಪಡೆದುಕೊಂಡು ಅಲ್ಲಿಂದ ತೆರಳಿದರು.ಬೈಕ್ ಮೆಕ್ಯಾನಿಕ್ ಆಗಿದ್ದ ರಾಹುಲ್: ಇದಕ್ಕೂ ಮೊದಲು ಕೆಲ ದಿನಗಳ ಹಿಂದೆ ದೆಹಲಿಯ ಕರೋಲ್ ಬಾಗ್ ಮಾರುಕಟ್ಟೆಯಲ್ಲಿ ರಾಹುಲ್ ಗಾಂಧಿ ಬೈಕ್ ಮೆಕ್ಯಾನಿಕ್‌ಗಳ ಜೊತೆಯಲ್ಲಿ ತಾವೂ ಬೈಕ್ ರಿಪೇರಿ ಮಾಡಿ ಗಮನ ಸೆಳೆದಿದ್ದರು. ಮೆಕ್ಯಾನಿಕ್‌ಗಳ ಜತೆಗೆ ಮಾತನಾಡಿ, ಅವರ ಕಷ್ಟ – ಸುಖಗಳ ಬಗ್ಗೆ ವಿಚಾರಿಸಿದ್ದರು. ಸ್ವತಃ ರಾಹುಲ್ ಸ್ಕ್ರೂಡ್ರೈವರ್‌ನಿಂದ ಬೈಕ್‌ನ ಪ್ಯಾಚ್ ಬಿಗಿಗೊಳಿಸಿದ್ದರು. ಅದರ ಚಿತ್ರಗಳನ್ನೂ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದರು.