ಭತ್ತದ ಕೃಷಿಕನಿಗೆ ಮಳೆಯ ಕಾಟ – ಅಸಮತೋಲನದ ಬದುಕಿನ ಆತಂಕ

ಮೇಘಾ ಪಾಲೆತ್ತಾಡಿ

ಪುತ್ತೂರು, ಜ.೯- ಜಿಲ್ಲೆಯಾದ್ಯಂತ ಕಳೆದ ಭಾನುವಾರದಿಂದ ಸಂಜೆ ಹೊತ್ತು ನಿರಂತರವಾಗಿ ಸುರಿಯುತ್ತಿರುವ ಅಕಾಲಿಕ ಮಳೆಯ ಕಾಟಕ್ಕೆ ಕೃಷಿ ವರ್ಗ ಬೆದರಿ ಹೋಗಿದೆ. ಭತ್ತದ ಬೆಳೆಗಾರರು ಮಳೆಯಿಂದಾಗಿ ಕಂಗಾಲಾಗಿದ್ದಾರೆ.

ಭುಮಿಗೆ ತಂಪು ನೀಡಿದ ಮಳೆ ಕೃಷಿಕನ ಬದುಕಿಗೆ ಮಾತ್ರ ಆತಂಕ ಸೃಷ್ಟಿಸಿದೆ.

ಜನವರಿ ತಿಂಗಳಲ್ಲಿ ಮಳೆಗಾಲವನ್ನು ನೆನಪಿಸುತ್ತಿರುವ ವರುಣನ ಅವಕೃಪೆ ಬತ್ತದ ಕೃಷಿಕರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೊರೊನಾ ಕಳೆದ ೧೦ ತಿಂಗಳಿನಿಂದ ಜನತೆಯನ್ನು ಕಾಡುತ್ತಿರುವ ನಡುವೆ ಹಳ್ಳಿಯ ಬದುಕಿನಲ್ಲಿ ಸ್ವಲ್ಪಮಟ್ಟಿನ ನೆಮ್ಮದಿ ಕಾಣುತ್ತಿದ್ದ ಈ ಬೇಸಾಯಗಾರರು ಮಳೆಯ ನರ್ತನದಿಂದ ಸಮಸ್ಯೆಗೆ ಸಿಲುಕಿದ್ದಾರೆ. ಸಾಮಾನ್ಯವಾಗಿ ಜನವರಿ ತಿಂಗಳಲ್ಲಿ ಅಪರೂಪವಾಗಿ ಒಂದೆರಡು ಮಳೆ ಬರುವ ಸಂಪ್ರದಾಯವಿತ್ತು. ಆದರೆ ಈ ಬಾರಿ ಹಳೆಯ ಸಂಪ್ರದಾಯವನ್ನು ದೂರೀಕರಿಸಿರುವ ವರುಣ ಮಳೆಯನ್ನು ನಿರಂತರವಾಗಿ ಸುರಿಸುತ್ತಿದ್ದಾನೆ. ಕಳೆದ ೫ ದಿನಗಳಿಂದ ಸಂಜೆಹೊತ್ತು ಗುಡುಗು ಸಹಿತ ಮಳೆಯಾಗುತ್ತಿದ್ದು, ಜಿಲ್ಲೆಯ ಜೀವನದಿಗಳಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದೆ.

ಕಳೆದ ೨ ತಿಂಗಳ ಹಿಂದೆ ಸುಗ್ಗಿ ನೇಜಿ ಮಾಡಿರುವ ರೈತರ ಗದ್ದೆಯಲ್ಲಿ ಇದೀಗ ಪೈರು ತೆನೆ ಬಿಡುತ್ತಿದೆ. ಈ ಹೊತ್ತಿನಲ್ಲಿ ಮಳೆಯಾದರೆ ಮಳೆ ನೀರು ತೆನೆಯೊಳಗೆ ಹೋಗುವುದರಿಂದ ಕಾಳಿನ ಬದಲು ಜಳ್ಳು (ಹೊಟ್ಟು) ಕಾಳು ಬೆಳವಣಿಗೆಯಾಗುತ್ತದೆ. ಇದರಿಂದ ಭತ್ತದ ಇಳುವರಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ. ಮಳೆಯ ನಿರಂತರತೆಯಿಂದ ರೋಗಗಳು ಪ್ರಾರಂಭಗೊಳ್ಳುತ್ತವೆ. ರೈತನ ಪಾಲಿಗೆ ಕೈಗೆ ಬಂದದ್ದೂ ಬಾಯಿಗೆ ಸಿಗದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಒಂದೆರಡು ಮಳೆ ಬಂದರೆ ಇಂತಹ ಸ್ಥಿತಿ ನಿರ್ಮಾಣವಾಗುವುದಿಲ್ಲ. ಆದರೆ  ಈ ಬಾರಿಯ ಮಳೆ ಹಲವು ದಿನಗಳಿಂದ ಸುರಿಯುತ್ತಿರುವ ಕಾರಣ ಇದೀಗ ರೈತ ವರ್ಗ ಕಂಗಾಲಾಗಿದೆ.

ಪ್ರಸ್ತುತ ಭತ್ತದ ಬೆಳೆಯಲ್ಲಿ ಹೆಚ್ಚಿನ ಇಳುವರಿ ಕಾಣುವ ಖುಷಿಯಲ್ಲಿದ್ದ ಭತ್ತದ ಬೇಸಾಯಗಾರರು ವರುಣನ ಅಕಾಲಿಕ ಕೃತ್ಯದಿಂದ ಹೈರಾಣಗೊಂಡಿದ್ದಾರೆ.

ಅಡಕೆ ಬೆಳೆಯ ನಡುವೆ ಸಾಂಪ್ರದಾಯಿಕವಾದ ಭತ್ತದ ಬೆಳೆಯನ್ನು ಹಳ್ಳಿಯಲ್ಲಿ ಉಳಿಸಿಕೊಂಡು ಬಂದಿರುವ ಕೃಷಿಕ ವರ್ಗ ಹಲವು ಸಂಕಷ್ಟಗಳ ನಡುವೆ ಬೇಸಾಯ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿಗೆ ಹಳ್ಳಿಯ ತೋಡುಗಳಲ್ಲಿ ನೀರಿನ ಹರಿವು ಕಡಿಮೆಯಾಗುವ ಕಾರಣ ಮಣ್ಣಿನ ಕಟ್ಟಗಳನ್ನು ನಿರ್ಮಿಸಿಕೊಂಡು ಭತ್ತದ ಬೆಳೆಯನ್ನು ನಡೆಸುತ್ತಿದ್ದಾರೆ. ಆದರೆ ಈ ಬಾರಿ ಮಾತ್ರ ನೀರಿನ ಮಳೆಯ ಕಾರಣ ಹೆಚ್ಚಾದರೂ ಮಳೆ ಅನೀತಿಯಿಂದ ಇಳುವರಿಗೆ ಹೊಡೆತ ಉಂಟಾಗಿದೆ. ಈಗಾಗಲೇ ತೋಡುಗಳಿಗೆ ನಿರ್ಮಿಸಿರುವ ಮಣ್ಣಿನ ಕಟ್ಟಗಳು ನೆರೆಯ ನೀರಿಗೆ ಕೊಚ್ಚಿಕೊಂಡು ಹೋಗಿವೆ. ಇದರ ಜತೆಗೆ ರೈತನ ಬದುಕು ಕೂಡಾ ಕೊಚ್ಚಿಕೊಂಡು ಹೋಗುವ ಅಪಾಯವನ್ನು ವರುಣ ಸೃಷ್ಟಿಸಿರುವಂತೆ ಭಾಸವಾಗುತ್ತಿದೆ.

ಪ್ರಾಕೃತಿಕ ಅಸಮತೋಲನದಿಂದ ಉಂಟಾಗುತ್ತಿರುವ ಈ ಅಕಾಲಿಕ ಮಳೆ ಅಡಕೆ ಮತ್ತು ಭತ್ತದ ಕೃಷಿಕರ ಬದುಕನ್ನು ಅಸಮತೋಲನಕ್ಕೀಡು ಮಾಡಿದೆ. ಅಂಗಳದಲ್ಲಿ ಒಣಗಿಹೋಗಿದ್ದ ಮೊದಲ ಹಂತದ ಅಡಕೆ ಕೊಯ್ಲು ಮಳೆಯಲ್ಲಿ ನೆಂದು ಹೋಗಿದೆ. ಈ ಅಡಕೆ ತನ್ನ ಗುಣಮಟ್ಟವನ್ನು ಕಳೆದುಕೊಂಡಿದೆ. ಭತ್ತದ ಪೈರು ಗದ್ದೆಯಲ್ಲಿ ದ್ದರೂ ತೆನೆಗಳು ಮಳೆಯ ಕಾರಣದಿಂದ ಅಪ್ರಯೋಜಕವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ಹಿನ್ನಲೆಯಲ್ಲಿ ಕಂಪೆನಿಗಳ ಕೆಲಸಗಳನ್ನು ಕಳೆದುಕೊಂಡು ಊರಲ್ಲಿ ಬಂದು ಭತ್ತ ಹಾಗೂ ಅಡಕೆ ಕೃಷಿಗೆ ಕಚ್ಚಿಕೊಂಡು ಲಕ್ಷಾಂತರ ಯುವಕ-ಯುವತಿಯರೂ ಮತ್ತೆ ಖಾಸಗಿ ಕಂಪೆನಿಗಳತ್ತ ಮುಖ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಈ ಅಕಾಲಿಕ ಮಳೆ ರೈತ ವರ್ಗದ ಬದುಕನ್ನು ಮತ್ತಷ್ಟು ಸಂಕಟಕ್ಕೆ ಈಡು ಮಾಡಿದೆ.

  • ಮಳೆಯಿಂದ ಸಮಸ್ಯೆ
  • ತೆನೆ ಬಿಡುತ್ತಿರುವಾಗ ಸುರಿಯುತ್ತಿರುವ ಈ ಮಳೆಯಿಂದ ಭತ್ತದ ಬೆಳೆಗೆ ಹೆಚ್ಚಿನ ಸಮಸ್ಯೆ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಮಳೆ ಬರುವುದರಿಂದ ಭತ್ತದ ಇಳುವರಿಗೆ ಪೆಟ್ಟು ಬೀಳುತ್ತದೆ. ಇದರಿಂದ ನಮ್ಮ ಬದುಕಿಗೆ ಸಂಕಷ್ಟ ಉಂಟಾಗುವ ಸ್ಥಿತಿ ಉಂಟಾಗಿದೆ. ಅಕಾಲಿಕವಾಗಿರುವ ಈ ಮಳೆ ಬೇಸಾಯ ಮಾಡುವ ರೈತರ ಪಾಲಿಗೆ ದೊಡ್ಡ ಕಾಟ ನೀಡುತ್ತಿದೆ.
  • – ರಾಮಣ್ಣ ಗೌಡ ಮಣಿಕ್ಕಳ