ಭತ್ತಕ್ಕೆ 1 ಕ್ವಿಂಟಾಲ್‍ಗೆ 2500 ರೂ. ಬೆಂಬಲ ಬೆಲೆ ನೀಡಿ’

ಗಂಗಾವತಿ ನ.21: ಕಾರಟಗಿ ಹಾಗೂ ಕನಕಗಿರಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ
‘ಭತ್ತಕ್ಕೆ 1 ಕ್ವಿಂಟಾಲ್‍ಗೆ 2500 ರೂ. ಬೆಂಬಲ ಬೆಲೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಹೊರ ವಲಯದಲ್ಲಿರುವ ಮಿನಿವಿಧಾನಸೌಧದಲ್ಲಿ ಶನಿವಾರ ತಹಸೀಲ್ದಾರ್ ಎಂ.ರೇಣುಕಾ ಅವರಿಗೆ ಮನವಿ ಸಲ್ಲಿಸಲಾಯಿತು.
ಭತ್ತಕ್ಕೆ ಬೆಂಬಲ ಬೆಲೆಯನ್ನು ಕ್ವಿಂಟಾಲ್‍ಗೆ 2500 ರೂ. ಹೆಚ್ಚಿಸಬೇಕು. ಮೂರು ಹೋಬಳಿ ಕೇಂದ್ರ ಸ್ಥಾನದಲ್ಲಿ ಭತ್ತ ಖರೀದಿ ಕೇಂದ್ರ ತಕ್ಷಣ ಆರಂಭಿಸಬೇಕು. ಭತ್ತ ಕೊಯ್ಯುವ ಯಂತ್ರದ ದರ 1900 ರೂ. ಕ್ಕೆ ಮೀರದಂತೆ ತಹಸೀಲ್ದಾರ್ ಆದೇಶಿಸಬೇಕು. ವಿಳಂಬ ಮಾಡಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಯಿತು.
ಮಾಜಿ ಎಂಪಿ ಶಿವರಾಮೆಗೌಡ ಮಾತನಾಡಿ, ಸರ್ಕಾರ ಬೆಂಬಲ ಬೆಲೆಯಡಿ ಭತ್ತಕ್ಕೆ 2500 ರೂ. (ಕ್ವಿಂಟಾಲ್) ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ಕನಕಗಿರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಎಪಿಎಂಸಿ ನಿರ್ದೇಶಕ ರೆಡ್ಡಿ ಶ್ರೀನಿವಾಸ ಮಾತನಾಡಿ, ಗಂಗಾವತಿ, ಕನಕಗಿರಿ ಹಾಗೂ ಕಾರಟಗಿ ಹೋಬಳಿ ವ್ಯಾಪ್ತಿಯಲ್ಲಿ ಈ ಮುಂಗಾರು ಹಂಗಾಮಿನಲ್ಲಿ ಭತ್ತದ ಬೆಳೆದ ರೈತರು ಭತ್ತದ ದರ ಕುಸಿತದಿಂದ ಕಂಗಾಲಾಗಿದ್ದಾರೆ. ಭತ್ತ ಬೆಳೆಯಲು ಎಕರೆಗೆ ರೈತರು 40 ಸಾವಿರ ರೂ. ಖರ್ಚು ಮಾಡಿದ್ದಾರೆ. ಆದರೆ, ಭತ್ತಕ್ಕೆ ವಿವಿಧ ರೋಗ ಆವರಿಸಿದ ಪರಿಣಾಮ 50 ಚೀಲ ಬೆಳೆಯುತ್ತಿದ್ದ ಭೂಮಿ ಈಗ ಕೇವಲ 20 ರಿಂದ 25 ಚೀಲ ಫಸಲು ಬರುತ್ತಿದ್ದು, ಇಂತಹ ಸಂಕಷ್ಟದ ವೇಳೆ ದರವು ಕಡಿಮೆಯಾಗಿದ್ದು, ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದರು.
ಕನಕಗಿರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಎಪಿಎಂಸಿ ನಿರ್ದೇಶಕ ರೆಡ್ಡಿ ಶ್ರೀನಿವಾಸ, ಕಾರಟಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಂಬಣ್ಣ ನಾಯಕ, ಮಾಜಿ ಸಂಸದ ಶಿವರಾಮೆ ಗೌಡ, ಗಂಗಾವತಿ ನಗರಸಭೆ ಸದಸ್ಯ ಮನೋಹರ ಸ್ವಾಮಿ ಹಿರೇಮಠ, ತಾಪಂ ಸದಸ್ಯ ಪಕೀರಯ್ಯ, ಮುಖಂಡ ರಮೇಶ ಕಲ್ಗುಡಿ, ಪ್ರಸಾದ ಜಂಗಮರ ಕಲ್ಲುಡಿ, ಸತ್ಯನಾರಾಯಣ, ಯಮನೂರಪ್ಪ, ವೆಂಕೋಬ ಮೇಲಸಕ್ರಿ, ವೀರನಗೌಡ, ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.