ಭತ್ತಕ್ಕೆ ರೋಗದಬಾಧೆ; ಇಳುವರಿ ಕುಂಠಿತ

ಬಳ್ಳಾರಿ ನ 22 : ಜಿಲ್ಲೆಯ ಭತ್ತ ಬೆಳೆದ ರೈತರು ರೋಗದ ಬಾದೆಯಿಂದ ತತ್ತರಿಸಿದ್ದಾರೆ. ಒಂದು ಕಡೆ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಸತತವಾಗಿ ಕುಸಿಯುತ್ತಿದ್ದರೆ ಮತ್ತೊಂದಡೆ ಕಟಾವಿಗೆ ಬಂದುನಿಂತಿರುವ ಭತ್ತದ ಬೆಳೆಗೆ ರೋಗದಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬಾರದೇ ಭತ್ತ ಬೆಳೆದ ರೈತ ಕಂಗಾಲಾಗಿದ್ದಾನೆ.
ರಾಜ್ಯ ಸರ್ಕಾರ ಭತ್ತಕ್ಕೆ 1880 ರೂ.ಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದೆ. ಆದರೂ ಮಾರುಕಟ್ಟೆಯಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತಲೂ ಕಡಿಮೆ ಬೆಲೆ ಇದೆ. ಪೆರತಿ ಕ್ವಿಂಟಲ್ ಭತ್ತ 1200- 1250 ರೂ. ಇದೆ. ಬೆಲೆ ಕುಸಿತದಿಂದಾಗಿ ಈಗಾಗಲೇ ರೈತರು ತತ್ತರಿಸಿದ್ದಾರೆ. ಸಾವಿರಾರು ರೂಪಾಯಿ ವೆಚ್ಚಮಾಡಿ ಕಳೆದ ನಾಲ್ಕು ತಿಂಗಳಿಂದ ಕಷ್ಟಬಿಟ್ಟು ಬೆಳೆಸಿದ ಭತ್ತ ಈಗ
ಕಟಾವಿಗೆ ಬಂದು ನಿಂತಿರುವ ಸಂದರ್ಭದಲ್ಲಿ ಸಪ್ಪೆರೋಗ, ಕೊಂಡಿರೋಗ, ಊದಿನಕಡ್ಡಿ ರೋಗ ಕಾಣಿಸಿಕೊಂಡಿವೆ. ಬುಡದಲ್ಲಿ ಹುಳುಗಳು ಬಿದ್ದಿರುವುದರಿಂದ ಬೆಳೆದ ಬೆಳೆ ತೆನೆ ಬಿಟ್ಟಿಲ್ಲ. ಇನ್ನು ಸಪ್ಪೆ/ಕೊಂಡಿ ರೋಗವೂ ಕಾಣಿಸಿಕೊಂಡಿದ್ದು, ಬೆಳೆಯಲ್ಲಿ ಭತ್ತದ ತೆನೆಗಳು ಕಾಣಿಸುತ್ತವೆಯಾದರೂ, ಅವುಗಳಲ್ಲಿ ಕಾಳು ಇರುವುದಿಲ್ಲ. ಇದರಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬಂದಿಲ್ಲ.
ಪ್ರತಿವರ್ಷ ಎಕರೆಗೆ 30 ರಿಂದ 35 ಕ್ವಿಂಟಲ್ ಬೆಳೆಯುತ್ತಿದ್ದ ಭತ್ತ ಈ ಬಾರಿ ರೋಗಬಾಧೆಯಿಂದ ಕೇವಲ 10 ರಿಂದ 15 ಕ್ವಿಂಟಾಲ್‍ನಷ್ಟು ಮಾತ್ರ ಬಂದಿದ್ದು, ಬೆಲೆ ಕುಸಿತದಿಂದ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ ಭತ್ತ ಬೆಳೆದ ರೈತರಿಗೆ ಗಾಯದ ಮೇಲೆ ಬರೆ ಎಳೆದಿದೆ.
ಜಿಲ್ಲೆಯ ಸಿರುಗುಪ್ಪ ತಾಲೂಕಿನ ಎಂ.ಸೂಗೂರು, ರುದ್ರಪಾದ, ಮುದ್ದಟನೂರು, ಹಾವಿನಾಳು, ಕಂಪ್ಲಿ ತಾಲೂಕಿನ ಮಣ್ಣೂರು ಸೇರಿ ನೆರೆಯ ಇತರೆ ಗ್ರಾಮಗಳಲ್ಲಿ ಸುಮಾರು 15 ಸಾವಿರ ಎಕರೆಯಲ್ಲಿ ರೈತರು ಭತ್ತ ಬೆಳೆದಿದ್ದಾರೆ. ಪ್ರತಿವರ್ಷ ಎರಡು ಭತ್ತ ಬೆಳೆ ಪಡೆಯುತ್ತಾರೆ. ಆದರೆ, ಈ ಬಾರಿ ನಿರೀಕ್ಷೆಗೂ ಮೀರಿ ಮಳೆಯಾಗಿದೆ. ಇದರಿಂದ ಭೂಮಿಯಲ್ಲಿ ತೇವಾಂಶವೂ ಹೆಚ್ಚಾಗಿದ್ದು, ಹಿಂದೆಂದೂ ಕಾಣದ ಊದಿನಕಡ್ಡಿ, ಕೊಂಡಿ, ಸಪ್ಪೆರೋಗಳು ಈಬಾರಿ ಆವರಿಸಲು ಕಾರಣವಾಗಿದೆ. ಇದರಿಂದ ಭತ್ತದ ಬುಡದಲ್ಲಿ ಹುಳುಗಳು ಬಿದ್ದಿದ್ದು, ಭತ್ತದ ಇಳುವರಿ ಕಡಿಮೆಯಾಗಿದೆ.
ಔಷಧ ಬಳಸಿದರೂ ಪ್ರಯೋಜನವಿಲ್ಲ;
ಭತ್ತವನ್ನು ಕಾಡುತ್ತಿರುವ ರೋಗವನ್ನು ಹೋಗಲಾಡಿಸಲು ಒಂದು ಲೀಟರ್ 13 ಸಾವಿರ ರೂ. ಬೆಲೆಯ ಫೆಕ್ಸ್‍ತಾನ್, 16 ಸಾವಿರ ರೂ. ಬೆಲೆಯ ಫ್ರೇಮ್ ಕ್ರಿಮಿನಾಶಕಗಳನ್ನು ಸಿಂಪಡಿಸಲಾಗಿದೆ. ತ್ರಿಜಿ ಗುಳಿಗೆಗಳನ್ನು ಸಹ ಹಾಕಲಾಗಿದೆ. ಬೆಳೆಗೆ ಸಿಂಪಡಿಸುವ ಕ್ರಿಮಿನಾಶಕ ಬುಡದಲ್ಲಿರುವ ಹುಳುಗಳವರೆಗೆ ಹೋಗಲ್ಲ. ಹೀಗಾಗಿ ಭತ್ತವನ್ನು ಕಾಡುತ್ತಿರುವ ರೋಗ ಕಡಿಮೆಯಾಗುತ್ತಿಲ್ಲ. ಬೆಳೆಗೆ ರೋಗ ಆವರಿಸಿರುವುದರಿಂದ ಈ ಬಾರಿ ಖರ್ಚು ಸಹ ಹೆಚ್ಚಾಗಿದ್ದು, ಸರ್ಕಾರ ನೆರವಿಗೆ ಬಾರದಿದ್ದಲ್ಲಿ ರೈತರು ನಿರೀಕ್ಷೆಗೂ ಮೀರಿ ನಷ್ಟ ಎದುರಿಸಲಿದ್ದಾರೆ.
ಸರ್ಕಾರವೇ ಖರೀದಿಸಬೇಕು;
ರಾಜ್ಯ ಸರ್ಕಾರ ಭತ್ತಕ್ಕೆ ಕನಿಷ್ಠ ಬೆಂಬಲ 1880 ರೂ.ಗಳನ್ನು ನಿಗದಿಪಡಿಸಿದೆ. ಆದರೂ, ಸಹ ಮುಕ್ತ ಮಾರುಕಟ್ಟೆಯಲ್ಲಿ ಭತ್ತಕ್ಕೆ ಸೂಕ್ತ ಬೆಲೆಯಿಲ್ಲ. 1200-1250ಕ್ಕೆ ಕುಸಿದಿದೆ. ಹೀಗಾಗಿ ರಾಜ್ಯ ಸರ್ಕಾರವೇ ಎಲ್ಲೆಡೆ ಭತ್ತ ಖರೀದಿ ಕೇಂದ್ರವನ್ನು ತೆರೆಯಬೇಕು. ಯಾವುದೇ ಶರತ್ತು ವಿಧಿಸದೆ ರೈತರು ಬೆಳೆದ ಎಲ್ಲ ಭತ್ತವನ್ನು ಸರ್ಕಾರವೇ ಖರೀದಿಸುವ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂಬುದು ರೈತರ ಆಗ್ರಹವಾಗಿದೆ.