ಭತಮುರ್ಗೆ ಸಾಹಿತ್ಯ ಯುವ ಪೀಳಿಗೆಗೆ ಮಾರ್ಗದರ್ಶಿ

ಬೀದರ್: ನೈತಿಕ ಹಾಗೂ ಮಾನವೀಯ ಮೌಲ್ಯಗಳನ್ನು ಒಳಗೊಂಡ ಡಾ. ಚಂದ್ರಪ್ಪ ಭತಮುರ್ಗೆ ಅವರ ಸಾಹಿತ್ಯ ಯುವ ಪೀಳಿಗೆಗೆ ಮಾರ್ಗದರ್ಶಿಯಾಗಿದೆ ಎಂದು ಚಿಂತಕ ಮಾಣಿಕರಾವ್ ಪಾಂಚಾಳ ಅಭಿಪ್ರಾಯಪಟ್ಟರು.
ಜಿಲ್ಲಾ ಆಡಳಿತ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಪ್ರಯುಕ್ತ ಡಾ. ಚಂದ್ರಪ್ಪ ಭತಮುರ್ಗೆ ಅವರಿಗೆ ನಗರದ ಚಂದ್ರಪ್ಪ ಗೌರಶೆಟ್ಟಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಭತಮುರ್ಗೆ ಅವರು ಹುಟ್ಟೂರು, ತಾಯಿ- ಮಕ್ಕಳು, ಅಣ್ಣ-ತಮ್ಮಂದಿರ ಬಾಂಧವ್ಯ, ಧಾರ್ಮಿಕ ಶ್ರದ್ಧೆ, ದಾನದ ಮಹತ್ವ, ಸಾಧಕರ ಸಂಘರ್ಷದ ಪಯಣವನ್ನು ತಮ್ಮ ಕೃತಿಗಳಲ್ಲಿ ಬಿಡಿಸಿಟ್ಟಿದ್ದಾರೆ ಎಂದು ಹೇಳಿದರು.
ನನ್ನೂರು ನನ್ನವ್ವ ಭಾಗ-1, ಭಾಗ-2, ಅಣ್ಣನ ನೆನಪು, ಚೆನ್ನಮಲ್ಲೇಶ್ವರ ತ್ಯಾಗಿಗಳು ಇಟಗಿ, ದಾನಶೀಲ ಚಂದ್ರಶೀಲ ಗೌರಶೆಟ್ಟಿ, ಆದರ್ಶ ಉದ್ಯಮಿ ಸಂಗಯ್ಯ ರೇಜಂತಲ್ ಅವರ ಮೌಲಿಕ ಕೃತಿಗಳಾಗಿವೆ ಎಂದು ನುಡಿದರು.
ಈ ಭಾಗದ ಅನೇಕ ಸಾಧಕರ ಜೀವನ ಚರಿತ್ರೆಯನ್ನು ಕೃತಿ ರೂಪದಲ್ಲಿ ಹೊರ ತಂದ ಶ್ರೇಯಸ್ಸು ಭತಮುರ್ಗೆ ಅವರಿಗೆ ಸಲ್ಲುತ್ತದೆ ಎಂದು ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮಣ ಪೂಜಾರಿ ಹೇಳಿದರು.
ನನ್ನೂರು ನನ್ನವ್ವ ಕೃತಿಯು ಊರು ಹಾಗೂ ತಾಯಿಯ ಮೇಲೆ ಅವರಿಗಿರುವ ಪ್ರೀತಿಯನ್ನು ವ್ಯಕ್ತಗೊಳಿಸಿದೆ. ಕೃತಿಗೆ ಕರ್ನಾಟಕ ಜಾನಪದ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ. ಭತಮುರ್ಗೆ ಅವರು ನನ್ನೂರು ನನ್ನವ್ವ ಭಾಗ-3 ಕೂಡ ಸಿದ್ಧಗೊಳಿಸಿರುವುದು ಸಂತಸದ ಸಂಗತಿ ಎಂದರು.
ಜೀವನ ಚರಿತ್ರೆ ಸಾಹಿತ್ಯ ಪ್ರಕಾರದಲ್ಲಿ ಹೆಸರು ಮಾಡಿರುವ ಭತಮುರ್ಗೆ ಅವರು ಅನೇಕ ಯಶಸ್ವಿ ಪುರುಷರನ್ನು ಜಿಲ್ಲೆ ಹಾಗೂ ರಾಜ್ಯಕ್ಕೆ ಪರಿಚಯಿಸಿದ್ದಾರೆ. ಯುವಕರನ್ನು ಸಾಧನೆಗೆ ಪ್ರೇರೇಪಿಸುವ ಕೆಲಸ ಮಾಡಿದ್ದಾರೆ. ಜಿಲ್ಲಾಡಳಿತ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸಂತಸ ಉಂಟು ಮಾಡಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಚಂದ್ರಪ್ಪ ಗೌರಶೆಟ್ಟಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ರಮೇಶ ಪಾಟೀಲ ಚಟ್ನಳ್ಳಿ ಹೇಳಿದರು.
ಡಾ. ಚಂದ್ರಪ್ಪ ಭತಮುರ್ಗೆ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಶಶಿಕಾಂತ ಪಂತು, ಶಾಂತಕುಮಾರ ರಗಟೆ, ಬಸವರಾಜ ಹೆಗ್ಗೆ, ಚಂದ್ರಕಲಾ ಕೆ., ನಿರ್ಮಲಾ ಕುಲಕರ್ಣಿ, ಜ್ಯೋತಿ ಪಾಟೀಲ, ಧೂಳಪ್ಪ, ಶಿವಪುತ್ರ ಶಿನ್ನೂರ, ಎಸ್.ಕೆ. ಸಾಥಿ, ಅಬ್ದುಲ್ ಗಫಾರ್, ನಾಗನಾಥ ಕೊಳ್ಳಾ ಉಪಸ್ಥಿತರಿದ್ದರು.
ಎಸ್.ಎಂ. ಐನಾಪುರ ನಿರೂಪಿಸಿದರು. ಈರಣ್ಣ ಕೆ. ವಂದಿಸಿದರು.