ಭಜನಾ ಕಾರ್ಯಕ್ರಮ

ಧಾರವಾಡ,ನ25 : ಭಗವಂತನ ಹತ್ತಿರಕ್ಕೆ ಕೊಂಡ್ಯೊಯುವ ಏಕೈಕ ಮಾರ್ಗವೆಂದರೆ ಭಜನೆ. ಬದುಕಿನ ಬವಣೆಯನ್ನು ಭಗವಂತನಲ್ಲಿ ಅರಿಕೆ ಮಾಡಿಕೊಳ್ಳಲು ಭಕ್ತರು ಹುಡುಕಿಕೊಂಡ ದಾರಿ ಭಜನೆ ಎಂದು ಮಕ್ಕಳ ಸಾಹಿತಿ ನಿವೃತ್ತ ಮುಖ್ಯಶಿಕ್ಷಕ ಕೆ. ಎಚ್. ನಾಯಕ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, 67 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಾಡ ಹಬ್ಬದ ತಿಂಗಳ ಕಾರ್ಯಕ್ರಮದ ನಿಮಿತ್ತ ಆಯೋಜಿಸಿದ್ದ `ಭಜನಾ ಕಾರ್ಯಕ್ರಮಕ್ಕೆ’ ಚಾಲನೆ ನೀಡಿ ಮಾತನಾಡಿ, ಭಜನೆ ಪುರಾಣ ಕಾಲದಿಂದಲೂ ಇದೆ. ಶ್ರೀರಾಮನನ್ನು ಒಲಿಸಿಕೊಳ್ಳಲು ಮಾರುತಿ ಎರಡೂ ಕೈ ಮೇಲೆತ್ತಿ ರಾಮನಾಮ ಭಜನೆ ಮಾಡುತ್ತಿದ್ದ. ಈ ಭಜನಾ ಸಂಪ್ರದಾಯ ಹಳ್ಳಿ, ಹಳ್ಳಿಗಳ, ಮನೆ ಮನೆಗಳಲ್ಲಿ ನಡೆಯುತ್ತಿತ್ತು. ಇತ್ತೀಚೆಗೆ ನೇಪತ್ಯಕ್ಕೆ ಸರಿಯುವ ಅನೇಕ ಜಾನಪದ ಕಲೆಯಲ್ಲಿ ಭಜನೆಯೂ ಒಂದಾಗಿದೆ. ಈ ಭಜನಾ ಸಂಪ್ರದಾಯವನ್ನು ಇಂದಿನ ಯುವಕರಲ್ಲಿ ಬೆಳೆಸುವ ಪ್ರಯತ್ನ ಆಗಬೇಕಿದೆ. ಕನಕದಾಸ, ಪುರಂದರದಾಸ, ಸಂತ ಶಿಶುನಾಳ ಶರೀಫರ ತತ್ವಪದಗಳನ್ನು ಜನಮಾನಸಕ್ಕೆ ಮುಟ್ಟಿಸುವ ಕಾರ್ಯ ಭಜನೆಯಿಂದ ಆಗಿದೆ. ಇಂಥ ಕಲೆಗಳನ್ನು ಉಳಿಸಿ, ಬೆಳೆಸುವಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿ ನಿವೃತ್ತ ಶಿಕ್ಷಕ ರಂಗಕಲಾವಿದ ಎಸ್. ಎಂ. ದಾನಪ್ಪಗೌಡರ ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ರೈತರು ತಮ್ಮ ದಿನನಿತ್ಯದ ಕಾಯಕದ ಜೊತೆಗೆ ಭಜನೆ ಮಾಡುವುದನ್ನು ರೂಢಿಸಿಕೊಂಡಿದ್ದರಿಂದ ಕೆಲವು ಭಜನಾ ತಂಡಗಳು ಇಂದಿಗೂ ಇವೆ ಎಂದು ಹೇಳದರು.
ಶ್ರೀ ಬಸವೇಶ್ವರ ಭಜನಾ ಸಂಘ, ಹುಲಿಕೇರಿ, ಸದ್ಗುರು ಮಡಿವಾಳೇಶ್ವರ ಭಜನಾ ಮಂಡಳ, ನಿಗದಿ, ಶ್ರೀ ಮಲ್ಲಿಕಾರ್ಜುನ ಭಜನಾ ಸಂಘ, ಉಪ್ಪಿನ ಬೆಟಗೇರಿ, ಬಸವೇಶ್ವರ ಭಜನಾ ಸಂಘ, ನಿಗದಿ ತಂಡಗಳು ಸೊಗಸಾಗಿ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.
ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.
ಕಾರ್ಯಕ್ರಮದಲ್ಲಿ ಕೃಷ್ಣಮೂರ್ತಿ ಬೆಳೆಗೆರೆ, ಪ್ರಭು ಕುಂದರಗಿ, ಎಂ.ಎಂ. ಚಿಕ್ಕಮಠ, ಮಡಿವಾಳಪ್ಪ ಶಿರಿಯಣ್ಣವರ, ಕೆ.ಎಂ.ಅಂಗಡಿ, ಚನಬಸಪ್ಪ ಅವರಾಧಿ, ಎಚ್.ಡಿ. ನದಾಫ್, ಬಿ.ಜಿ. ಬಾರ್ಕಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.