ಭಗೀರಥರ ಶ್ರದ್ಧೆ ಭಕ್ತಿ ನಿಷ್ಠೆಯನ್ನ ಅಳವಡಿಸಿಕೊಳ್ಳಬೇಕು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.15: ತನ್ನ ತಪಸ್ಸಿನ ಮೂಲಕ ಗಂಗಾಮಾತೆಯನ್ನು ಭೂಲೋಕಕ್ಕೆ ಕರೆತಂದ ಆದರ್ಶಪುರುಷ ಭಗೀರಥ ಎಂದು ನಯನಜಕ್ಷತ್ರಿಯ ಸಮಾಜದ ತಾಲ್ಲೂಕು ಅಧ್ಯಕ್ಷ ಶಿವಪ್ಪ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಮಿನಿ ವಿಧಾನಸೌಧದಲ್ಲಿ ಶ್ರೀ ಭಗೀರಥ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಗೀರಥ ಮಹಾರಾಜನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಸಾವಿರಾರು ವರ್ಷಗಳ ಐತಿಹಾಸಿಕ ಹಿನ್ನಲೆ ಇರುವ ಭಗೀರಥರ ಶ್ರದ್ದೆ, ಭಕ್ತಿ ನಿಷ್ಠೆ ಮತ್ತು ಸತತ ಪ್ರಯತ್ನಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರಯತ್ನ ನಿರಂತರವಾಗಿರಬೇಕು. ಆಗ ಮಾತ್ರ ಫಲ ಸಿಗಲಿದೆ ಎಂಬುದನ್ನು ಜಗತ್ತಿಗೆ ತಿಳಿಸಿಕೊಟ್ಟ ಆದರ್ಶಪುರುಷ ಭಗೀರಥ. ನಿಷ್ಠಯಿಂದ ಹಿಡಿದ ಕೆಲಸವನ್ನು ಪ್ರಾಮಾಣಿಕವಾಗಿ ಕೈಗೊಂಡಾಗ ಮಾತ್ರ ಯಶಸ್ಸು ನಮಗೆ ದೊರೆಯುತ್ತದೆ. ಭಗೀರಥರು ಭಕ್ತಿಯಿಂದ ತಪಸ್ಸನ್ನು ಮಾಡುವ ಮೂಲಕ ಅಖಂಡ ಭಾರತಕ್ಕೆ ಶಿವನ ಆಶೀರ್ವಾದದ ಮೂಲಕ ಗಂಗೆಯನ್ನು ಕರೆತಂದ ಪ್ರಸಂಗವನ್ನು ಮುಂದಿನ ತಲೆಮಾರಿಗೂ ತಿಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ. ಆದ್ದರಿಂದ ಇಂದಿನ ಯುವಪೀಳಿಗೆ ಅವರ ಆದರ್ಶ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಭಗೀರಥರ ಹೆಸರನ್ನು ಚಿರಸ್ಥಾಯಿಯಾಗಿ ಮಾಡಬೇಕು ಎಂದರು.
ತಹಶೀಲ್ದಾರ್ ಡಾ.ಎಸ್.ವಿ.ಲೋಕೇಶ್ ಮಾತನಾಡಿ ಮಹಾನ್ ವ್ಯಕ್ತಿಗಳ ಸಾಧನೆಯ ಹಿಂದೆ ಅವರ ತ್ಯಾಗ, ಪರಿಶ್ರಮ, ಅನುಭಗಳು ಅಡಕವಾಗಿರುತ್ತವೆ. ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವ ಮಹಾನ್ ನಾಯಕರುಗಳು ಕೇವಲ ಒಂದು ಸಮುದಾಯಕ್ಕೆ ಸೇರಿದವರಲ್ಲ. ಇಡೀ ವಿಶ್ವಕ್ಕೇ ಅವರ ಆದರ್ಶಗಳು ಅನುಕರಣೀಯ. ಭಗೀರಥ ಮಹರ್ಷಿಗಳ ತ್ಯಾಗ ಅವರ ಸೇವಾ ಮನೋಭಾವನೆಗಳು ನಮ್ಮೆಲ್ಲರಿಗೂ ಮಾದರಿಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಿಡಿಪಿಓ ಅರುಣ್ ಕುಮಾರ್, ಬಿಸಿಎಂ ಅಧಿಕಾರಿ ಎಂ.ಎನ್.ವೆಂಕಟೇಶ್, ಗ್ರೇಡ್-2 ತಹಶೀಲ್ದಾರ್ ಲೋಕೇಶ್, ಶಿಕ್ಷಣ ಸಂಯೋಜಕಿ ನೀಲಾಮಣಿ, ಕಸಬಾ ರಾಜಸ್ವನಿರೀಕ್ಷಕ ಜ್ಞಾನೇಶ್, ಗ್ರಾಮಾಭಿವೃದ್ದಿ ಅಧಿಕಾರಿ ಜಗದೀಶ್, ಆಸರೆ ಸಮಾಜಸೇವಾ ಸಂಸ್ಥೆಯ ಹೆಚ್.ಬಿ.ಮಂಜುನಾಥ್, ಅಮೃತರಾಜ್ ಸೇರಿದಂತೆ ಸಮುದಾಯದ ಮುಖಂಡರುಗಳು ಹಾಜರಿದ್ದರು.