ಭಗವಾನ ಮಹಾವೀರರ ಜಯಂತಿ ಆಚರಣೆ

ಹುಬ್ಬಳ್ಳಿ,ಏ21: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ ಭಗವಾನ್ ಮಹಾವೀರರ ಜಯಂತಿಯನ್ನು ಆಚರಿಸಲಾಯಿತು. ವಿಭಾಗಿಯ ನಿಯಂತ್ರಣಧಿಕಾರಿ ಎಚ್. ರಾಮನಗೌಡರ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜೈನ ಧರ್ಮದ 24ನೇ ತೀರ್ಥಂಕರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಪಣೆ ಮಾಡಿದರು.
ನಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾತನಾಡಿ, ಮಹಾವೀರರು ಮೂಲತಃ ಈಗಿನ ಬಿಹಾರದ ವೈಶಾಲಿಯ ಯುವರಾಜರಾಗಿದ್ದರು.ರಾಜ ಸಿದ್ದಾರ್ಥ ಹಾಗೂ ರಾಣಿ ತ್ರಿಸಲಾ ರವರ ಮಗನಾದ ಅವರ ಮೂಲ ಹೆಸರು ವರ್ಧಮಾನ್ ಎಂಬುದಾಗಿತ್ತು. 30ನೇ ವಯಸ್ಸಿನಲ್ಲಿ ಸತ್ಯದ ಹುಡುಕಾಟದಲ್ಲಿ ಸಿಂಹಾಸನವನ್ನು ತೊರೆದರು.
ಇಂದ್ರಿಯಗಳ ಮೇಲೆ ಅಸಾಧಾರಣ ನಿಯಂತ್ರಣ ಹೊಂದಿ 12 ವರ್ಷಗಳ ಕಾಲ ವನವಾಸದಲ್ಲಿ ಕಠಿಣ ತಪಸ್ಸು ಮಾಡಿದರು. ಅದಕ್ಕಾಗಿ ಮಹಾವೀರ ಎಂಬ ಹೆಸರನ್ನು ಪಡೆದರು. ಅಹಿಂಸೆ (ಯಾವುದೇ ಜೀವಿಗೂ ತೊಂದರೆ ಮಾಡದಿರುವುದು), ಸತ್ಯ (ಪ್ರಾಮಾಣಿಕತೆ), ಆಸ್ತೇಯ(ಕಳ್ಳತನ ಮಾಡದಿರುವಿಕೆ), ಪರಿಶುದ್ಧತೆ ಮತ್ತು ಬಾಂಧವ್ಯದ ಬೋಧನೆಗಳು ಭಗವಾನ್ ಮಹಾವೀರರ ಜೀವನದ ಕೇಂದ್ರ ಬಿಂದುವಾಗಿತ್ತು. ಅವರ ಬೋಧನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.
ಸಹಾಯಕ ಕಾರ್ಮಿಕ ಕಲ್ಯಾಣ ಅಧಿಕಾರಿ ಆರ್. ಎಂ. ರಾಜೇಂದ್ರ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಅಂಕಿ ಸಂಖ್ಯಾಧಿಕಾರಿ ಸದಾನಂದ ಒಡೆಯರ, ಸಹಾಯಕ ಸಂಚಾರ ವ್ಯವಸ್ಥಾಪಕ( ಪ್ರ) ಐ.ಜಿ.ಮಾಗಾಮಿ, ಪ್ರಶಾಂತ, ವೀರೇಶ, ನಾಗರಾಜ, ಉಮೇಶ ಮತ್ತಿತರರು ಇದ್ದರು.