ಭಗವಾನ್ ಮಹಾವೀರರ 47 ಅಡಿ ಎತ್ತರದ ಮೂರ್ತಿ ಕೆತ್ತನೆಗೆ 350 ಟನ್ ತೂಕದ ಏಕಶಿಲೆ

ಬಸವಕಲ್ಯಾಣ,ಮೇ.26-ಮಹಾರಾಷ್ಟ್ರದ ನಾಸಿಕ್ ನಲ್ಲಿ ಭಗವಾನ್ ಮಹಾವೀರರ 47 ಅಡಿ ಎತ್ತರದ ಮೂರ್ತಿ ಕೆತ್ತನೆಗೆ ಸಾಗಿಸುತ್ತಿದ್ದ 350 ಟನ್ ತೂಕದ ಏಕಶಿಲೆಯನ್ನು ಹೊತ್ತ ವಾಹನ ಬಸವಕಲ್ಯಾಣ ಮಾರ್ಗದಿಂದ ಸಂಚರಿಸುತ್ತಿರುವುದನ್ನು ತಿಳಿದು ಜೈನ್ ಸಮುದಾಯದ ಪ್ರಮುಖರು ಸ್ಥಳಕ್ಕೆ ಆಗಮಿಸಿ ಜ್ಯೋತಿ ಬೆಳಗಿಸುವುದರ ಮೂಲಕ ಸ್ವಾಗತ ಕೋರಿದರು.
ಬೆಂಗಳೂರಿನಿಂದ ಹೈದ್ರಾಬಾದ ನ ರಾಷ್ಟ್ರೀಯ ಹೆದ್ದಾರಿ ಮೂಲಕ ನಾಸಿಕ ನಗರಕ್ಕೆ 350 ಟನ್ ತೂಕದ ಏಕಶಿಲೆಯನ್ನು ಹೊತ್ತು ಸಾಗಿಸುತ್ತಿದ್ದ ಕಂಟೇನರ್ ಮಂಗಳವಾರ ಮಧ್ಯಾಹ್ನ ಬಸವಕಲ್ಯಾಣದ ಸಸ್ತಾಪುರ ಬಂಗಲಾ ಪ್ರವೇಶಿಸುತ್ತಿದ್ದಂತೆಯೇ ಬಸವಕಲ್ಯಾಣದ ಗ್ರೇಡ್-2 ತಹಶೀಲ್ದಾರ ಪಲ್ಲವಿ, ಬೆಳಕೆರೆ ಅವರ ನೇತೃತ್ವದಲ್ಲಿ ಜೈನ್ ಸಮುದಾಯದ ಪ್ರಮುಖರ ಜೊತೆ ವಿನೋದ ಬೆಳಕೆರೆ, ನಾಗೇಶ ಬೆಳಕೆರೆ, ಜಿತ್ತು ಚಿಂದೆ, ಅಜಿತ್ ಮೂಳೆ, ರವಿ ಬೆಳಕೆರೆ ಅವರು ವಾಹನವನ್ನು ಸ್ವಾಗತಿಸಿದರು.
ನಾಸಿಕ್ ನಲ್ಲಿ ಭಗವಾನ್ ಮಹಾವೀರರ 47 ಅಡಿ ಎತ್ತರದ ಮೂರ್ತಿ ಕೆತ್ತನೆಗೆ ಬೆಂಗಳೂರಿನ ಕಲ್ಲಿನ ಗಣಿಯಿಂದ 350 ಟನ್ ತೂಕದ ಏಕಶಿಲೆಯನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಈ ಏಕಶಿಲೆಯನ್ನು ಲೋಡ್ ಮಾಡಲು ಸುಮಾರು ಮೂರು ತಿಂಗಳು ಸಮಯ ಪಡೆದಿದೆ. ಈ ಶಿಲೆ ನಾಸಿಕ್ ನಗರ ತಲುಪಲು ಇನ್ನೂ ಒಂದು ತಿಂಗಳು ಸಮಯ ಬೇಕಾಗುತ್ತದೆ. ಇದನ್ನು ಸಾಗಿಸಲು ಒಂದು ಕೋಟಿ ರೂಪಾಯಿ ವೆಚ್ಚ ತಗುಲಿದೆ ಎಂದು ಕಂಟೇನರ್ ಚಾಲಕರು ಮಾಹಿತಿ ನೀಡಿದರು.