
ವಿಜಯಪುರ:ಮೇ.6: ಭಗವಾನ್ ಬುದ್ಧರ ತತ್ವ ಮತ್ತು ಸಿದ್ಧಾಂತಗಳು ಹಾಗೂ ಬೋಧನೆಗಳನ್ನು ಅವಲೋಕಿಸಿದಾಗ ಅವರು ವಿಶ್ವಮಾನವರ ಸಾಲಿನಲ್ಲಿ ನಿಲ್ಲುತ್ತಾರೆ. ವೈರಾಗ್ಯವನ್ನು ತಾಳಿದ ಭಗವಾನ್ ಬುದ್ಧರು ಅರಮನೆಯನ್ನು ತ್ಯಜಿಸಿ ಸಾಮಾನ್ಯ ಜೀವನವನ್ನು ಮಾಡಿದರು. ಇಂದು ವಿಶ್ವದಲ್ಲಿ ಅನೇಕ ಜನರು ಬೌದ್ಧ ಧರ್ಮವನ್ನು ಸ್ವೀಕರಿಸತ್ತಿದ್ದಾರೆ ಅದಕ್ಕೆ ಕಾರಣ ಭಗವಾನ್ ಬುದ್ಧರ ತತ್ವಗಳು ಹಾಗೂ ಪವಿತ್ರ ಚಿಂತನೆಗಳು. ಎಂದು ವಿಶ್ರಾಂತ ಶಿಕ್ಷಣಾಧಿಕಾರಿ ಎಸ್ ಎಲ್ ಇಂಗಳೇಶ್ವರ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಇವರು ಹಮ್ಮಿಕೊಂಡಿದ್ದ ಭಗವಾನ್ ಬುದ್ಧರ ಬುದ್ಧ ಪೂರ್ಣಿಮೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್ ಎಲ್ ಇಂಗಳೇಶ್ವರ ಶ್ರೇಷ್ಠ ತತ್ವಜ್ಞಾನಿ, ಧಾರ್ಮಿಕ ಶಿಕ್ಷಕ, ಸಮಾಜ ಸುಧಾರಕನಾದ ಗೌತಮ ಬುದ್ಧನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ರುದ್ರಗೌಡ ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ರೋಹಿಣಿ ಜತ್ತಿ ಮಾತನಾಡಿ ಭಗವಾನ್ ಬುದ್ಧನ ತಂದೆ ಶುಧ್ಧೋದನ ತಾಯಿ ಮಾಯಾದೇವಿ. ಬುದ್ಧನು ಕ್ಷತ್ರಿಯ ಕುಟುಂಬದಲ್ಲಿ ಜನಿಸಿದನು, ಗುರು ವಿಶ್ವಾಮಿತ್ರ ರಿಂದ ಶಿಕ್ಷಣ ಪಡೆದು, ವೇದ-ಉಪನಿಷತ್ತುಗಳು ಹಾಗೂ ಸಮರ ಕಲೆಗಳಲ್ಲಿ ಪರಿಣಿತನಾಗಿದ್ದನು. 16 ನೇ ವಯಸ್ಸಿನಲ್ಲಿ ಯಶೋದೆ ಎಂಬ ರಾಜಕುಮಾರಿಯನ್ನು ಮದುವೆಯಾಗಿದ್ದನು. ಭಗವಾನ್ ಬುದ್ಧ ಆಧ್ಯಾತ್ಮಿಕ ಜೀವನಕ್ಕೆ ಮಹತ್ವ ನೀಡಿದರು.
ಸತ್ಯ ಮತ್ತು ಶಾಂತಿಯ ಹುಡುಕಾಟದಲ್ಲಿ ಬೋದ್ಗಯಾ ಎಂಬ ಅರಣ್ಯದಲ್ಲಿ ಆರು ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿ ಜ್ಞಾನವನ್ನು ಪಡೆದುಕೊಂಡ. ಭಗವಾನ್ ಬುದ್ಧರು ಅಹಿಂಸೆಯನ್ನು ಬೆಂಬಲಿಸಿದರು, ದಿನನಿತ್ಯ ಧ್ಯಾನವನ್ನು ಮಾಡಿ ಆತ್ಮ ವಿಮರ್ಶೆ ಮಾಡಿಕೊಳ್ಳುತ್ತಿದ್ದರು. ಆಸೆಯೇ ದುಃಖಕ್ಕೆ ಮೂಲ ಎಂದು ಹೇಳಿ ಅವರ ತತ್ವಾದರ್ಶಗಳು ನಮಗೆ ಅನುಕರಣೀಯ ಮತ್ತು ಸಾರ್ವಕಾಲಿಕ ಎಂದರು. ವಿಶ್ರಾಂತ ಉಪನ್ಯಾಸಕ ಕೆ ಜಿ ಕೋಟ್ಯಾಳ, ಶಾಂತವೀರ ಪ. ಪೂ ಕಾಲೇಜಿನ ಉಪನ್ಯಾಸಕ ಬಸವರಾಜ ಕುಂಬಾರ, ಸಾಹಿತಿ ಗೀತಾ ಕುಲಕರ್ಣಿ ಬುದ್ಧ ಪೂರ್ಣಿಮೆ ಕುರಿತು ಮಾತನಾಡಿದರು.
ಬೊಮ್ಮನಹಳ್ಳಿಯ ಗವಿಮಠದ ಪೂಜ್ಯ ಶ್ರೀ ಷ ಬ್ರ ಗುರುಶಾಂತ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಸಿಂಪೀರ ವಾಲೀಕಾರ ಅಧ್ಯಕ್ಷತೆಯನ್ನು ವಹಿಸಿದ್ದರು. ಇದೇ ಸಂದರ್ಭದಲ್ಲಿ ಎಸ್ ಎಲ್ ಇಂಗಳೇಶ್ವರ ಅವರ ಅನುಭವಾಮೃತ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಮುಖ್ಯ ಅತಿಥಿ ಕೆ ಸುನಂದಾ, ಹಾಗೂ ನಗರ ಘಟಕದ ಅಧ್ಯಕ್ಷೆ ಸಂಗೀತಾ ಮಠಪತಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ಕೌವಲಗಿ ಪ್ರಾರ್ಥಿಸಿದರು. ಪದಾಧಿಕಾರಿ ಅಭಿಷೇಕ ಚಕ್ರವರ್ತಿ ಕಾರ್ಯಕ್ರಮ ನಿರೂಪಿಸಿದರು. ರಾಜೇಸಾಬ ಶಿವನಗುತ್ತಿ ಸ್ವಾಗತಿಸಿದರು. ಶಿವಾನಂದ ಸಿಂಹಾಸನಮಠ ವಂದಿಸಿದರು.
ಡಾ ಆನಂದ ಕುಲಕರ್ಣಿ, ಅರ್ಜುನ ಶಿರೂರ, ಅಹಮ್ಮದ್ ವಾಲೀಕಾರ, ಸುರೇಶ ಜತ್ತಿ, ಶಿವಾನಂದ ಶಿಂಹಾಸನಮಠ, ಪರಶುರಾಮ ಬಗಲಿ,ಯುವರಾಜ ಚೋಳಕೆ, ಮಲ್ಲಿಕಾರ್ಜುನ ಬಿರಾದಾರ, ಕಾಶಿನಾಥ ಹೊಸೂರ, ಎಂ ಬಿ ಸಿಂಧೆ, ಪ್ರದೀಪ ನಾಯ್ಕೋಡಿ, ಬಸವರಾಜ ವಂಟಗೋಡಿ ಮುಂತಾದವರು ಉಪಸ್ಥಿತರಿದ್ದರು.