ಭಗವದ್ಗೀತೆ : ರಾಜ ವಿದ್ಯೆ


ಸತ್ತೂರು,ಮಾ.4: ಭಗವಂತನ ಸರ್ವೋತ್ತಮತ್ವವನ್ನು ತಿಳಿಯುವ, ಮೋಕ್ಷಕ್ಕೆ ಕಾರಣವಾದ ಸಾಧನೆಗೆ ಅಧ್ಯಾತ್ಮ ವಿದ್ಯೆ ರಾಜ ವಿದ್ಯೆ. ಅಶುಭಗಳಿಂದ ಮತ್ತು ಹುಟ್ಟು ಸಾವುಗಳಿಂದ ಬಿಡುಗಡೆಯಾಗುವ ವಿದ್ಯೆಯೆ ರಾಜ ವಿದ್ಯೆ. ಪವಿತ್ರತಮವಾದ, ಉತ್ತಮವಾದ ರಹಸ್ಯದಲ್ಲಿ ರಹಸ್ಯವಾದ ಪ್ರಧಾನವಾದ ಶ್ರೇಷ್ಠ ವಿದ್ಯೆ, ರಾಜ ವಿದ್ಯೆ. ಅವ್ಯಯ, ನಾಶವಿಲ್ಲದ ಗೌಪ್ಯವಾದ ,ಶ್ರೇಷ್ಠ ವಿದ್ಯೆಯೆ ರಾಜ ವಿದ್ಯೆ ಎಂದು ಹಳೆ ಹುಬ್ಬಳ್ಳಿಯ ಸತ್ಯಬೋಧ ಸ್ವಾಮಿಗಳ ಮಠದ ಪಂ. ಭಾರತಿ ರಮಣ ಆಚಾರ್ಯ ಗಣಾಚಾರಿ ತಿಳಿಸಿದರು.
ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಉದಯಗಿರಿಯಲ್ಲಿರುವ ಡಿ.ಕೆ.ಜೋಶಿ ಅವರ ನಿವಾಸದಲ್ಲಿ ಜರುಗಿದ ಶ್ರೀಮದ್ ಭಗವದ್ಗೀತಾ ಅಭಿಯಾನ ನವಮೋಧ್ಯಾಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಭಗವಂತ ಚೇತನಾ-ಚೇತನಾತ್ಮಕ ಪ್ರಪಂಚದಲ್ಲಿ, ಪರಮಾತ್ಮ ಯಾರಿಗೂ ಕಾಣದ ಅವ್ಯಕ್ತನಾಗಿದ್ದಾನೆ. ಜಗತ್ತಿಗೆ ಅವನೇ ಆಧಾರ ಮತ್ತು ಯಾರಿಗೂ ಯಾವುದೇ ತರಹದ ದೋಷ, ಅಸೂಯೆ, ಮತ್ಸಾರ್ಯವಿಲ್ಲದವರು ಹಾಗೂ ಶ್ರದ್ಧೆ ,ವಿಶ್ವಾಸ, ವಿಶೇಷ ಭಕ್ತಿ, ಭಗವಂತನ ವಿಶೇಷ ಜ್ಞಾನ ಇದ್ದವರಿಗೆ ಈ ವಿದ್ಯೆಯನ್ನು ಅರಿಯಲು ಯೋಗ್ಯತೆ ಹಾಗೂ ಅಧಿಕಾರ ಬರುತ್ತದೆ. ಭಗವಂತನ ಜ್ಞಾನ , ವಿಶೇಷ ಜ್ಞಾನ ಅವನ ವ್ಯಾಪ್ತತ್ವ ಪ್ರಕೃತಿಯಲ್ಲಿರುವ ಸಕಲ ಜೀವರಾಶಿಗಳಲ್ಲಿ ಇದ್ದು ರಕ್ಷಣೆ ಮಾಡುತ್ತಾನೆ, ಮುಂತಾದ ವಿಷಯಗಳನ್ನು ಸಮಸ್ತ ಸಜ್ಜನರಿಗೆ ಅರ್ಜುನನ ನೆಪ ಮಾಡಿಕೊಂಡು ವಿಸ್ತಾರವಾಗಿ ಶ್ರೀಕೃಷ್ಣ ಪರಮಾತ್ಮ ಉಪದೇಶ ಮಾಡಿದ್ದಾನೆ ಎಂದು ಸುಂದರವಾಗಿ ಉದಾಹರಣೆಗಳೊಂದಿಗೆ ವರ್ಣನೆ ಮಾಡಿದರು. ಕಾರ್ಯಕ್ರಮದಲ್ಲಿ ನಾರಾಯಣಿ ಭಜನಾ ಮಂಡಳಿಯಿಂದ ಭಜನೆ ಹಾಗೂ ಸದಸ್ಯರಿಂದ ಹರಿವಾಯು ಗುರುಗಳ ಸ್ತೋತ್ರ ಪಾರಾಯಣ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ರಮೇಶ ಅಣ್ಣಿಗೇರಿ, ಸಂಜೀವ ಜೋಶಿ, ಕೇಶವ ಕುಲಕರ್ಣಿ, ಆನಂದ ದೇಶಪಾಂಡೆ , ಹನುಮಂತ ಪುರಾಣಿಕ್, ಹನುಮಂತ ಬಿಜಾಪುರ, ಬದ್ರಿನಾಥ್ ಬೆಟಿಗೇರಿ, ಪ್ರಕಾಶ ದೇಸಾಯಿ, ಗಿರೀಶ ಪಾಟೀಲ, ಉದಯ ದೇಶಪಾಂಡೆ, ರಾಘವೇಂದ್ರ ಮುಂಡಗೋಡ ಪಾಲ್ಗೊಂಡಿದ್ದರು.