ಭಗವದ್ಗೀತಾ ಅಭಿಯಾನದ ಸಮರ್ಪಣಾ ಕಾರ್ಯಕ್ರಮ

ರಾಯಚೂರು,ಡಿ.೨೬-ಮಾನವ ಜನ್ಮದಲ್ಲಿ ಮಾತ್ರ ಜ್ಞಾನವನ್ನು ಪಡೆಯಲು ವಿಶೇಷ ಅವಕಾಶವಿದೆ. ಜ್ಞಾನಾರ್ಜನೆಯಿಂದಲೇ ವ್ಯಕ್ತಿಯ ಬೆಳವಣಿಗೆಯಾಗಲು ಸಾಧ್ಯ ಎಂದು ಶ್ರೀ ರಾಮಕೃಷ್ಣ ಆಶ್ರಮದ ಸಂಚಾಲಕರಾಗಿರುವ ವೇಣುಗೋಪಾಲ ಹೇಳಿದರು.
ಅವರು ಶೃಂಗೇರಿ ಶ್ರೀ ಶಂಕರ ಮಠದಲ್ಲಿ ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಶಿರಸಿಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರ ಆದೇಶ ಹಾಗೂ ಮಾರ್ಗದರ್ಶನದಂತೆ ರಾಯಚೂರು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಭಗವದ್ಗೀತಾ ಅಭಿಯಾನದ ಸಮರ್ಪಣಾ ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಅಭಿಯಾನದ ಜಿಲ್ಲಾ ಪ್ರಧಾನ ಸಂಚಾಲಕರಾಗಿರುವ ಶ್ರೀಮತಿ ವಿದ್ಯಾ ಜಗನ್ನಾಥ ಅವರ ನೇತೃತ್ವದಲ್ಲಿ ಭಗವದ್ಗೀತೆಯ ಮೂರನೇ ಅಧ್ಯಾಯವನ್ನು ಸಾಮೂಹಿಕವಾಗಿ ಪಠಿಸುವುದರೊಂದಿಗೆ ಸಮರ್ಪಣೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ. ಕಲಾವತಿ ಬದ್ರಿ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು ಭಗವದ್ಗೀತೆಯ ಚಿಂತನೆ ಕುರಿತು ಉಪನ್ಯಾಸ ನೀಡುತ್ತಾ ಧರ್ಮ ಮತ್ತು ಕರ್ಮಗಳನ್ನು ದೃಷ್ಟಾಂತಗಳೊಂದಿಗೆ ವಿವರಿಸಿದರು.
ಅಭಿಯಾನದ ಜಿಲ್ಲಾ ಅಧ್ಯಕ್ಷರಾಗಿರುವ ಡಾ. ಆನಂದ ಫಡ್ನಿಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅಭಿಯಾನದಲ್ಲಿ ಅನೇಕರು ಸಕ್ರಿಯವಾಗಿ ಪಾಲ್ಗೊಂಡು ಅಭಿಯಾನವನ್ನು ಯಶಸ್ವಿಗೊಳಿಸಿದ್ದಾರೆ. ಇದರಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಿರುವುದು ವಿಶೇಷ ಎಂದರು.
ಇದೇ ಸಂದರ್ಭದಲ್ಲಿ ಮಕ್ಕಳಿಗೆ ಛದ್ಮವೇಷ, ಭಾಷಣ, ಭಗವದ್ಗೀತೆ ಕಂಠಪಾಠ, ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಪ್ರಾರಂಭದಲ್ಲಿ ಕೃಷ್ಣಮೂರ್ತಿ ಹೆಬ್ಬಸೂರು ಅವರು ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕು. ಅಪೇಕ್ಷಾ ಎಸ್ ಎನ್ ಸರ್ಕಿಲ್ ಪ್ರಾರ್ಥಿಸಿದರು. ಕು. ಅನಿರುದ್ಧ ಪಟವಾರಿ ಪ್ರಾರ್ಥನಾ ನೃತ್ಯ ಪ್ರಸ್ತುತಪಡಿಸಿದರು. ಚಂದ್ರಕಾಂತ ವೈದ್ಯ ವಂದಿಸಿದರು. ಡಿ. ಕೋಮಲಾ ನಿರೂಪಿಸಿದರು.
ಸಂಚಾಲಕರಾಗಿರುವ ಜಾನಕಿ ಪುರೋಹಿತ, ಶೃಂಗೇರಿ ಶ್ರೀ ಶಂಕರ ಮಠದ ಜಿಲ್ಲಾ ವಿಶೇಷ ಪ್ರತಿನಿಧಿಗಳಾಗಿರುವ ಟಿ.ಜಿ. ರಾಘವೇಂದ್ರ ರಾವ್, ವೀಣಾ ಪಟವಾರಿ, ಶಶಿರೇಖಾ, ಪಂಕಜಾ, ನರಹರಿ, ಸಿ. ವಸಂತ ರಾವ್, ಶ್ರೀಪಾದ ರಾವ್ ದೇಸಾಯಿ ಸೇರಿದಂತೆ ಅಭಿಯಾನದ ಸರ್ವ ಸದಸ್ಯರು, ಭಕ್ತವೃಂದ ಉಪಸ್ಥಿತರಿದ್ದರು.

ಫೋಟೋ:೨೬ಅರ್‍ಸಿಅರ್೧-ನಗರದ ಶಂಕರ ಮಠದಲ್ಲಿ ಭಗವದ್ಗೀತಾ ಸಮರ್ಪಣಾ ಕಾರ್ಯಕ್ರಮ ನಡೆಯಿತು.