
ಬೀದರ್: ಮಾ.9:ಕೇಂದ್ರ ರಾಸಾಯನಿಕ, ರಸಗೊಬ್ಬರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸೂಖ್ ಮಾಂಡವಿಯಾ ಅವರು ಬುಧವಾರ ಜಿಲ್ಲೆಗೆ ಭೇಟಿ ನೀಡಿದರು.
ಹೋಳಿ ಹಬ್ಬದ ಪ್ರಯುಕ್ತ ನಗರದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರ ನಿವಾಸದಲ್ಲಿ ಖೂಬಾ ಅವರ ಪುತ್ರಿಯರಾದ ವಸುಂಧರಾ ಹಾಗೂ ಮಣಿಕರ್ಣಿಕಾ ಹಣೆಗೆ ಬಣ್ಣ ಹಚ್ಚಿ, ಆರತಿ ಬೆಳಗಿ ಅವರನ್ನು ಸ್ವಾಗತಿಸಿ, ಬರಮಾಡಿಕೊಂಡರು.
ಭಗವಂತ ಖೂಬಾ ಹಾಗೂ ಶೀಲಾ ಖೂಬಾ ದಂಪತಿ ಶಾಲು ಹೊದಿಸಿ ಸನ್ಮಾನಿಸಿದರು.
ರಾಜ್ಯ ಸಚಿವರ ನಿವಾಸದಲ್ಲೇ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರತಿಕಾಂತ ಸ್ವಾಮಿ, ಬ್ರಿಮ್ಸ್ ನಿರ್ದೇಶಕ ಶಿವಕುಮಾರ ಶೆಟಕಾರ್ ಹಾಗೂ ಆರೋಗ್ಯ ಇಲಾಖೆಯ ಇತರ ಅಧಿಕಾರಿಗಳಿಂದ ಜಿಲ್ಲೆಯಲ್ಲಿನ ಆರೋಗ್ಯ ಇಲಾಖೆ ಚಟುವಟಿಕೆಗಳ ಮಾಹಿತಿ ಪಡೆದರು.
ಬಳಿಕ ಪಕ್ಷದ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ನಡೆಸಿ, ವಿಧಾನಸಭೆ ಚುನಾವಣೆ ಸಿದ್ಧತೆ ವಿವರ ಪಡೆದರು.