
ಕಲಬುರಗಿ,ಸೆ.5-ಕೇಂದ್ರ ನೂತನ ಹಾಗೂ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವರಾದ ಭಗವಂತ ಖೂಬಾ ಅವರು ಚಿಂಚೋಳಿ ತಾಲೂಕಿನ ಪಂಗರಗಾ ಗ್ರಾಮದ ಪರ್ವತಲಿಂಗ ಪರಮೇಶ್ವರ ಮಹಾರಾಜರಿಗೆ ಭೇಟಿ ಮಾಡಿ, 9 ವರ್ಷಗಳಲ್ಲಿ ಬೀದರ ಲೋಕಸಭಾ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ದಿ ಕಾರ್ಯಗಳ ಕಿರು ಹೊತ್ತಿಗೆಯನ್ನು ನೀಡಿ ಆಶೀರ್ವಾದವನ್ನು ಪಡೆದುಕೊಂಡರು.
ನಂತರ ರೇವಗ್ಗಿ ಗ್ರಾಮದ ರೆವಣಸಿದ್ದೇಶ್ವರ ದೇವಸ್ಥಾನದಲ್ಲಿ ದೇವರ ದರುಶನ ಪಡೆದುಕೊಂಡು, ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡರು. ನಂತರ ಆಳಂದ ಪಟ್ಟಣದಲ್ಲಿ ಮಾಜಿ ಶಾಸಕರಾದ ಸುಭಾಷ ಗುತ್ತೆದಾರರವರನ್ನು ಭೇಟಿ ಮಾಡಿ, ಮಾಜಿ ಶಾಸಕರ ಮನೆಯಲ್ಲಿದ್ದ ಸಹೋದರಿಯಿಂದ ರಾಖಿಯನ್ನು ಕಟ್ಟಿಸಿಕೊಂಡು ಸಹೋದರಿಯವರ ಆಶೀರ್ವಾದ ಪಡೆದುಕೊಂಡು, ಸುಭಾಷ ಗುತ್ತೆದಾರರವರಿಗೆ ಹಾಗೂ ಮುಖಂಡರಿಗೆ 9 ವರ್ಷಗಳ ಸಾಧನೆಯ ಪುಸ್ತಕ ನೀಡಿ, ಅಭಿವೃದ್ದಿ ಕಾರ್ಯಗಳ ಕುರಿತು ಚರ್ಚಿಸಿದರು.
ನಂತರ ಅಳಂದ ತಾಲೂಕಿನ ಬಸವನಸಂಗೋಳಗಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿರುವ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು, ದೇವರ ದರುಶನ ಪಡೆದುಕೊಂಡು, ಭಕ್ತರನ್ನು ಉದ್ದೇಶಿಸಿ ಮಾತನಾಡಿ, ಸ್ವಾತಂತ್ರ್ಯ ಬಂದ ಮೇಲೆ ಬಸವನ ಸಂಗೋಳಗಿ ಗ್ರಾಮಕ್ಕೆ ಬಂದಿರುವ ಮೊದಲ ಸಂಸದ ನಾನಾಗಿದ್ದೇನೆ. ಬಸವೇಶ್ವರ ಆಶೀರ್ವಾದ ಹಾಗೂ ತಮ್ಮೇಲ್ಲರ ಆಶೀರ್ವಾದದಿಂದ 2 ಬಾರಿ ಸಂಸದನಾಗಿ, ಕೇಂದ್ರದಲ್ಲಿ ಮಂತ್ರಿಯಾಗಿರುವೆ, ನಾನು ಸಂಸದನಾಗಿಯೂ, ಮಂತ್ರಿಯಾಗಿಯೂ ಎಂದು ನಿಮ್ಮನ್ನು ಮರೆತಿಲ್ಲಾ, ನಮ್ಮ ಕೇಂದ್ರದ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೋಳಿಸಿರುವೆ, ಉಜ್ವಲ್ ಯೋಜನೆಯಡಿ 39 ಸಾವಿರ ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್, 1.50 ಲಕ್ಷ ಜನರಿಗೆ ಆಯುಷ್ಮಾನ ಭಾರತ ಯೋಜನೆಯಡಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆ, ಜಲಜೀವನ ಮಿಷನ್ ಯೋಜನೆಯಡಿ ನೀರಿನ ಸಂಪರ್ಕ, ಫಸಲ್ ಬಿಮಾ ಯೋಜನೆಯಡಿ ಸುಮಾರು 70 ಕೋಟಿ ಪರಿಹಾರ ಇತ್ಯಾದಿ ಯೋಜನೆಗಳು ಆಳಂದ ಜನತೆಗೆ ಒದಿಗಿಸಿರುವೆ. ಇತ್ತಿಚ್ಚೆಗೆ ಕಿಣ್ಣಿ ಸುಲ್ತಾನ ರೈತರಿಗೆ ಫಸಲ್ ಬಿಮಾ ಪರಿಹಾರ ಬಂದಿಲ್ಲವೆಂದು ನನ್ನ ಗಮನಕ್ಕೆ ತಂದ ಕೂಡಲೆ, ಅವರ ಎಲ್ಲಾ ದಾಖಲೆಗಳು ಪಡೆದುಕೊಂಡು ಅವರಿಗೆ ಪರಿಹಾರ ಒದಗಿಸಿಕೊಟ್ಟಿರುವೆ, ರೈತರು ನನಗೆ ಕರೆ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ, ಈ ತರಹ ಆಳಂದ, ಚಿಂಚೋಳಿ ಜನರ ಎಲ್ಲಾ ಸಮಸ್ಯೆಗಳಿಗೆ ಬೇಡಿಕೆಗಳಿಗೆ ವಿಶೇಷವಾಗಿ ಪರಿಗಣಿಸಿ, ಫೋನ್ ಮುಖಾಂತರವೇ ಎಷ್ಟೋ ಕೆಲಸ ಕಾರ್ಯಗಳು ಮಾಡಿಕೊಡುತ್ತೇನೆ. ನೀವು ನನ್ನ ಮೇಲೆ ಇಟ್ಟಿರುವ ಪ್ರಿತಿ ವಿಶ್ವಾಸಕ್ಕೆ ನಾನು ಸದಾಕಾಲ ಚಿರಋಣಿಯಾಗಿರುತ್ತೇನೆ ಹಾಗೂ ನಿಮ್ಮೇಲ್ಲರ ಸೇವೆ ಸದಾಕಾಲ ಮಾಡುತ್ತಾ ಇರುತ್ತೇನೆ ಎಂದು ಎಲ್ಲಾ ಭಕ್ತರನ್ನು ಉದ್ದೇಶಿಸಿ, ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
ಸಂಸದರ ನಿಧಿಯಡಿ ಎಲ್ಲಕ್ಕಿಂತ ಹೆಚ್ಚಿನ ಅನುದಾನ ಆಳಂದ ಮತ್ತು ಚಿಂಚೋಳಿ ತಾಲೂಕುಗಳಿಗೆ ನೀಡುತ್ತಿರುವ ಮೊದಲ ಸಂಸದ ನಾನಾಗಿದ್ದೇನೆ ಎಂದು ತಿಳಿಸಲು ಹೆಮ್ಮೆಯಾಗುತ್ತದೆ. ಸಂಸದರ ನಿಧಿ ಹೊರತಾಗಿ ಕಳೆದ ಸಲ ನಮ್ಮ ಸರ್ಕಾರವಿದ್ದಾಗ ರಾಜ್ಯದಿಂದಲು ಸುಮಾರು 2.5 ಕೋಟಿ ಅನುದಾನ ಒದಗಿಸಿಕೊಟ್ಟಿರುವೆ. ಗುಲಬರ್ಗಾ-ಅಳಂದ-ಉಮರ್ಗಾ-ಲಾತೂರವರೆಗೆ, ಸೋಲಾಪೂರ-ಮಹೇಬೂಬನಗರ ವಾಯಾ ಎಸ್.ಎಚ್-10, ವಾಗದಾರಿ-ಅಳಂದ-ಕಲಬುರಗಿ-ಸೇಡಂ-ಕೊಡಂಬಲ್-ಮಹೇಬೂಬನಗರ ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಗಿದೆ, ಸುಮಾರು 30 ಕೋಟಿ ಅನುದಾನದಲ್ಲಿ 33 ಕಿಮೀ ಗ್ರಾಮೀಣ ರಸ್ತೆ ನಿರ್ಮಾಣವಾಗುತ್ತಿದೆ. ಆಳಂದ ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು 40 ಲಕ್ಷ ವೆಚ್ಚದಲ್ಲಿ ಆಕ್ಸಿಜನ್ ಪ್ಲಾಂಟ್, ರೈತರಿಗಾಗಿ ಮಣ್ಣು ಪರೀಕ್ಷಾ ಕೇಂದ್ರ ಪ್ರಾರಂಭಿಸಲಾಗಿದೆ. ರೂ. 49.50 ಕೋಟಿ ಅನುದಾನದಲ್ಲಿ ಭೋರಿ ನದಿಯಿಂದ ಆಳಂದ ತಾಲೂಕಿನ 08 ಕೆರೆಗಳಿಗೆ ಪೈಪ್ಲೈನ್ ಮೂಲಕ ನೀರು ತುಂಬಿಸುವ ಯೋಜನೆಗೆ ಆಡಳಿತಾತ್ಮಕವಾಗಿ ಅನುಮೊದನೆ ದೊರೆತಿದೆ. ಅಳಂದ ತಾಲೂಕಿನಲ್ಲಿರುವ 2,42,542 ಪಡಿತರಿಗೆ ಅನ್ನಭಾಗ್ಯ ಯೋಜನೆಯಡಿ ಉಚಿತ ಪಡಿತರ ನೀಡಲಾಗುತ್ತಿದೆ ಎಂದು ಹೇಳಿದರು.