ಭಗತ್ ಸಿಂಗ್ ಜೀವನ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ

ಕಲಬುರಗಿ,ಮಾ.27-ಬ್ರಿಟೀಷರ ವಿರುದ್ಧ ರಾಜಿರಹಿತವಾಗಿ ಕೆಚ್ಚೆದೆಯಿಂದ ಹೋರಾಡಿದ ಮಹಾನ್ ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ ಅವರ ಹೋರಾಟದ ಸ್ಪೂರ್ತಿ ಎಂದಿಗೂ ಜೀವಂತ. ಭಾರತವನ್ನು ಬ್ರಿಟೀಷರ ದಬ್ಬಾಳಿಕೆಯಿಂದ ಮುಕ್ತಿಗೊಳಿಸಿ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ತನ್ನ 23 ನೇ ವಯಸ್ಸಿಗೆ ನಗುನಗುತ್ತಾ ಗಲ್ಲುಗಂಭವನ್ನೇರಿದ ಭಗತ್ ಸಿಂಗ್ ಅವರ ಆದರ್ಶ ಮತ್ತು ಉದಾತ್ತ ವಿಚಾರಗಳು ಇಂದಿಗೂ ಪ್ರಸ್ತುತ ಎಂದು ಎಐಡಿಎಸ್‍ಓ ರಾಜ್ಯ ಉಪಾಧ್ಯಕ್ಷ ಹಣಮಂತ ಎಸ್.ಹೆಚ್.ಹೇಳಿದರು.
ನಗರದ ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ದೇಶದ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖ್ ದೇವ್, ರಾಜ್ ಗುರು ಅವರ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗತ್ ಸಿಂಗ್ ಅವರು ಮಾನವನಿಂದ ಮಾನವನ ಮೇಲೆ ನಡೆಯುವ ಶೋಷಣೆ ಅಂತ್ಯವಾದಗಲೇ ನಮಗೆ ನಿಜವಾದ ಸ್ವಾತಂತ್ರ್ಯ ದೊರಕುವುದು ಎಂದು ಹೇಳಿದ್ದರು. ಅವರು ಹೇಳಿದ ಈ ಮಾತುಗಳು ಅತ್ಯಂತ ಪ್ರಸ್ತುತವಾಗಿವೆ. ಈ ದೇಶದ ಅತಿ ದೊಡ್ಡ ಶ್ರೀಮಂತರು ಬಡ-ಮಧ್ಯಮ ವರ್ಗದ ಸಾಮಾನ್ಯ ಜನರ ಮೇಲೆ ಶೋಷಣೆಯನ್ನು ಎಸಗುತ್ತಲೇ ಇದ್ದಾರೆ. ಪರಿಣಾಮ ಇಂದು ಶಿಕ್ಷಣದ ವ್ಯಾಪಾರೀಕರಣ, ಬಡತನ ನಿರುದ್ಯೋಗ ಹೀಗೆ ಹಲವು ಸಾಮಾಜಿಕ ಸಮಸ್ಯೆಗಳು ತಾಂಡವವಾಡುತ್ತಿವೆ. ಭಗತ್ ಸಿಂಗ್ ಅವರ ಉತ್ತರಾಧಿಕಾರಿಗಳಾದ ನಾವು ಈ ಸಮಸ್ಯೆಗಳ ವಿರುದ್ಧ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕಿದೆ. ಅವರು ಕನಸು ಕಂಡ ಎಲ್ಲರಿಗೂ ಶಿಕ್ಷಣ, ಉದ್ಯೋಗ, ಹೆಣ್ಣು ಮಕ್ಕಳು ಘನತೆ ಗೌರವದಿಂದ ಬದುಕುವ ಸಮಾಜವಾದಿ ಭಾರತವನ್ನು ಕಟ್ಟಲು ಶ್ರಮಿಸಬೇಕಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ದಶರತ್ ಮೇತ್ರೆ ವಹಿಸಿದ್ದರು. ವೇದಿಕೆಯ ಮೇಲೆ ಡಾ.ಸುನಂದಾ ಉಪಸ್ಥಿತರಿದ್ದರು
ನೋಡಲ್ ಅಧಿಕಾರಿ ದಯಾನಂದ ಕಾರ್ಯಕ್ರಮ ನಿರೂಪಿಸಿದರು. ಎಐಡಿಎಸ್‍ಓ ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್ ಕೆ ವಂದಿಸಿದರು. ಜಿಲ್ಲಾ ಸಮಿತಿ ಸದಸ್ಯೆ ಪ್ರೀತಿ ದೊಡ್ಡಮನಿ ಉಪಸ್ಥಿತರಿದ್ದರು.