ಭಗತ್‌ಸಿಂಗ್ ಆದರ್ಶ ಅಳವಡಿಸಿಕೊಳ್ಳಲು ಎಐವೈಎಫ್ ಕರೆ

ದಾವಣಗೆರೆ.ಮಾ.23; ಕ್ರಾಂತಿಕಾರಿ ಭಗತ್‌ಸಿಂಗ್ ಮತ್ತು ಅವರ ಸಂಗಡಿಗರಾದ ಕ್ರಾಂತಿಕಾರಿ ಸುಖದೇವ್, ಕ್ರಾಂತಿಕಾರಿ ರಾಜಗುರು ದೇಶದ ಸ್ವಾತಂತ್ರö್ಯಕ್ಕಾಗಿ ಬಲಿವೇದಿಕೆ ಏರಿ ಕೊನೆಯುಸಿರೆಳೆದು 90 ವರ್ಷಗಳು ಗತಿಸಿದವು. ಅನೇಕರು ಹುಟ್ಟುತ್ತಾರೆ, ಸಾಯುತ್ತಾರೆ. ಇಂತಹವರಲ್ಲಿ ಕೆಲವೇ ಕೆಲವರು ಮಾತ್ರ ಸಾವಿನ ನಂತರವೂ ಜೀವಂತವಾಗಿರುತ್ತಾರೆ. ಅಂಥ ವಿರಳಾತಿ ವಿರಳದ ಸಾಲಿನಲ್ಲಿ, ಭಗತ್‌ಸಿಂಗ್, ರಾಜಗುರು, ಸುಖದೇವ ಮೊದಲಿಗರಾಗಿ ನಿಲ್ಲುತ್ತಾರೆ ಎಂದು ಎ.ಐ.ವೈ.ಎಫ್. ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು ಹೇಳಿದರು.
ದಾವಣಗೆರೆ ರೈಲ್ವೆ ನಿಲ್ದಾಣದ ಮುಂಭಾಗದ ಭಗತ್‌ಸಿಂಗ್ ಪ್ರತಿಮೆಗೆ ಹೂವು ಮಾಲಾರ್ಪಣೆ ಸಲ್ಲಿಸಿ ಸಭೆ ಉದ್ದೇಶಿಸಿ ಮಾತಾಡಿದ ಅವರು ಭಗತ್‌ಸಿಂಗ್ ಹಾಗೂ ಅವರ ಸಂಗಡಿಗರು ಇಂದಿಗೂ ತಲೆಮಾರಿನಿಂದ ತಲೆಮಾರಿಗೆ ಬೆಳಕು ನೀಡುತ್ತಾ ನಿತ್ಯ ಸ್ಪೂರ್ತಿಯಾಗುತ್ತಾ ನಮ್ಮ ನಡುವಿದ್ದಾರೆ.ಅದರಲ್ಲೂ ಭಗತ್‌ಸಿಂಗ್ 24ನೇ ವಯಸ್ಸಿನಲ್ಲೇ ನಗು ನಗುತ್ತಾ ನೇಣುಗಂಬಕ್ಕೇರಿದವರು. ಮಾ.23 ಭಗತ್‌ಸಿಂಗ್ ಬಲಿದಾನದ ದಿನ. ಭಗತ್‌ಸಿಂಗ್ ಬದುಕಿದ್ದು ಬರೀ 24 ವರ್ಷ ಅಷ್ಟು ಚಿಕ್ಕ ವಯಸ್ಸಿನಲ್ಲೇ ಅವರು ಓದಿದ್ದು ಬರೆದದ್ದು. ಅವರ ರಚಿಸಿದ ಸಾಹಿತ್ಯ, ಅವರ ಬೌದ್ಧಿಕಮಟ್ಟ ಆಲೋಚನ ಕ್ರಮ. ಪ್ರಕಟವಾಗದೇ ಉಳಿದ ಜೈಲಿನ ದಿನಚರಿಗಳನ್ನು ನೋಡಿದರೆ ತುಂಬಾ ಅಚ್ಚರಿ ಉಂಟಾಗುತ್ತದೆ. ಭಗತ್‌ಸಿಂಗ್ ಗಲ್ಲಿಗೇರಿದ ಆರೇಳು ದಶಕಗಳ ನಂತರ ಅವರು ಬರೆದ ಲೇಖನಗಳು, ಪತ್ರಗಳು, ದಿನಚರಿಯ ಪುಟಗಳು ಒಂದೊAದಾಗಿ ಹೊರಬರುತ್ತಿವೆ. ಅಷ್ಟು ಎಳೆಯ ವಯಸ್ಸಿನಲ್ಲಿ ನಿತ್ಯವು ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಇಷ್ಟೆಲ್ಲ ಅವರು ಹೇಗೆ ಬರೆದರು ಎಂಬ ಕುತೂಹಲ ಸಹಜವಾಗಿ ಉಂಟಾಗುತ್ತದೆ. ಭಗತ್‌ಸಿಂಗ್ ಕನಸು ಕೇವಲ ಸ್ವಾತಂತ್ರ ಭಾರತ ಮಾತ್ರವಲ್ಲ. ಸಮಾಜವಾದಿ ಭಾರತವನ್ನು ನಿರ್ಮಾಣ ಮಾಡಬೇಕೆಂದು ಅವರು ಹಂಬಲಿಸಿದ್ದರು. ಮಾರ್ಕ್ಸ್ವಾದದ ಬಗ್ಗೆ ಚಿಕ್ಕ ವಯಸ್ಸಿನಲ್ಲಿ ಓದಿ ತಿಳಿದುಕೊಂಡಿದ್ದು, ಭಗತ್‌ಸಿಂಗ್ ಕೋಮುವಾದ ಮತ್ತು ಜಾತಿವಾದಗಳನ್ನು ಕಟುವಾಗಿ ವಿರೋಧಿಸುತ್ತಿದ್ದರು. ಭಗತ್‌ಸಿಂಗ್ ಗಲ್ಲಿಗೇರಿದ ದಿನವು ಅವರನ್ನು ಭೇಟಿಯಾಗಲು ಬಂದ ಜೈಲರ್ ಗಮನಕ್ಕೆ ಭಗತ್‌ಸಿಂಗ್ ಲೆನಿನ್ ಪುಸ್ತಕ ಓದುತ್ತಿರುವುದು ಕಂಡು ಬಂತು ಗಲ್ಲಿಗೇರಿಸುವ ಸಮಯವಾಗಿತ್ತು ಎಂದು ಹೇಳಿದಾಗ “ಕೊಂಚ ತಡೆಯಿರಿ. ಒಬ್ಬ ಕ್ರಾಂತಿಕಾರಿ ಇನ್ನೊಬ್ಬ ಕ್ರಾಂತಿಕಾರಿಯನ್ನು ಭೇಟಿಯಾಗುತ್ತಿದ್ದಾನೆ” ಎಂದು ಲೆನಿನ್ ಪುಸ್ತಕ ಕೈಯಲ್ಲಿ ಹಿಡಿದುಕೊಂಡು ಹೇಳಿದರು. ನಂತರ ನೇಣುಗಂಬದತ್ತ ಸಾಗಿದರು.ಅಂತಹ ಕೆಚ್ಚೆದೆಯ ವೀರ ಅವರಾಗಿದ್ದರು ಎಂದರು.
 ಈ ಸಂದರ್ಭದಲ್ಲಿ ಕೆರನಹಳ್ಳಿ ರಾಜು, ಎ. ತಿಪ್ಪೇಶಿ, ಜೀವನ ನಿಟುವಳ್ಳಿ, ಫಜಲಲ್ಲು , ಗದಿಗೇಶ್ ಪಾಳೇದ್, ಇರ್ಫಾನ್, ಮಂಜುನಾಥ ಹೆಚ್.ಎಂ., ಮಂಜುನಾಥ ದೊಡ್ಡಮನೆ, ಮಂಜುನಾಥ ಹರಳಯ್ಯನಗರ, ರುದ್ರೇಶ್ ಮಳಲಕೆರೆ, ಆಂಜಿನಪ್ಪ ಮಳಲಕೆರೆ , ಲೋಹಿತ್, ಪರುಶುರಾಮ, ವಿನಾಯಕ ಉಪಸ್ಥಿತರಿದ್ದರು.