ಭಗತ್‌ಸಿಂಗ್ ಆದರ್ಶ ಯುವಕರಿಗೆ ಮಾದರಿಯಾಗಲಿ

ರಾಯಚೂರು.ಏ.೦೧- ನಗರದ ಕರ್ನಾಟಕ ಸಂಘದಲ್ಲಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್(ಎಐಡಿಎಸ್‌ಓ), ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂಥ್ ಆರ್ಗನೈಸೇಷನ್ (ಎಐಡಿವೈಓ) ಮತ್ತು ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್)ವತಿಯಿಂದ ಶಹಿದ್ ಭಗತ್ ಸಿಂಗ್ ಅವರ ಹುತಾತ್ಮ ದಿನದ ನೆನಪಿನಲ್ಲಿ ನಿನ್ನೆ ಸಾಯಂಕಾಲ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಈ ಕಾರ್ಯಕ್ರಮವನ್ನು ಹಿರಿಯ ಸಾಹಿತಿಗಳಾದ ವೀರಹನುಮಾನ್ ಅವರು ಉದ್ಘಾಟಿಸಿ ಮಾತನಾಡಿ, ಭಗತ್ ಸಿಂಗ್ ರವರು ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಪ್ರತಿಮ ಹೋರಾಟಗಾರ.ಅತಿ ಕಡಿಮೆ ವಯಸ್ಸಿನಲ್ಲೇ ತನ್ನ ದಿಟ್ಟ ಹೋರಾಟದಿಂದ ಅತ್ಯಂತ ಜನಪ್ರಿಯತೆ ಗಳಿಸಿದ್ದರು.ಇದರಿಂದಾಗಿ ಬ್ರಿಟಿಷರು ಭಗತ್ ಸಿಂಗರನ್ನು ಅವರು ಪ್ರಕಟಿಸಿದ ದಿನಾಂಕಕ್ಕಿಂತ ಒಂದು ದಿನ ಮೊದಲೇ ಅವರನ್ನು ಗಲ್ಲಿಗೇರಿಸಿದರು. .ಅವರ ತಂದೆ ತಾಯಿಗಳಿಗೆ ಪಾರ್ಥಿವ ಶರೀರ ಸಹ ಕೊಡದೆ ಹುಸೇನವಾಲ ಎಂಬ ಸ್ಥಳದಲ್ಲಿ ಶವವನ್ನು ತುಂಡು ತುಂಡಾಗಿ ಕತ್ತರಿಸಿ ನದಿಯಲ್ಲಿ ಬಿಸಾಕಿದರು. ಬ್ರಿಟಿಷರು ಭಗತ್ ಸಿಂಗ್ ಹೆಣಕ್ಕೂ ಹೆದರಿಕೊಂಡಿದ್ದರು. ಭಗತ್ ಸಿಂಗ್ ೨೩ ವಯಸ್ಸಿಗೆ ನೂರಾರು ಪುಸ್ತಕಗಳನ್ನು ಓದಿ ಅಗಾಧ ಜ್ಞಾನವನ್ನು ಗಳಿಸಿಕೊಂಡಿದ್ದರು. ಅವರು ನಾನೇಕೆ ನಾಸ್ತಿಕ, ಯುವ ಕ್ರಾಂತಿಕಾರಿಗಳಿಗೆ ಎಂಬ ಅನೇಕ ಲೇಖನಗಳನ್ನು ಬರೆದಿದ್ದಾರೆ. ಇಂದಿನ ಯುವ ಪೀಳಿಗೆ ಭಗತ್ ಸಿಂಗ್ ವಿಚಾರ ಓದಿಕೊಂಡು ಅವರನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದರು. ಆ ಮೂಲಕ ದೇಶದ ಜನರ ಸಮಸ್ಯೆಗಳ ವಿರುದ್ಧ ಹೋರಾಟ ಕಟ್ಟುವ ಅವಶ್ಯಕತೆ ಇದೆ. ಭಗತ್ ಸಿಂಗ್ ಜನಪ್ರಿಯಗೊಳಿಸಿದ ಇಂಕ್ವಿಲಾಬ್ ಜಿಂದಾಬಾದ್” ಘೋಷಣೆಯೊಂದಿಗೆ ಜನ ಒಂದಾಗಬೇಕಾಗಿದೆ. ಆದರೆ ದುರಂತ ಸಂಗತಿ ಎಂದರೆ ಇಂದು ಪ್ರಗತಿ ಮಾರಕ ಘೋಷಣೆಗಳು ಇಂದು ತಲೆ ಎತ್ತುತ್ತಿವೆ. ಯುವಕರನ್ನು ದಾರಿತಪ್ಪಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಅಧ್ಯಾಪಕರಾದ ಬಿಜಿ ಹುಲಿ ಅವರು ಮಾತನಾಡಿ, ಅಂದು ಭಗತ್ ಸಿಂಗ್ ಅವರನ್ನು ಬ್ರಿಟಿಷರು ಕುತಂತ್ರ ಮಾರ್ಗದಿಂದ ಕೇವಲ ೨೩ ವಯಸ್ಸಿಗೆ ಗಲ್ಲಿಗೇರಿಸಿದರು. ಇಂದು ಆಳ್ವಿಕರು ದೇಶಕ್ಕೆ ಅನ್ನ ನೀಡುವ ರೈತರು ಹಾಗೂ ದೇಶದ ಅಮೂಲ್ಯ ಆಸ್ತಿಗಳಾದ ಯುವಕರನ್ನು ನೇಣಿಗೆ ಶರಣಾಗುವ ಪರಿಸ್ಥಿತಿ ತಂದೊಡ್ಡಿದ್ದಾರೆ ಎಂದರು. ದೇಶದಾದ್ಯಂತ ಯುವಕರಲ್ಲಿ ದ್ವೇಷದ ವಿಷವನ್ನು ಉಣಬಡಿಸುತ್ತಿದ್ದಾರೆ. ಭಗತ್ ಸಿಂಗ್ ಅನುಯಾಯಿಗಳಾದ ನಾವು ವಿಷದ ಬದಲು ಅಮೃತವನ್ನು ಕೊಡಬೇಕು ಎಂದರು.
ದೇಶದಲ್ಲಿ ಸಾಂಸ್ಕೃತಿಕ ಅಧ:ಪತನವನ್ನು ನೋಡುತ್ತಿದ್ದರೆ ಇದರ ವಿರುದ್ಧ ಹೊರಡಲು ನಾನು ಇನ್ನು ಸ್ವಲ್ಪ ತಡವಾಗಿ ಹುಟ್ಟಬೇಕಿತ್ತು ಎನಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಹುಟ್ಟಿದವರಿಗೆ ಹಬ್ಬ, ಸತ್ತವರಿಗೆ ತಿಥಿಯು, ನಿನಗಿಲ್ಲ ಎರಡಡಿಚಿ ಇತಿಮಿತಿಯು. ಹುಟ್ಟಿದವನಲ್ಲ ನೀನು, ಸತ್ತವನೂ ಅಲ್ಲ. ನೀನು ಚಿರಂಜೀವಿ, ನೀನು ಚಿರಂಜೀವಿ” ಭಗತ್ ಸಿಂಗ್ ಅವರನ್ನು ನೆನೆಯುತ್ತಾ ದಿನಕರ ದೇಸಾಯಿ ಬರೆದ ಚಿರಂಜೀವಿ ಕವಿತೆಯನ್ನು ಕವನ ವಾಚನ ಮಾಡಿದರು.
ನಂತರ ಭಾಷಣಕಾರರಾಗಿ ಆಗಮಿಸಿದ್ದ ಎಐಯುಟಿಯುಸಿನ ಜಿಲ್ಲಾ ಉಪಾಧ್ಯಕ್ಷರಾದ ಮಹೇಶ್ ಚಚೀಕಲಪರವಿ ಮಾತನಾಡಿ, ಭಾರತ ಸ್ವತಂತ್ರ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಒಂದು ಕಡೆ ಗಾಂಧೀಜಿ ರಾಜಿಯೊಂದಿಗೆ ಹೋರಾಟ ನಡೆಸಿದರೆ, ಭಗತ್ ಸಿಂಗ್, ಇನ್ನೊಂದು ಕಡೆ ರಾಜಿರಹಿತ ಹೋರಾಟವನ್ನು ಮುನ್ನಲೆಗೆ ತರಲು ಸರ್ವ ಪ್ರಯತ್ನ ಮಾಡಿದರು. ಅವರ ವೈಯಕ್ತಿಕ ಜೀವನದಲ್ಲಿ ಕೂಡ ರಾಜಿ ರಹಿತ ಹೋರಾಟವನ್ನು ಕೈಗೊಂಡರು ಎಂದರು.
ಇಂದು ದಿನೇ ದಿನೇ ಮಕ್ಕಳು ಮೊಬೈಲ್,ಟಿವಿ ಗೀಳಾಗೆ ಬಲಿಯಾಗುತ್ತಿದ್ದಾರೆ. ಇದರಿಂದ ದೈಹಿಕವಾಗಿ ಮಾನಸಿಕವಾಗಿ ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಪೋಷಕರು ಆತಂಕ ಪಡುವಂತೆ ಆಗಿದೆ. ಇಂತಹ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ತಮ ಅಭಿರುಚಿ, ಆದರ್ಶ ಬೆಳೆಸುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಪ್ರಸ್ತವಿಕವಾಗಿ ಮಾತಾಡಿದ, ಎಐಡಿವೈಓ ಜಿಲ್ಲಾಧ್ಯಕ್ಷರಾದ ಚನ್ನಬಸವ ಜಾನೇಕಲ್ ಈ ಕಾರ್ಯಕ್ರಮವನ್ನು ನಡೆಸಲು ನಮಗೆ ರಾಯಚೂರಿನ ನಾಗರಿಕರು -ಜನಸಾಮಾನ್ಯರು ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಅವರೆಲ್ಲರಿಗೂ ಧನ್ಯವಾದ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಡಿಎಸ್‌ಓನ ಜಿಲ್ಲಾಧ್ಯಕ್ಷರಾದ ಹಯ್ಯಾಳಪ್ಪ ಅವರು ವಹಿಸಿಕೊಂಡಿದ್ದರು.
ಎಐಎಂಎಸ್‌ಎಸ್ ಜಿಲ್ಲಾ ಸಂಘಟಕರಾದ ಸರೋಜಾ ಗೋನವಾರ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು.