ಭಗತಸಿಂಗ್‍ನ ಆದರ್ಶ ಸಿದ್ಧಾಂತವನ್ನು ಇಂದಿನ ಸಮಾಜ ಅರ್ಥೈಸಿಕೊಳ್ಳಬೇಕಿದೆಃ ಸಂತೋಷ ಬಂಡೆ

ವಿಜಯಪುರ, ಮಾ.25-ಭಗತಸಿಂಗ್‍ನ ಆದರ್ಶಗಳನ್ನು ಕೇವಲ ಹುತಾತ್ಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸೀಮಿತಗೊಳಿಸುವ ಬದಲು ಆತನು ಪ್ರತಿಪಾದಿಸಿದ ಸಿದ್ಧಾಂತವನ್ನು ಇಂದಿನ ಸಮಾಜ ಅರ್ಥೈಸಿಕೊಳ್ಳಬೇಕಿದೆ ಎಂದು ಶಾಲಾ ಪ್ರಕಲ್ಪ ಸಹಪ್ರಮುಖ ಸಂತೋಷ ಬಂಡೆ ಹೇಳಿದರು.
ಅವರು ಭಾರತೀಯ ಶಿಕ್ಷಣ ಮಂಡಲ ವಿಜಯಪುರ ಜಿಲ್ಲಾ ಘಟಕವು ಹುತಾತ್ಮರ ದಿನದ ನಿಮಿತ್ಯ ಹಮ್ಮಿಕೊಂಡ ಸಂಕಲ್ಪ ದಿವಸ ಆಚರಣೆಯ ಗೂಗಲ್‍ಮೀಟ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ ಭಗತಸಿಂಗ್‍ನ ಉನ್ನತ ಧ್ಯೇಯ ಮತ್ತು ಆದರ್ಶ ಚಿಂತನೆಗಳು ಪ್ರಸ್ತುತ ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ. ಆತನ ಕ್ರಾಂತಿಕಾರಿ ಚಿಂತನೆಗಳನ್ನು ಮನಗಂಡು ನಾವೆಲ್ಲರೂ ಮುನ್ನಡೆಯಬೇಕಿದೆ ಎಂದರು.
ಕಾರ್ಯದರ್ಶಿ ಸುಧಾಕರ ಪೂಜಾರಿ ಮಾತನಾಡಿ ಇಂದಿನ ಯುವ ಸಮುದಾಯವನ್ನು ಒಗ್ಗೂಡಿಸಿ ಕ್ರಾಂತಿಯ ಮಾರ್ಗದಲ್ಲಿ ಕೊಂಡೊಯ್ಯಬಲ್ಲ ಸಾಮಥ್ರ್ಯವಿರುವುದು ಅವರ ಚಿಂತನೆಗಳಲ್ಲಿ ಮಾತ್ರ. ಇಂದಿನ ಯುವ ಜನಾಂಗಕ್ಕೆ ಅವರು ಸ್ಪೂರ್ತಿಯಾಗಿದ್ದಾರೆ ಎಂದರು.
ಸಿದ್ದು ಮದರಖಂಡಿ ಮಾತನಾಡಿ ಕಿರಿಯ ವಯಸ್ಸಿನಲ್ಲಿಯೇ ಭಾರತದ ಭವಿಷ್ಯಕ್ಕಾಗಿ ಗಲ್ಲುಶಿಕ್ಷೆಗೆ ಗುರಿಯಾದ ಭಗತಸಿಂಗ್ ಮತ್ತು ಆತನ ಸಂಗಾತಿಗಳು ಮಾನವ ಸಮಾಜಕ್ಕೆ ಆದಷ್ಟು ಹೆಚ್ಚಿನ ಸೇವೆ ಮಾಡಲು ಬಯಸಿದ್ದರು ಅವರ ಧೋರಣೆ ನಮ್ಮೆಲ್ಲರ ಮನಸ್ಸಿನ ಮೇಲೆ ಅಚ್ಚಳಿಯದೆ ಪ್ರಭಾವ ಬೀರಿದೆ ಎಂದರು.
ಶಿಕ್ಷಕ ಜಗದೀಶ ಚಲವಾದಿ ಕ್ರಾಂತಿ ಕಿಡಿಗಳು ಎಂಬ ಕವನ ವಾಚಿಸಿ ಗಮನ ಸೆಳೆದರು. ಕಾಶೀನಾಥ ಅವಟಿ, ಎಸ್.ಟಿ. ಬೋಳರೆಡ್ಡಿ, ಸುನೀತಾ ಪಾಟೀಲ್ ಮಾತನಾಡಿದರು.
ಗೂಗಲ್‍ಮೀಟ್ ಸಭೆಯ ಅಧ್ಯಕ್ಷತೆ ಡಾ. ಸಂಗಮೇಶ ಮೇತ್ರಿ ವಹಿಸಿದ್ದರು.
ಭಾರತಿ ಹೊನಕೇರಿ, ಭವಾನಿಗೌಡ, ಮಲ್ಲೇಶಪ್ಪ ಕಲ್ಯಾಣಶೆಟ್ಟಿ, ಮಲ್ಲಿಕಾರ್ಜುನ ಸಂಖ, ಪ್ರೊ. ಜಿ.ಆರ್. ಅಂಬಲಿ, ಶ್ರೀದೇವಿ ಗದ್ದಗಿಮಠ, ಪ್ರಭುಲಿಂಗ ನಾದ, ವನಿತಾ ನಾಯಕ, ಬಸವರಾಜ ಬಗಲಿ, ರುದ್ರಮ್ಮ ಗಿಡ್ಡಪ್ಪಗೋಳ, ಎಂ.ಆರ್. ಡೋಣಿ ಮುಂತಾದವರು ಭಾಗವಹಿಸಿದ್ದರು.