ಭಕ್ತ ಸಮೂಹದ ನಡುವೆ ಅದ್ದೂರಿಯಾಗಿ ನಡೆದ ವೀರಭದ್ರೇಶ್ವರ ರಥೋತ್ಸವ

ಔರಾದ:ಜ.20: ತಾಲೂಕಿನ ಗಡಿ ಭಾಗಕ್ಕೆ ಹೊಂದಿಕೊಂಡಿರುವ ವಡಗಾಂವ (ದೇ) ಗ್ರಾಮದ ಶ್ರೀ ವೀರಭದ್ರೇಶ್ವರ ರಥೋತ್ಸವ ಶುಕ್ರವಾರ ಭಕ್ತ ಸಮೂಹದ ನಡುವೆ ಅದ್ದೂರಿಯಾಗಿ ಜರುಗಿತು.

ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವಕ್ಕೆ ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದರು. ವೀರಭದ್ರೇಶ್ವರ ಮೂರ್ತಿಗೆ ವಿಶೇಷ ಪೂಜೆ, ಪಲ್ಲಕ್ಕಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯುದ್ದಕ್ಕೂ ಗ್ರಾಮಸ್ಥರು ದೇವರಿಗೆ ಶಾಲು ಹೊದಿಸಿ ಕಾಯಿ ಕರ್ಪೂರ ಅರ್ಪಿಸಿ ಭಕ್ತಿ ಭಾವ ಮೆರೆದರು.

ಗ್ರಾಮದ ಸಂಪ್ರದಾಯದಂತೆ ದೇಶಮುಖ ಮನೆತನದಿಂದ ಅಗ್ನಿ ಕುಂಡಕ್ಕೆ ವಿಶೇಷ ಪೂಜೆ ಸಲ್ಲಿಸಿ ಅಗ್ನಿ ತುಳಿದರು. ಸಾಯಂಕಾಲ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ರಥೋತ್ಸವ ನಡೆಯಿತು. ಭಕ್ತರು ರಥಕ್ಕೆ ಖಾರೀಕು, ಬೆಂಡು-ಬತ್ತಾಸು ಹಾರಿಸಿ ಭಕ್ತಿ ಸಮರ್ಪಿಸಿದರು. ಮೆರವಣಿಗೆ ಉದ್ದಕ್ಕೂ ಯುವಕರು ಕನ್ನಡದ ಜಾನಪದ ಹಾಗೂ ಡಿಜೆ ಹಾಡುಗಳಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು.


ಹುಗ್ಗಿ ಸವಿದ ಭಕ್ತರು:

ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವಕ್ಕೆ ನೆರೆಯ ಮಹಾರಾಷ್ಟ್ರ ತೆಲಂಗಾಣ ರಾಜ್ಯ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಭಕ್ತಾದಿಗಳು ಆಗಮಿಸುತ್ತಾರೆ. ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ಹುಗ್ಗಿ, ಅನ್ನ ಮತ್ತು ಸಾಂಬಾರ ಪ್ರಸಾದ ವಿನಿಯೋಗ ನಡೆಯಿತು. ದೇವಸ್ಥಾನದ ಪಕ್ಕದ ಜಾಗದಲ್ಲಿ ವಿಶಾಲವಾದ ಪೆಂಡಾಲ ಹಾಕಿ ಬರುವ ಭಕ್ತರಿಗೆ ಗ್ರಾಮಸ್ಥರು ಪ್ರಸಾದ ವಿನಿಯೋಗ ಮಾಡಿದರು.