ಭಕ್ತ ಮಾಕಂಡಯ್ಯನ ಆದರ್ಶ ಪಾಲಿಸಿ- ಸುರೇಶ್

ವಿಜಯಪುರ.ಏ.೨೩- ಪರಮಾತ್ಮನನ್ನು ನಮ್ಮ ಆತ್ಮದಲ್ಲಿಯೇ ಕಾಣಬಹುದು. ೮೪ ಕೋಟಿ ಜೀವ ರಾಶಿಯಲ್ಲಿ ಮನುಷ್ಯ ಜನ್ಮವೇ ದೊಡ್ಡದು. ಈ ಆತ್ಮವನ್ನು ಒಳ್ಳೆ ರೀತಿಯಲ್ಲಿ ಬೆಳೆಸಿಕೊಳ್ಳಬೇಕು. ಭಕ್ತ ಸಿರಿಯಾಳ, ಭಕ್ತ ಪ್ರಹ್ಲಾದ, ಭಕ್ತ ಮಾಕಂಡಯ್ಯರವರುಗಳ ಜೀವನ ಚರಿತ್ರೆ ಅವಲೋಕಿಸಿ ಅವರ ಆದರ್ಶಗಳನ್ನು ಪಾಲಿಸಬೇಕೆಂದು ಗೋಷ್ಟಿಯ ಸಂಚಾಲಕರಾದ ಮ. ಸುರೇಶ್ ಬಾಬು ರವರು ತಿಳಿಸಿದರು.
ಪಟ್ಟಣದ ಗಾಂಧಿಚೌಕದಲ್ಲಿರುವ ಅ. ಶಿ. ವೈ.(ಅಯೋಧ್ಯಾ ನಗರ ಶಿವಾಚಾರ ವೈಶ್ಯ) ನಗರ್ತ ಮಹಂತಿನ ಮಠ ಧರ್ಮಸಂಸ್ಥೆಯ ಸಭಾಂಗಣದಲ್ಲಿ ಶ್ರೀ ವೀರಭದ್ರ ಸ್ವಾಮಿ ಗೋಷ್ಠಿ ಅಕ್ಕನ ಬಳಗದ ಸೇವಾ ಟ್ರಸ್ಟ್ ವತಿಯಿಂದ ೩೫೦ ನೆಯ ಮಾಸಿಕ ಶಿವಾನುಭವಗೋಷ್ಠಿ ಮತ್ತು ಭಕ್ತ ಸಿರಿಯಾಳ ಚಿಂತನೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ದೊಡ್ಡಬಳ್ಳಾಪುರ. ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣ ಮಹಾಲಿಂಗಯ್ಯ* ಭಕ್ತ ಸಿರಿಯಾಳ * ಎಂಬ ಚಿಂತನಾಗೋಷ್ಠ ಬಗ್ಗೆ ಉಪನ್ಯಾಸವನ್ನು ನೀಡಿದರು. ದೈವ ಭಕ್ತಿಯ ಸಂಕೇತವಾದ ಭಕ್ತ ಸಿರಿಯಾಳನ ಕಥೆ ೧೩ನೇ ಶತಮಾನದ ಹರಿಹರನ ರಗಳೆಗಳು ಮತ್ತು ತೆಲುಗಿನ ಸೋಮನಾಥನ ಬಸವ ಪುರಾಣದಲ್ಲಿ ಅದರ ಮೂಲ ತಮಿಳು ಜಾನಪದದಲ್ಲಿದೆ. ಶಿಷ್ಟ ಕಾವ್ಯದಲ್ಲಿ ಸಿರಿಯಾಳ ಭಕ್ತಿ ಮತ್ತು ತ್ಯಾಗವನ್ನು ಸಂಕೇತಿಸುತ್ತಾನೆ. ಸಿರಿಯಾಳನಿಗೆ ಚೆಲ್ಲಾಳ ಎಂಬ ಪುತ್ರ ಜನಿಸುತ್ತಾನೆ.. ಪುತ್ರನು ಹುಟ್ಟಿದ ಸಂತೋಷದಿಂದ ಚಿನ್ನಾಭರಣಗಳನ್ನು ದಾನ ಮಾಡಿದ್ದ ಪ್ರಸಂಗವಿದೆ ಶಿವನ ಮೇಲಿರುವ ಭಕ್ತಿಗಾಗಿ ತನ್ನ ಮಗನ ಮುಂಡದ ಮಾಂಸದಿಂದ ಊಟವನ್ನು ಬಡಿಸಿ, ಶಿವನಿಗೆ ಮೆಚ್ಚುವ ಭಕ್ತನಾಗಿ ಬಿಂಬಿಸುತ್ತಾನೆ. ಈ ಕಥೆ ದಕ್ಷಿಣ ಭಾರತಾದ್ಯಂತ ಜಾನಪದ ಶೈಲಿಯಲ್ಲಿ ಕಥೆಯು ಪ್ರಸಿದ್ಧವಾಗಿದೆ. ಆದ್ದರಿಂದ ನಾವು ಪರಮಾತ್ಮನನ್ನು ಪೂಜಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಕರೆ ನೀಡಿದರು.
ಬೆಂಗಳೂರಿನ ಅ.ಶಿ.ವೈ.ನಗರ್ತ ವಿದ್ಯಾವರ್ಧಕ ಸಂಘದ ಖಚಾಂಚಿಗಳಾದ ಎಂ. ಶಂಕರ್, ಅ. ಶಿ. ವೈ. ನಗರ್ತ ಯವಕ ಸಂಘದ ಗೌರವ ಅಧ್ಯಕ್ಷರಾದ ಪಿ. ಮುರಳಿಧರ್, ಅಧ್ಯಕ್ಷರಾದ ಎ. ಮಂಜುನಾಥ್, ಅ. ಶಿ. ವೈ. ನಗರ್ತ ಮಹಿಳಾ ಸಂಘದ ಅಧ್ಯಕ್ಷರಾದ ಲೀಲಾ ರುದ್ರಮೂರ್ತಿ, ಕಾರ್ಯದರ್ಶಿ ಭಾರತಿ ಪ್ರಭುದೇವ್ ರವರನ್ನು ಗೌರವಿಸಿ ಅಭಿನಂದಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟನ ಅಧ್ಯಕ್ಷರಾದ ಸಿ ಬಸಪ್ಪನವರ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಧರ್ಮ ಸಂಸ್ಥೆಯ ಅಧ್ಯಕ್ಷರಾದ ಪುನೀತ್ ಕುಮಾರ್. ಕಾರ್ಯದರ್ಶಿ ವಿ.ವಿಶ್ವನಾಥ್, ಅನಿಲ್ ಕುಮಾರ್, ಶಿವಪ್ರಸಾದ್, ಮೀನಾ ಸುರೇಶ್, ಅಕ್ಕನ ಬಳಗದ ಗೌರವಾಧ್ಯಕ್ಷರಾದ ಅಂಬಾಭವಾನಿ, ಮಹದೇವಮ್ಮ ಬಸವರಾಜು, ವಿಮಲಾಂಭ, ಸುಷ್ಮಾ, ರಾಧಾ ಮನೋಹರ್ ಮತ್ತಿತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಭಕ್ತಿ ಸೇವೆಯನ್ನು ಮಹಂತಿನ ಮಠದ ಧರ್ಮ ಸಂಸ್ಥೆಯವರು ನೆರವೇರಿಸಿದರು.