ಭಕ್ತ ಕನಕದಾಸರ-ರಾಯಣ್ಣನ ಪ್ರತಿಮೆ ಸ್ಥಾಪನೆಗೆ ಒತ್ತಾಯ

??

ಆಳಂದ:ನ.12: ಸ್ಥಳೀಯ ತಾಲೂಕು ಆಡಳಿತಸೌಧನಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಹಾಗೂ ಪಟ್ಟಣದಲ್ಲಿ ಭಕ್ತ ಕನಕದಾಸರ ಪ್ರತಿಮೆಯನ್ನು ಸ್ಥಾಪನೆ ಕಾರ್ಯ ನಡೆಯಬೇಕು ಎಂದು ರಾಜ್ಯ ಕುರುಬ ಸಂಘದ ಉಪಾಧ್ಯಕ್ಷ ಈರಣ್ಣಾ ಝಳಕಿ ಅವರು ಒತ್ತಾಯಿಸಿದರು.

ಪಟ್ಟಣದ ಗುರುಭವನದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ದಾಸ ಶ್ರೇಷ್ಠ ಶ್ರೀ ಭಕ್ತ ಕನಕದಾಸರವರ ಜಯಂತಿ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕನಕರು ತಮ್ಮ ಕೀರ್ತನೆಗಳ ಮೂಲಕ ಸಮಾನತೆ ಸಮಾಜಕ್ಕಾಗಿ ಶ್ರಮಿಸಿ ಸನ್ಮಾರ್ಗದ ಹಲವು ಗ್ರಂಥಗಳನ್ನು ರಚಿಸುವ ಮೂಲಕ ಸಂದೇಶ ಸಾರಿದ್ದಾರೆ. ಸಂಗೋಳಿ ರಾಯಣ್ಣನವರು ಸ್ವಾತಂತ್ರ ಚಳುವಳಿಯ ಹೋರಾಟಕ್ಕೆ ಕೊಡುಗೆ ನೀಡಿದ್ದಾರೆ ಇಂಥ ಮಹನೀಯರ ಪ್ರತಿಮೆಯನ್ನು ಸ್ಥಾಪನೆ ಮಾಡಬೇಕು ಎಂದು ಹೇಳಿದರು.

ಕುರುಬ ಸಮಾಜದ ತಾಲೂಕು ಅಧ್ಯಕ್ಷ ತುಕಾರಾಮ ವಗ್ಗಿ ಮಾತನಾಡಿ, ಕನಕದಾಸರು ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣಾ ಎಂದು ಅವರು ಹಿಂದುಳಿದ ಕುರುಬ ಸಮಾಜಕ್ಕೆ ಸಾಮಾಜಿಕ ನ್ಯಾಯ ದೊರೆಯಲು ಒಗ್ಗಟ್ಟಿನಿಂದ ಹೋರಾಟ ಕೈಗೊಳ್ಳಲು ಮುಂದಾಗಬೇಕು ಎಂದರು.

ಸ್ಥಳೀಯ ಮಹಾತ್ಮಗಾಂಧಿ ಪಿಯು ಕಾಲೇಜು ಪ್ರಾಚಾರ್ಯ ಭೀರಣ್ಣಾ ಪೂಜಾರಿ ಮತ್ತು ಶಾಹಾಬಾದ ತಾಲೂಕು ಭಂಕೂರದ ಕರ್ನಾಟಕ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಪಿ.ಎಸ್. ಕೋಕಟನೂರ ಅವರು ಕನಕದಾಸರ ಜೀವನ ಸಾಧನೆ ಕುರಿತು ಮಾತನಾಡಿದರು.

ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರು ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು.

ಪುರಸಭೆ ಅಧ್ಯಕ್ಷೆ ರಾಜಶ್ರೀ ಎಸ್. ಖಜೂರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ವಿಜಯಮಹಾಂತೇಶ ಹೂಗಾರ, ಸಿದ್ಧು ಪೂಜಾರಿ ಉಪಸ್ಥಿತರಿದ್ದರು. ಶಿಕ್ಷಕ ಕಲ್ಯಾಣಪ್ಪ ಬಿಜ್ಜರಗಿ ನಿರೂಪಿಸಿದರು.

ಈ ಮೊದಲು ಹಳೆಯ ತಹಸೀಲ್ದಾರ ಕಚೇರಿಯಿಂದ ಶ್ರೀರಾಮ ಮಾರುಕಟ್ಟೆ, ಬಸ್ ನಿಲ್ದಾಣ ಮಾರ್ಗವಾಗಿ ಕನಕದಾಸರ ಭಾವಚಿತ್ರ ಮೆರವಣಿಗೆ ನಡೆಯಿತು. ಮಕ್ಕಳ ಡೋಳ್ಳು ಕುಣಿತ, ಲೇಜಿಮ ಕುಣಿತ ಹಾಗೂ ಕನಕದಾಸರ ವೇಷಪೋಷಕ ಧರಿಸಿದ ಯಳಸಂಗಿಯ ಬಾಲಕ ಕಲ್ಯಾಣಿ ಕಂಬಾರ ನೋಡುಗರ ಗಮನ ಸೆಳೆಯಿತು. ತಾಪಂ ಮಾಜಿ ಸದಸ್ಯ ಶಿವುಪುತ್ರ ಕೊಟ್ಟರಗಿ, ದೈಹಿಕ ಶಿಕ್ಷಣದ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ, ದಲಿತ ಮುಖಂಡ ದಯಾನಂದ ಶೇರಿಕಾರ ದಲಿತ ಸೇನೆ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಬೋಳಣಿ, ಬಿಸಿಎಂ ಕಲ್ಯಾಣಾಧಿಕಾರಿ ಬಸವರಾಜ ಕಾಳೆ, ಸಮಾಜ ಕಲ್ಯಾಣಾಧಿಕಾರಿ ಮೋನಮ್ಮ ಸುತಾರ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.