ಭಕ್ತ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ

ಕೋಲಾರ,ಮೇ,೬:ತಾಲ್ಲೂಕಿನ ಗಟ್ಟಹಳ್ಳಿ ಶ್ರೀ ಆಂಜನಪ್ಪಸ್ವಾಮಿ ಆಶ್ರಮದ ಆವರಣದಲ್ಲಿ ಶುಕ್ರವಾರ ಶ್ರೀ ಭಕ್ತ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಭಕ್ತ ಆಂಜನೇಯ ಸ್ವಾಮಿಗೆ ಮಹಾಮಂಗಳಾರತಿ, ನೈವೇದ್ಯ ಸಮರ್ಪಣೆ ಮಾಡುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದ್ದು, ಕೋಲಾರ,ಬೆಂಗಳೂರು ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಭಕ್ತರು ಆಶ್ರಮಕ್ಕೆ ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡರು.
ಶ್ರೀಸೋಮಶೇಖರ ಸ್ವಾಮೀಜಿಗಳಿಂದ ವೇದಘೋಷ, ಭಜನೆ ಮತ್ತು ಉಪನ್ಯಾಸ ಇದೇ ಸಂದರ್ಭದಲ್ಲಿ ಹಮ್ಮಿಕೊಂಡಿದ್ದು, ಹೊಳೂರಿನ ಕರಗದ ಪೂಜಾರಿ ಹಾಗೂ ೮೦ಮಂದಿ ವೀರಗಾರರು ಬ್ರಹ್ಮರಥೋತ್ಸವದಲ್ಲಿ ಭಾಗವಹಿಸಿ ತಮ್ಮ ಶ್ರದ್ಧೆ,ಭಕ್ತಿಯ ಶಕ್ತಿ ಪ್ರದರ್ಶನ ನಡೆಸಿದರು.
ರಥ ಪೂಜೆಯ ನಂತರ ರಥ ಹೊರಡುತ್ತಿದ್ದಂತೆ ನೆರೆದಿದ್ದ ಸಹಸ್ರಾರು ಭಕ್ತರು ಬಾಳೆಹಣ್ಣು, ದವಣವನ್ನು ರಥಕ್ಕೆ ಎಸೆಯುವ ಮೂಲಕ ತಮ್ಮ ಹರಕೆ ತೀರಿಸಿದ್ದು, ಇಡೀ ಗ್ರಾಮದಲ್ಲಿ ಹಬ್ಬ,ಜಾತ್ರೆಯ ವಾತಾವರಣವಿದ್ದು, ತಮಟೆ,ಡೋಲು ಎಲ್ಲರ ಗಮನ ಸೆಳೆಯಿತು.
ಬ್ರಹ್ಮ ರಥೋತ್ಸವದ ನೇತೃತ್ವ ವನ್ನು ಧರ್ಮಾಧಿಕಾರಿ ಬಿ.ಸಿ.ಸೋಮ ಶೇಖರಸ್ವಾಮಿಗಳು ಮಾತನಾಡಿ, ಜಿಲ್ಲೆಯಲ್ಲಿ ಉತ್ತಮ ಮಳೆ,ಬೆಳೆಯಾಗಲು ಭಕ್ತ ಆಂಜನೇಯಸ್ವಾಮಿಯ ಆಶೀರ್ವಾದ ಸಿಗಲಿ, ಜಿಲ್ಲೆಯ ಜನತೆ ರೋಗರುಜನಗಳಿಂದ ದೂರವಾಗಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಡಾ.ಜಯಮ್ಮ ಹಾಗೂ ಟ್ರಸ್ಟ್‌ನ ಅಧ್ಯಕ್ಷ ಚಂದ್ರಶೇಖರ್ ಮುಂತಾದವರು ಆಗಮಿಸಿದ್ದು, ರಥೋತ್ಸವದ ಅಂಗವಾಗಿಸಾವಿರಾರು ಮಂದಿಗೆ ಅನ್ನದಾನ, ಕೋಸಂಬರಿ,ಪಾನಕ ವಿನಿಯೋಗ ರಥ ಬೀದಿಯುದ್ದಕ್ಕೂ ನಡೆಯಿತು.