ಭಕ್ತಿ ಇದ್ದಲ್ಲಿ ದೇವರು ಇರ್ತಾನೆ ಎಂಬುದನ್ನು ಕನಕದಾಸರು ಸಾಬೀತು ಪಡಿಸಿದ್ದಾರೆ: ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ ನ.12: ಭಕ್ತಿ ಎಲ್ಲಿ ಇರುತ್ತದೆಯೋ ಅಲ್ಲಿ ದೇವರು ಇರುತ್ತಾನೆ ಎಂಬುದನ್ನು ಭಕ್ತ ಶ್ರೇಷ್ಠ ಕನಕದಾಸರು ಸಾಬೀತು ಪಡಿಸಿದ್ದಾರೆ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಬೀದರ್ ನಗರದ ಗಾಂಧಿ ಗಂಜ್ ನ ಕನಕ ಭವನದಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಭಕ್ತ ಶ್ರೇಷ್ಠ ಕನಕದಾಸರ 535ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನಕದಾಸರು ಭಕ್ತ ಶ್ರೇಷ್ಠರಾಗಿದ್ದಾರೆ, ಭಕ್ತಿಯಿಂದ ಶ್ರೀಕೃಷ್ಣನ ದರ್ಶನ ಪಡೆದಿದ್ದಾರೆ ಎಂದರು.
ಕನಕದಾಸರ ಬಗ್ಗೆ ನಾವು ಎಷ್ಟು ಹೇಳಿದರು ಕಡಿಮೆ ಎನಿಸುತ್ತದೆ. ನಾವೆಲ್ಲರೂ ದೇವರ ದರ್ಶನಕ್ಕಾಗಿ ದೇವಸ್ಥಾನಕ್ಕೆ ಹೋಗುತ್ತೇವೆ. ಆದರೇ ಕನಕದಾಸರು ತಪಸ್ಸಿನ ಮೂಲಕ ಶ್ರೀಕೃಷ್ಣನ್ನು ಒಲಿಸಿಕೊಂಡು ಭಕ್ತಿ ಎಲ್ಲಿರುತ್ತದೆಯೋ ದೇವರು ಅಲ್ಲಿರುತ್ತಾನೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕನಕದಾಸರ ಜಪದ ಫಲವಾಗಿ ಶ್ರೀಕೃಷ್ಣನು ಗೋಡೆ ಒಡೆದು ಕನಕದಾಸರಿಗೆ ದರ್ಶನ ನೀಡಿದ್ದಾನೆ. ಅಂತವರ ತತ್ವಾದರ್ಶಗಳನ್ನು ನಾವೆಲ್ಲರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಾಗೋಣ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಬೀದರ್ ಉತ್ತರ ಕ್ಷೇತ್ರದ ಶಾಸಕರಾಗಿರುವ ರಹಿಂಖಾನ್ ರವರು ಮಾತನಾಡಿ, ಕನಕದಾಸರ ಜಯಂತೋತ್ಸವಕ್ಕೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಪಂಡಿತರಾವ್ ಚಿದ್ರಿ, ಗೀತಾ ಪಂಡಿತ್ ಚಿದ್ರಿ, ಮಲ್ಲಿಕಾರ್ಜುನ ಬಿರಾದಾರ, ವಿಜಯಕುಮಾರ್ ಪಾಟೀಲ್, ಅಮೃತರಾವ್ ಚಿಮಕೋಡೆ, ಬಾಬುರಾವ್ ಮಲ್ಕಾಪೂರೆ ಸೇರಿದಂತೆ ಗೊಂಡ ಸಮಾಜದ ಮುಖಂಡರು, ಜನಪ್ರತಿನಿಧಿಗಳು ಇದ್ದರು.