ಭಕ್ತಿಯ ಹೊನಲು ಹರಿಸಿದ ವಚನ ಮಾಧುರ್ಯ

ಕಲಬುರಗಿ:ಮಾ.30:ಶರಣರು ರಚಿಸಿದ ವಚನಗಳು ಕನ್ನಡ ಸಾಹಿತ್ಯದ ರತ್ನಗಳು, ಸಾಮಾಜಿಕ ಧಾರ್ಮಿಕ ನೆಲೆಗಟ್ಟಿನಲ್ಲಿ ಸಕಲರ ಲೇಸನ್ನೇ ಬಯಸಿ ಅನುಭವ ಮಂಟಪದಲ್ಲಿ ಚರ್ಚಿತಗೊಂಡು ಹೊರಬಂದ ಬೆಳಕಿನ ಸ್ಫುರಣಗಳು.

ಕಲಬುರಗಿ ಬಸವ ಸಮಿತಿಯ ಅನುಭವ ಮಂಟಪದಲ್ಲಿ ದಿ: 28-03-2021 ರಂದು ಸಂಜೆ 6.00 ಗಂಟೆಗೆ ಕಲಬುರಗಿ ಬಸವ ಸಮಿತಿವತಿಯಿಂದ ಶರಣರ ಸ್ಮರಣಾರ್ಥ ಅರಿವಿನ ಮನೆ 663 ನೆಯ ದತ್ತಿ ಕಾರ್ಯಕ್ರಮದಲ್ಲಿ ಶರಣರ ವಚನಗಳ ಚಿಂತನ ಮತ್ತು ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಲಬುರಗಿ ಶ್ರೀ ಶರಣಬಸವೇಶ್ವರ ಮಹಾವಿದ್ಯಾಲಯದ ಸಂಗೀತ ಪ್ರಾಧ್ಯಾಪಕರಾದ ಡಾ. ಛಾಯಾ ಭರತನೂರ ಈ ಸಂಗೀತ ಸಂಜೆಯಲ್ಲಿ ಶರಣರ ವಚನಗಳಿಗೆ ವಿವಿಧ ರಾಗಗಳಿಂದ ಸಂಯೋಜಿಸಿ ಹಾಡಿದ ರೀತಿ ಅನುಪಮವಾಗಿತ್ತು. ಪ್ರಾರಂಭದಲ್ಲಿ ಭವಭವದಲ್ಲಿ ಭಕ್ತನಾದಡೆ ಆ ಭವವೇ ಲೇಸು ಕಂಡಯ್ಯ ಎಂಬ ಬಸವಣ್ಣನವರ ವಚನವನ್ನು ಹಾಡಿದಾಗ ಇಡೀ ಪರಿಸರವನ್ನು ಭಕ್ತಿ ಭಾವದಿಂದ ಪಾವನ ಮಾಡಿದಂತಿತ್ತು. ನಂತರ ವಚನ ಚಿಂತನೆಯೊಂದಿಗೆ ಕಾರ್ಯಕ್ರಮ ವಿದ್ಯುಕ್ತವಾಗಿ ಪ್ರಾರಂಭವಾಯಿತು. ಶ್ರೀ ಶರಣಬಸವೇಶ್ವರ ಕಲಾ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಶ್ರೀಮತಿ ವಿಜಯಲಕ್ಷ್ಮಿ ಅಲ್ಲದ ಅವರು ವಚನಗಳನ್ನು ಒಂದೊಂದಾಗಿ ಪಠಣ ಮಾಡಿ ಅವುಗಳನ್ನು ಚಿಂತನೆಗೊಳಪಡಿಸಿದರು. ಡಾ. ಛಾಯಾ ಭತನೂರ ಆ ವಚನಗಳನ್ನು ವಿವಿಧ ರಾಗಗಳಲ್ಲಿ ಹಾಡಿ ಆನ್‍ಲೈನ್ ನೇರ ಪ್ರಸಾರÀದಲ್ಲಿ ನೋಡಿದ ಅನೇಕರ ಮೆಚ್ಚುಗೆಗ ಪಾತ್ರವಾಯಿತು.

ಶಿವ ಮಂತ್ರವೆನಗೆ ಕಾಮಧೇನುವಯ್ಯ, ಶಿವಮಂತ್ರವೆನಗೆ ಕಲ್ಪವೃಕ್ಷವಯ್ಯ ಎಂಬ ಷಣ್ಮುಖ ಶಿವಯೋಗಿಗಳ ವಚನವನ್ನು ಗೋರಖ ಕಲ್ಯಾಣ ರಾಗದಲ್ಲಿ ಹಾಡಿ ಎಲ್ಲರ ಗಮನ ಸೆಳೆದರು. ನಂತರದಲ್ಲಿ ಜೇಡರ ದಾಸಿಮಯ್ಯನವರ ಮರದೊಳಗೆ ಮಂದಾಗ್ನಿಯ ಉರಿಯದಂತಿರಿಸಿದೆ ಎಂಬ ವಚನವನ್ನು ಝಿಂಜೋಟಿ ರಾಗದಲ್ಲಿ, ಹದತಪ್ಪಿಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ ಎನ್ನುವ ಕೊಟ್ಟಣದ ಸೋಮವ್ವೆಯ ವಚನವನ್ನು ದೇಶ ರಾಗದಲ್ಲಿ ಹಾಡಿದಾಗ ಆನ್‍ಲೈನ್‍ನಲ್ಲಿ ಅನೇಕರು ಆನಂದದಿಂದ ಉತ್ತಮ ಪ್ರತಿಕ್ರಿಯೆ ನೀಡಿದರು. ಶರಣರ ಹಲವಾರು ವಚನಗಳ ಚಿಂತನೆ ಮತ್ತು ಗಾಯನ ಕಾರ್ಯಕ್ರಮಕ್ಕೆ ದೇಶ-ವಿದೇಶಗಳಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು. ಸಹಕಲಾವಿದರಾಗಿ ಶ್ರೀ ವಿಶ್ವನಾಥ ವಸ್ತ್ರದಮಠ ಹಾರ್ಮೋನಿಯಂ, ಶ್ರೀ ಬದರಿನಾಥ ಮುಡಬಿ ಪಿಟೀಲು, ಹಾಗೂ ಡಾ. ಎಂ.ಎಸ್. ಪಾಟೀಲ , ಶ್ರೀ ಷಣ್ಮುಖ ಪಾಟೀಲರು ತಬಲಾಸಾಥ ನೀಡಿ ಕಾರ್ಯಕ್ರಮಕ್ಕೆ ವಿಶೇಷ ಕಳೆ ನೀಡಿದರು.

ಕಾರ್ಯಕ್ರಮದಲ್ಲಿ ಕಲಬುರಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ. ವೀರಣ್ಣ ದಂಡೆ ಉಪಸ್ಥಿತ್ತರಿದ್ದರು. ಶ್ರೀ ಹೆಚ್. ಕೆ. ಉದ್ದಂಡಯ್ಯ ನಿರೂಪಿಸಿದರು.