ಭಕ್ತಿಯ ಹೃದಯವುಳ್ಳ ಭಕ್ತನ ಮನೆಯ ಅಂಗಳವೇ ಶಿವನ ವಾಸ

ಭಾಲ್ಕಿ :ನ.23: ಸುಂದರವಾದ ಜಗತ್ತು ಇದು. ಲಕ್ಷಾಂತರ ಕೋಟ್ಯಾಂತರ ವರ್ಷಗಳಿಂದ ಆಕಾಶದಲ್ಲಿ ಸುತ್ತುತ್ತಾಯಿದೆ, ಇಲ್ಲಿ ಹಸಿರಿದೆ, ಬೆಳಕಿದೆ, ಸುವಾಸನೆ ಇದೆ, ಅಷ್ಟೇ ಅಲ್ಲ ಸೌಂದರ್ಯವಿದೆ. ಆದ್ದರಿಂದ ಈ ಭೂಮಂಡಲ ಅನ್ನುವುದು ಒಂದು ಬಗೆಯ ನಂದನವನ. ಗಂಧರ್ವ ನಗರ, ಅದ್ಭುತ ಅದನ್ನು ನೋಡಿದಷ್ಟು ಕಣ್ಣುಗಳು ಅರಳುತ್ತವೆ.
ನಿಸರ್ಗದಲ್ಲಿನ ಹಕ್ಕಿಗಳ ಹಾಡುವ ಧ್ವನಿ, ಜುಳುಜುಳು ಹರಿವ ನದಿಯ ಧ್ವನಿ, ಕೇಳುತ್ತಾ ಇದ್ದರೆ ಹೊತ್ತು ಹೋಗಿದ್ದೆ ಗೊತ್ತಾಗುವುದಿಲ್ಲ ಎಷ್ಟು ಅದ್ಭುತ ಈ ಜಗತ್ತು.
ಈ ಜಗತ್ತಿನ ನಿರ್ಮಾಣ ಎಷ್ಟು ಸುಂದರ ಎಂತಹ ಅದ್ಭುತ ಕಲೆಗಾರ, ಎಂತಹ ಅದ್ಭುತ ಶಕ್ತಿಯನ್ನು ಹೊಂದಿರುವನು. ಆ ನಿರ್ಮಾತನೆ ಎಷ್ಟು ಸುಂದರ. ಅವನನ್ನೇ ನಾವು ದೇವಾ ಎಂದು ಕರೆಯುವುದು ಅದುವೇ ದಿವ್ಯಶಕ್ತಿ. ಈ ಪೃಥ್ವಿ ನಿರ್ಮಾಣವಾದಾಗ ಪೃಥ್ವಿಯ ಕಣಕಣದಲ್ಲಿ ಅವನು ಇರುವನು. ಹೀಗಾದರೆ ನಮ್ಮಲ್ಲಿಯೂ ನಿಮ್ಮಲ್ಲಿಯೂ ಎಲ್ಲರಲ್ಲಿಯೂ ಅವನಿರುವನು. ಹೀಗಾಗಿ ನಾವು ಈ ಜೀವನವನ್ನು ಸುಂದರವಾಗಿ ಸಾಗಿಸಬೇಕು. ಒಬ್ಬ ಕವಿ ಹೇಳುವನು ಹಕ್ಕಿಯಂತೆ ಹಾಡುವುದು, ಸೂರ್ಯನಂತೆ ಮಿನುಗುವುದು, ನೀರಿನಂತೆ ಹರಿಯುವುದು, ಗಾಳಿಯಂತೆ ಬೀಸುವುದು. ಇದುವೇ ಜೀವನದ ಸಾರ. ನಾವು ಬೇರೆ ಏನೂ ಮಾಡಬೇಕಾಗಿಲ್ಲ, ಎಲ್ಲ ದಾರ್ಶನಿಕರು ಶರಣರೂ ಬೇರೆ ಏನು ಮಾಡಿಲ್ಲ ಎಲ್ಲರೂ ಇದನ್ನೇ ಮಾಡಿದರು. ಅವರ ಕಣ್ಣಿನಲ್ಲಿ ದಿವ್ಯತೆ ಮನಸ್ಸಿನಲ್ಲಿ ಶಾಂತಿ ತುಂಬಿತ್ತು. ಹೇಗೆ ಸುಂದರ ಜೀವನವನ್ನು ಸಾಧಿಸಬೇಕು. ಕಣ್ಣುಗಳಲ್ಲಿ ನೋಡುವ ಶಕ್ತಿ, ಕೈಗಳಲ್ಲಿ ರೂಪಿಸುವ ಶಕ್ತಿ, ಎಂತಹ ಅದ್ಬುತ ಜೀವನ ಸಾಧಿಸಿದವರು ಅವರೇ ಮಹಾನುಭಾವರು. ಎಲ್ಲೋ ಬೆಟ್ಟದ ಮೇಲೆ, ಸಾಗರದಲ್ಲಿ ಅವರು ತಮ್ಮ ಜೀವನವನ್ನು ಸಾಧಿಸಲಿಲ್ಲ ನಮ್ಮ-ನಿಮ್ಮೆಲ್ಲರ ನಡುವೆ ಬದುಕಿದರು ಜೀವನವನ್ನು ಸಾಗಿಸಿದರು. ಬಂಗಲೆ ಕಟ್ಟಲಿಲ್ಲ, ಅರಮನೆ ಕಟ್ಟಲಿಲ್ಲ, ಸಂಪತ್ತು ಮಾಡಲಿಲ್ಲ, ಆದರೆ ಅನುಭಾವದ ಮನೆ ಕಟ್ಟಿದರು, ಶಬ್ದಸಂಪತ್ತನ್ನು ಈ ಜಗತ್ತಿಗೆ ನೀಡಿದರು. ದಾಸಿಮಯ್ಯ ದೇವರದಾಸಿಮಯ್ಯ ಎಂದೇ ಪ್ರಸಿದ್ಧನಾದವರು. ಅವರ ಕಾಯಕ ಬಟ್ಟೆ ನೇಯುವುದು. ದೇವರು ಮೆಚ್ಚಬೇಕು ಎನ್ನುವಂತ ಬಟ್ಟೆಯನ್ನು ನೇಯುವುದು. ಹೇಗೆ ಹೊರಗೆ ಬಟ್ಟೆ ತಯಾರು ಮಾಡುವರು ಹಾಗೆಯೇ ಅವರು ಜೀವನದ ಬಟ್ಟೆಯನ್ನು ನೆಯ್ದರು ತಯಾರು ಮಾಡಿದರು.
ಒಂದು ನೂರು ವರ್ಷಗಳ ಜೀವನ ಹಾಸುಹೊಕ್ಕು ಪವಿತ್ರ ಗೊಳಿಸಿದರು. ಅವರು ತಯಾರಿಸಿದ ಬಟ್ಟೆ ದೇವನಿಗೆ ದಿವ್ಯಾಂಬರ. ಬದುಕು ಹೇಗಿರಬೇಕು ಎಂದರೆ ನೇಯಿಗೆ ಹಾಕಿದ ಹಾಗೆ ಇರಬೇಕು. ನೂರು ವರ್ಷ ಇರುತ್ತದೆ ಬದುಕು ಪ್ರತಿ ಕ್ಷಣ ಕ್ಷಣ ನಮ್ಮ ಮಾತಿನಿಂದ ಹೆಣೆಯ ಬೇಕಾಗುವುದು ಹಾಗೆಯೇ ನೇಯ್ದರು ದಾಸಿಮಯ್ಯರು. ಕಾಯಕದೊಳಗೆ ಹೆಣೆದರು. ಹಾಗೆಯೇ ನಾವು ನೋಡುವುದು, ಕೇಳುವುದು, ಮಾತನಾಡುವುದು, ಮುಟ್ಟುವುದು ಅಂದರೆ ಬದುಕನ್ನು ನೇಯುವುದು, ಒಂದು ಮಾತನಾಡಿದರೆ ಒಂದು ಎಳೆಯನ್ನು ನೇಯ್ದ ಹಾಗೆ, ಬೇರೆ ಯಾರಾದರೂ ನಮಗೆ ಬಟ್ಟೆ ನೇಯ್ದು ಕೊಡಬೇಕಾಗಿಲ್ಲ ನಮ್ಮ ಜೀವನದ ಬಟ್ಟೆ ನಾವೇ ನೇಯ್ದುಕೊಳ್ಳಬೇಕು. ಈಗ ನಾವು ತೊಟ್ಟ ಬಟ್ಟೆ ನಾವು ನೇಯ್ದದ್ದಲ್ಲ ನಾವು ಅದಕ್ಕೆ ಬಣ್ಣ ಹಾಕಿಲ್ಲ, ಆದರೆ ನಮ್ಮ ಜೀವನದ ಬಟ್ಟೆಯನ್ನು ನಾವೇ ನೇಯಬೇಕು. ಎಳೆಗಳು ಕಳಚಿದರು ನಾವೇ ಕಾರಣ ಹರಿದರು ಹಾಸು ಹೋದರು ನಾವೇ ಕಾರಣ ಅದಕ್ಕೆ ಹಾಸು ಕೆಡಬಾರದು. ಎಳೆ ಹರಿಯಬಾರದು ಹಾಗೆ ನಾವು ನಮ್ಮ ಜೀವನವನ್ನು ಸಾಧಿಸಬೇಕು. ಇದೇ ನಮ್ಮ ಬದುಕಿನ ನೆಯ್ಗೆ.
ಮುಂಜಾನೆ ಎದ್ದು ಮಲಗುವರೆಗೂ ಪ್ರತಿ ಕ್ಷಣ ಕ್ಷಣ ನೇಯುತ್ತಲೇ ಇರಬೇಕು. ಪ್ರತಿ ಕ್ಷಣ ಕ್ಷಣ ನಾವೇನು ಮಾಡುವುದು ಅದನ್ನು ನೇಯ್ಗೆ ಎನ್ನುವರು.
ಮಾತನಾಡಿದರೆ ಮಾತಿನ ಎಳೆ, ಕಾರ್ಯ ಮಾಡಿದರೆ ಕಾರ್ಯವೇ ಎಳೆ, ನಡೆದರೆ ಎಳೆ, ನುಡಿದರೆ ಎಳೆ. ಎಳೆ ಚೆನ್ನಾಗಿದ್ದರೆ ಬಟ್ಟೆ ಸುಂದರವಾಗಿರುತ್ತದೆ. ಎಳೆ ತಪ್ಪಿದರೆ ಇನ್ನೇನು ಬದುಕು, ಇನ್ನೇನು ಬಟ್ಟೆ ಮೂರಾಬಟ್ಟೆಯಾಗುವುದು, ಹರಿದುಹೋಗುವುದು.
ಒಮ್ಮೊಮ್ಮೆ ಬಟ್ಟೆ ನಾವೇ
ಹದಗೆಡಿಸುತ್ತೆವೆ, ಒಮ್ಮೊಮ್ಮೆ ಬೈಗಳ ಎಳೆ ಹಾಕುತ್ತೇವೆ, ಬಟ್ಟೆಯ ಬೆಲೆ ಕಡಿಮೆಯಾಗುವುದು. ಇದನ್ನೇ ಹೇಳಿದರು ದಾಸಿಮಾರ್ಯರು.
ಜೀವನದ ಬಟ್ಟೆಯ ಬೆಲೆ ಹೆಚ್ಚಾಗಬೇಕಾದರೆ ಸಾಕ್ಷಾತ್ ಭಗವಂತನೇ ಬಟ್ಟೆ ಉಡಬೇಕು ಹಾಗೆ ಬಟ್ಟೆ ಇರಬೇಕು. ಹಾಗೆ ಬಟ್ಟೆ ಹಾಕಬೇಕಾದರೆ ಬಟ್ಟೆ ಸ್ವಚ್ಛ ಸುಂದರವಾಗಿರಬೇಕು. ಹೇಗೆ ನೇಯ್ಗೆಕಾರ ಸುಂದರವಾಗಿ ಬಟ್ಟೆಯನ್ನು ಹೆಣೆಯುತ್ತಾನೆ ಹಾಗೆ ನಮ್ಮ ಜೀವನವನ್ನು ಸುಂದರವಾಗಿ ನೇಯುವುದೇ ಬದುಕು.
ಅದು ಒಂದು ತಾಸಿನಲ್ಲಿ ಆಗುವುದಿಲ್ಲ ಪ್ರತಿ ಕ್ಷಣ ಕ್ಷಣ ನಾವು ವರ್ಷಗಟ್ಟಲೆ ನೇಯುತ್ತಾ ಇರಬೇಕು ನಾವು ಬದುಕಿರುವವರೆಗೂ ನೇಯುತ್ತಲೇ ಇರಬೇಕು. ಪ್ರತಿಕ್ಷಣ ದೇವರು ನಮಗೆ ಹಾಸು ಹಾಕಿಕೊಟ್ಟಿರುವನು. ನಾವು ಹೊಕ್ಕು ಹಾಕಬೇಕು ನಮ್ಮ ಬದುಕಿನ ನೋಟ ಸುಂದರವಾಗಿರಬೇಕು, ನಮ್ಮ ಬದುಕಿನ ಮಾಟ ಸುಂದರವಾಗಿರಬೇಕು. ಒಂದು ಮನೆಯನ್ನು ಎಷ್ಟು ಸುಂದರವಾಗಿ ಮಾಡುವೆವು ನೋಡಲಿಕ್ಕೆ ಮನೆ ಚೆನ್ನಾಗಿರಬೇಕು ಎಂದು ಕಾಳಜಿ ವಹಿಸುತ್ತೇವೆ. ಹಾಗೆಯೇ ನಮ್ಮ ಮನದ ಬಟ್ಟೆ ಕೆಡದಂತೆ ನೋಡಿಕೊಳ್ಳಬೇಕು ಕಾಳಜಿವಹಿಸಬೇಕು. ಇದು ಕೆಡುತ್ತದೆ ಒಮ್ಮೊಮ್ಮೆ ಹೆಜ್ಜೆ ತಪ್ಪಿತು ಎಂದರೆ ಮಾತು ತಪ್ಪಿತು ಎಂದರೆ ಎಳೆ ಹರಿಯುವುದು, ಆದರೆ ಅದರ ಬೆಲೆ ಬಟ್ಟೆಯ ಬಲೆ ಹರಿದು ಜೋಡಿಸಿದ ಹಾಗೆ ಆಗಬಾರದು ಅಖಂಡ ವಾಗಿರಬೇಕು ಆಗಲೇ ಬೆಲೆ. ನಾವು ಸುಂದರವಾದ ಜೀವನವನ್ನು ಸಾಗಿಸಬೇಕು. ಹಾಗೆಯೇ ಶರಣರು ತಮ್ಮ ವಚನಗಳಲ್ಲಿ ಸುಂದರ ಮಾತುಗಳನ್ನು ನಮಗೆ ನೀಡಿದ್ದಾರೆ. ಪವಿತ್ರವಾದ ಮಾತು, ಬಾಡದ ಮಾಸದ ಮಾತುಗಳನ್ನು ನಮಗೆ ನೀಡಿದ್ದಾರೆ. ಅವರಾಡಿದ ಮಾತು ಇಂದಿಗೂ ಜೀವಂತವಾಗಿವೆ. ಕಿವಿ ತೆಗೆದರೆ ಮಾತು ಕೇಳುತ್ತದೆ, ಮನಸ್ಸು ಬಿಚ್ಚಿ ನೋಡಿದರೆ ಅದರ ಅರ್ಥದ ಸೌರಭ ಮನಸ್ಸಿಗೆ ಬರುತ್ತದೆ ಅಂತಹ ಅದ್ಭುತ ಮಾತುಗಳು. ದಾಸಿಮಯ್ಯನವರದೇನು ದೊಡ್ಡ ದೊಡ್ಡ ಮಾತುಗಳಲ್ಲ ಅವರದ್ದು ಸಣ್ಣಸಣ್ಣ ಮಾತುಗಳೇ.
ವಚನ:
ಅಚ್ಚ ಶಿವೈಕ್ಯಂಗೆ ಹೊತ್ತಾರೆ ಅಮಾವಾಸ್ಯೆ
ಮಟಮಧ್ಯಾಹ್ನ ಸಂಕ್ರಾಂತಿ
ಮತ್ತೆ ಅಸ್ತಮಾನ ಪೌರ್ಣಮಿ ಹುಣ್ಣಿಮೆ
ಭಕ್ತನ ಮನೆಯ ಅಂಗಳವೆ ವಾರಣಾಸಿ ಕಾಣಾ ರಾಮನಾಥ.
ಶಾಂತಿಯನ್ನು ಅನುಭವಿಸುವ ಮನುಷ್ಯನೇ ನಿಜವಾದ ಶಿವೈಕ್ಯ. ಶಿವನನ್ನು ತನ್ನೊಳಗೆ ಕಂಡುಕೊಂಡವರು, ಮನಸ್ಸಿನಲ್ಲಿ ಶಿವಭಾವ, ಹೊರಗೆಲ್ಲ ಶಿವಭಾವ ಅದರಲ್ಲಿ ಒಂದಾಗಿ ಹೋಗಿರುವುದು ಶಿವೈಕ್ಯ. ಶಾಂತಿಯಲ್ಲಿದೆಯೋ ಅದುವೇ ಶಿವ.
ಶಿವಂ, ಶಾಂತಂ, ಚತುಥರ್ಂ, ಮನ್ಯಂತೆ ಸಆತ್ಮ ಸವಿಜ್ಞೇಯಂ.
ಮನಸ್ಸು ಶಾಂತವಾದರೆ ಅಲ್ಲಿಯೇ ಶಿವದರ್ಶನ. ಯಾವ ಭಾವನೆ ಇಲ್ಲ ಯಾವ ವಿಚಾರವಿಲ್ಲ. ಮನಸ್ಸಿನಲ್ಲಿ ಶಿವ ತುಂಬಿದರೆ ಅಲ್ಲಿಯೇ ಶಿವೈಕ್ಯ. ಜೀವನದಲ್ಲಿ ಬೇಕಾದ ಅಪರೂಪದ ಒಂದು ವಸ್ತುವೇ ಶಾಂತಿ. ಎಲ್ಲ ಇದ್ದು ಶಾಂತಿ ಇಲ್ಲದಿದ್ದರೆ ಏನು ಫಲ, ಜೀವನ ವ್ಯರ್ಥವಾಗುವುದು. ಶಾಂತಿ ಇದ್ದರೆ ಮನೆಗೆ ಬೆಲೆ ಶಾಂತಿ ಇದ್ದರೆ ಸಂಪತ್ತಿಗೆ ಬೆಲೆ. ಎಲ್ಲಿ ಶಾಂತಿ ಇರುವುದು ಅಲ್ಲಿ ಶಿವ ಇರುವನು ಅದುವೇ ಶಿವೈಕ್ಯ ಭಾವ. ಪ್ರತಿಕ್ಷಣ ಶಿವೈಕ್ಯ ಯಾವಾಗಲಾದರೊಮ್ಮೆ ಶಿವನಲ್ಲ ಪ್ರತಿಕ್ಷಣ ಇದನ್ನು ನೋಡಿ ಆನಂದ ಪಡುತ್ತಲೇ ಇರುವುದೇ ಶಿವೈಕ್ಯತೆ.
ಶಿವಭಾವ ಒಳಗೆ ಇದ್ದರೆ ಅದುವೇ ಯೋಗ್ಯತೆ ಅದರಲ್ಲಿ ಒಂದಾಗುವುದು.
ಕೈಗಳಿಂದ ಶಾಂತಿಯನ್ನು ಹರವಿಕೊಂಡು ಹೇಗೆ ಮಾಡಿದ ದಾಸಿಮಯ್ಯ. ಜೀವನ ಎಂದರೆ ಅದು. ಅಚ್ಚ ಶಿವೈಕ್ಯನಿಗೆ ಬೆಳಗಿನ ಜಾವವೇ ಅಮಾವಾಸ್ಯೆ ಅದುವೇ ಪ್ರಥಮದಿನ. ಬೆಳಕು ಬರುವ ಪ್ರಥಮ ದಿನ. ಮಟಮಧ್ಯಾಹ್ನ ಸಂಕ್ರಾಂತಿ ಮತ್ತೆ ಸಾಯಂಕಾಲ ಆಯ್ತು ಎಂದರೆ ಹುಣ್ಣಿಮೆ ಪೌರ್ಣಮಿ ಅಂದರೆ
ಜೀವನ ಶುರುವಾಗಿ ದೊಡ್ಡದಾಗುತ್ತಾ ಬಂದು ಪೌರ್ಣಮಿ ಅಂತೆ ಬೆಳಗುವುದೇ ಜೀವನ. ನಮ್ಮದು ಹಾಗೆ ಆಗುವುದು. ಜಗತ್ತಿಗೆ ಬಂದಾಗ ಪ್ರಥಮ, ಜಗತ್ತಿನ ಜೀವನ ಮುಗಿಯುವಾಗ ಪೌರ್ಣಿಮೆ ಹಾಗೆ ನಾವೆಲ್ಲ ಬಾಳಬೇಕು. ಹಾಗೆ ಭಕ್ತನ ಮನೆಯ ಅಂಗಳವೆ ವಾರಣಾಸಿ ಹೀಗೆ ಆಗಬೇಕಾದರೆ ನಮ್ಮ ಎದೆಯಲ್ಲಿ ಭಕ್ತಿಯ ಸುವಾಸನೆ ಹರಿಯಬೇಕು. ಅದುವೇ ಜೀವನ.
ಭಕ್ತ ದೇವಪ್ರೇಮದ ರೂಪ. ಮಾತಿನಲ್ಲಿ ದೇವಪ್ರೇಮ ಕಾರ್ಯದಲ್ಲಿ ದೇವಪ್ರೇಮ.
ಎಲ್ಲಿ ವಿಶ್ವೇಶ್ವರ ವಾಸಿಸಿರುವನು ಅದುವೇ ವಾರಣಾಸಿ.
ಅವನ ಮನೆಯೇ ವಾರಣಾಸಿ ಭಕ್ತನಂಗಳವೇ ವಾರಣಾಸಿ.
ಭಕ್ತಿಯ ಹೃದಯವುಳ್ಳ ಭಕ್ತನ ಮನೆಯ ಅಂಗಳದಲ್ಲಿ ಶಿವನ ವಾಸ, ಅದುವೇ ಶಿವನ ಐಕ್ಯಸ್ಥಾನ.

ಸಂಗ್ರಹ: ???ಸಿದ್ದಲಿಂಗ ಎಸ್. ಮಠಪತಿ ಉಚ್ಚ ತಾ. ಭಾಲ್ಕಿ ಜಿ. ಬೀದರ