ಚಾಮರಾಜನಗರ, ಏ.17:- ಜಗಜ್ಯೋತಿ ಬಸವೇಶ್ವರರು ಭಕ್ತಿ ಜ್ಞಾನ ಭಂಡಾರವಾಗಿದ್ದರು. ಬಸವಾದಿ ಶರಣರು ರಚನೆ ಮಾಡಿದ್ದ ವಚನಗಳನ್ನು ಸಂರಕ್ಷಣೆ ಮಾಡುವಲ್ಲಿ ಅವರ ಅನುಯಾಯಿಗಳು ವಹಿಸಿದ್ದ ಪಾತ್ರ ಮಹತ್ತರವಾದದ್ದು ಎಂದು ಸುತ್ತೂರು ಜಗದ್ಗುರು ವೀರಸಿಂಹಾಸನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ ತಿಳಿಸಿದರು.
ತಾಲೂಕಿನ ಉಮ್ಮತ್ತೂರು ಗ್ರಾಮದ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಸವ ಪುತ್ಥಳಿ ನಿರ್ಮಾಣ ಸಮಿತಿ ಉಮ್ಮತ್ತೂರು ಹಾಗೂ ಸುತ್ತ- ಮುತ್ತಲ ಗ್ರಾಮಸ್ಥರ ವತಿಯಿಂದ ಆಯೋಜನೆ ಮಾಡಿದ್ದ ಬಸವ ಪುತ್ಥಳಿ ಉದ್ಘಾಟನೆ ಹಾಗೂ ಧಾರ್ಮಿಕ ಸಮಾರಂಭವನ್ನು ಉದ್ಗಾಟಿಸಿ ಅವರು ಮತನಾಡಿದರು.
ಕಲ್ಯಾಣ ಕ್ರಾಂತಿಯಾದ ಬಳಿಕ ಶರಣರು ಚೆಲ್ಲಾಪಿಲ್ಲಿಯಾದರು. ಅಂದು ಅವರೆಲ್ಲರು ರಚನೆ ಮಾಡಿದ್ದ ವಚನಗಳನ್ನು ಸಂರಕ್ಷಣೆ ಮಾಡದೇ ಹೋಗಿದ್ದರೆ ಬಸವ ಧರ್ಮ ರಕ್ಷಣೆ ಕಷ್ಟವಾಗಿತ್ತು. ಅವರ ಅನುಯಾಯಿಗಳು ಬಹಳ ಜೋಪಾನವಾಗಿ ತಾಳೆಗರಿಗಳು ಹಾಗೂ ಹಸ್ತ ಅಕ್ಷರ ಪ್ರತಿಗಳನ್ನು ಮಠಮಾನ್ಯಗಳು ಹಾಗೂ ಮನೆಗಳಲ್ಲಿಟ್ಟು ಪೂಜೆ ಸಲ್ಲಿಸುವ ಮೂಲಕ ಸಂರಕ್ಷಣೆ ಮಾಡಿದರು. ವಚನ ಪಿತಾಮಹ ಪು.ಗು ಹಳಕಟ್ಟಿ ಅವರು ಬಹಳ ಶ್ರಮಪಟ್ಟು ಎಲ್ಲವನ್ನು ದಾಖಲೆ ಮಾಡಿದರು. ಇಂಥ ಬಸವ ತತ್ವವನ್ನು ಸಾರುವ ನಾಡು. ನಮ್ಮದಾಗಿದೆ ಎಂದು ಶ್ರೀಗಳು ತಿಳಿಸಿದರು.
ಅಂದಿನ ಮೈಸೂರು ರಾಜರು ಪ್ರಸಿದ್ದ ಗೋಳ ಗುಮ್ಮಟವನ್ನು ನೋಡಲು ವಿಜಯಪುರಕ್ಕೆ ಹೋಗಿದ್ದ ಸಂದರ್ಭದಲ್ಲಿ ಇಲ್ಲಿ ಇಂದು ಜ್ಞಾನ ಗುಮ್ಮಟ ಎಲ್ಲಿ ಇದೆ ಎಂದು ತಿಳಿದುಕೊಂಡು ಹಳಗಟ್ಟಿ ಅವರ ಮನೆಗೆ ಹೋಗಿದ್ದರು. ಅವರ ಶ್ರಮ ಮತ್ತು ಅವರಲ್ಲಿದ್ದ ಜ್ಞಾನ ಸಂಪತ್ತಿಗ್ತೆ ಮೆಚ್ಚಿ ನಿಮಗೆ ನಮ್ಮಿಂದ ಏನು ಬೇಕು ಕೇಳಿ ಎಂದಾಗ ಹಳಕಟ್ಟಿ ಅವರು ಹಸ್ತ ಪ್ರತಿಗಳಲ್ಲಿರುವ ವಚನಗಳನ್ನು ದಾಖಲಿಸುವ ಕಾರ್ಯದಲ್ಲಿ ನಿರತವಾಗಿದ್ದ ಅವರು ಅಕ್ಷರ ಮೊಳೆಗಳನ್ನು ಕೊಡಿಸಿ ಎಂದು ಕೇಳಿಕೊಂಡರದಂತೆ ಎಂದರು.
ಉಮ್ಮತ್ತೂರಿನಲ್ಲಿರುವ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಅವರಣದಲ್ಲಿ ನಿರ್ಮಿಸಿರುವ ಬಸವ ಪುತ್ಥಳಿ ಬಹಳ ಸುಂದರವಾಗಿ ಮೂಡಿ ಬಂದಿದೆ. ದ್ಯಾನ ನಿರತ ಬಸವ ಮೂರ್ತಿ ಬಹಳ ವಿರಳ. ಕುದುರೆ ಮೇಲೆ ಇರುವ ಬಸವಣ್ಣ ಅನ್ನು ಮಾತ್ರ ನಾವು ನೋಡಿದ್ದೇವೆ. ಈಗ ಬಸವಣ್ಣ ಧ್ಯಾನದ ಸಂಕೇತವಾಗಿದ್ದಾರೆ. ಈ ಭಾಗಕ್ಕೆ ಬರುವ ಜನರು ಕೊಟ್ಟೂರು ಬಸವೇಶ್ವರರಿಗೆ ಪೂಜೆ ಸಲ್ಲಿಸಿ ಧ್ಯಾನದ ಮಗ್ನರಾಗಿರುವ ಬಸವಣ್ಣನನ್ನು ನೋಡುವ ಭಾಗ್ಯ ಲಭಿಸಿದೆ. ಇಲ್ಲಿ ಸುಂದರವಾದ ಉದ್ಯಾನವನ ನಿರ್ಮಾಣಗೊಂಡು ಮನಸ್ಸಿಗೆ ನೆಮ್ಮದಿಯನ್ನು ನೀಡುವ ತಾಣವಾಗಲಿ ಎಂದು ಸುತ್ತೂರುಶ್ರೀಗಳು ಅಶಿಸಿದರು.
ಕುಂದೂರು ಮಠದ ಶ್ರೀ ಶರತ್ ಚಂದ್ರಸ್ವಾಮೀಜಿ ಬಸವಣ್ಣರವರ ಕುರಿತು ಪ್ರವಚನ ನೀಡಿದರು. ಕಾರ್ಯಕ್ರಮದಲ್ಲಿ ಸೋಮಹಳ್ಳಿ ವೀರಸಿಂಹಾಸನ ಮಠ ಶ್ರೀ ಸಿದ್ದಮಲ್ಲ ಸ್ವಾಮೀಜಿ, ವಾಟಾಳ್ ಮಠದ ಸೂರ್ಯಾಸಿಂಹಾಸನ ಮಠದ ಶ್ರೀ ಸಿದ್ದಲಿಂಗ ಶಿವಚಾರ್ಯಸ್ವಾಮೀಜಿ, ಮರಳಗವಿ ಕ್ಷೇತ್ರದ ಮಠದ ಶ್ರೀ ಮುಮ್ಮಡಿ ಶಿವರುದ್ರಮಹಾಸ್ವಾಮೀಜಿ, ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ ಮಾತನಾಡಿದರು.
ಹರವೆ ವಿರಕ್ತ ಮಠದ ಶ್ರೀ ಸರ್ಪಭೂಷಣ ಸ್ವಾಮಿಜೀ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು.
ಬಸವ ಪುತ್ಥಳಿ ನಿರ್ಮಾಣ ಸಮಿತಿಯ ಅಧ್ಯಕ್ಷ ಉಮ್ಮತ್ತೂರು ಜಗದೀಶ, ಗೌರವ ಅಧ್ಯಕ್ಷ ಉಮ್ಮತ್ತೂರು ಬಸವರಾಜು, ಜಿಲ್ಲಾ ಬಸವ ಕೇಂದ್ರ ಅಧ್ಯಕ್ಷ ಎಚ್‍ರಿಎಚ್ ಮಹದೇವಸ್ವಾಮಿ, ಸಮಿತಿಯ ನಿರ್ದೇಶಕರಾದ ಫಣೀರಾಜಮೂರ್ತಿ, ಬಾಗಳಿ ಮಲ್ಲೇಶ್, ಸುಭಾಷ್ ಮಾದಲಾದವರು ಇದ್ದರು.