ಭಕ್ತಿಪೂರ್ವಕ, ಸಡಗರದಿಂದ ನಡೆದ ಸಂಕ್ರಾಂತಿ ಹಬ್ಬ

ಕೃಷ್ಣಾ, ತುಂಗಭದ್ರಾ ನದಿಗಳಲ್ಲಿ ಪುಣ್ಯಸ್ನಾನ ಮಾಡಿದ ಜನರು
ರಾಯಚೂರು.ಜ.೧೬- ನಗರ ಸೇರಿ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಭಾನುವಾರ ಸಂಕ್ರಾಂತಿ ಹಬ್ಬದ ಆಚರಣೆ ನಡೆಯಿತು.
ಸಂಕಮಣದ ಅಂಗವಾಗಿ ಜನರು ಜಿಲ್ಲೆಯಲ್ಲಿ ಕೃಷ್ಣ ಮತ್ತು ತುಂಗಭದ್ರಾ ನದಿಗಳ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಕುಟುಂಬ ಸಮೇತ ತೆರಳಿದ ಜನ ಪುಣ್ಯಸ್ನಾನ ಮಾಡಿದರು. ಕೃಷ್ಣೆಯಲ್ಲಿ ಉತ್ತಮ ನೀರಿದ್ದರೆ, ತುಂಗಭದ್ರಾದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಆದರೂ, ಜನ ತಂಡೋಪತಂಡವಾಗಿ ನದಿಯಲ್ಲಿ ಮಿಂದು ಪೂಜೆ ಸಲ್ಲಿಸಿದರು.
ಬಳಿಕ ನದಿ ತಡದಲ್ಲಿ ಜನರು ಕುಳಿತುಕೊಂಡು ಸಜ್ಜೆ ರೊಟ್ಟಿ, ಎಳ್ಳು, ಶೇಂಗಾದ ಹೋಳಿಗೆ, ಭರ್ತ (ತರಕಾರಿ ಖಾದ್ಯ), ಎಣ್ಣೆ ಬದನೆಕಾಯಿ, ಚಿತ್ರಾನ್ನ, ಮೊಸರನ್ನ ಸೇರಿದಂತೆ ಹಲವು ಬಗೆ ಬಗೆಯ ಭಕ್ಷ್ಯ ಖಾದ್ಯಗಳನ್ನು ಬೋಜನವನ್ನು ಸವಿದರು.
ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ, ಧಾರ್ಮಿಕ ತಾಣಗಳಾದ ಗೂಗಲ್ ಪ್ರಭುಸ್ವಾಮಿ, ಕೃಷ್ಣಾ, ಕುರುವಪುರ, ನಾರದಗಡ್ಡೆ, ಎಲೆ ಬಿಚ್ಚಾಲಿ, ರಾಜಲಬಂಡಾ, ಮಂತ್ರಾಲಯ, ಕೊಪ್ಪರದ ಲಕ್ಷ್ಮಿನರಸಿಂಹ ಸ್ವಾಮಿ, ತಿಂಥಿಣಿ ಮೌನೇಶ್ವರ, ಗುರುಗುಂಟಾ ಅಮರೇಶ್ವರ, ನಾರದಗಡ್ಡೆ, ರಾಮಗಡ್ಡೆಗಳಿಗೆ ಜನರು ತೆರಳಿ ದೇವರ ದರ್ಶನವನ್ನು ಪಡೆದುಕೊಂಡರು.
ಪ್ರತಿವರ್ಷದಂತೆ ಈ ವರ್ಷವೂ ಸಂಕ್ರಾಂತೊ ಹಬ್ಬದ ಅಂಗವಾಗಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಶ್ರೀರಾಯರ ಬೃಂದಾವನದ ದರ್ಶನ ಪಡೆದರು.ತುಂಗಭದ್ರಾ ನದಿ ಪಾತ್ರದ ಬಿಚ್ಚಾಲಿ, ಮಂತ್ರಾಲಯ, ಚೀಕಲಪರ್ವಿ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದರು.
ನಗರದ ನಂದೀಶ್ವರ ದೇವಸ್ಥಾನ, ಚಂದ್ರಮೌಳೇಶ್ವರ, ನಗರೇಶ್ವರ, ದೇವಸೂಗೂರಿನ ಶ್ರೀ ಸೂಗೂರೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಗ್ರಾಮೀಣ ಭಾಗದಲ್ಲೂ ಎತ್ತು ಓಡಿಸುವ, ಕಲ್ಲು ಎತ್ತುವ, ಉಸುಕಿನ ಚೀಲ ಹೊರುವ ಸ್ಪರ್ಧೆಯಂಥ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಸಂಕ್ರಾಂತಿ ಹಬ್ಬದ ವಿಶೇಷವೆಂದ ಮನೆ ಮುಂದೆ ಪಾಂಡವರ ಪ್ರತಿಷ್ಠಾಪನೆ ಹಾಗೂ ರಂಗೋಲಿ ಹಾಕಿ ಅಲಂಕರಿಸಿರುವದು ಕಂಡುಬಂದಿತು.