ಭಕ್ತರ ಹಷೋದ್ಗಾರದ ನಡುವೆ ಹರಿದ ಭಂಕೂರ ಕರಿ

ಶಹಾಬಾದ:ಜೂ.7:ತಾಲೂಕಿನ ಐತಿಹಾಸಿಕವಾಗಿ ಪ್ರಸಿದ್ದವಾದ ಭಂಕೂರ ಕಾರಹುಣ್ಣಿಮೆ ಕರಿ ಸೋಮವಾರ ಸಂಜೆ ಭಕ್ತರ ಹಷೋದ್ಗಾರದ ನಡುವೆ, ಶಂಕರಾವ ಕುಲಕರ್ಣಿ ಕರಿ ಹರಿಯುವ ಮೂಲಕ ಸಂಪನ್ನಗೊಂಡಿತು. ಗ್ರಾಮೀಣ ಸೊಗಡಿನ, ರೈತರ, ಎತ್ತುಗಳ ಹಬ್ಬವಾಗಿರು ಕಾರಹುಣ್ಣಿಮೆ ಕರಿಯನ್ನು ಭಂಕೂರನಲ್ಲಿ ಗ್ರಾಮ ದೇವತೆ ಕೆರೆಯಮ್ಮಾ ದೇವಿ ಹೆಸರಿನಲ್ಲಿ ಸುಮಾರು 600 ವರ್ಷಗಳಿಂದ ವ್ಯವಸ್ಥಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಕಾರಹುಣ್ಣಿಮೆ ದಿನವಾದ ಭಾನುವಾರ ಸಂಜೆ 9 ಗಂಟೆಗೆ ಗ್ರಾಮ ದೇವತೆ ಕೆರೆಯಮ್ಮಾ ದೇವಿ ಮೂಲ ಮೂರ್ತಿಯನ್ನು ವಿಶೇಷ ಬಂಡಿಯಲ್ಲಿ ರಾತ್ರಿ ಕಾಗಿಣಾ ನದಿಗೆ ಗಂಗಾಸ್ನಾನಕ್ಕೆ ಕರೆದುಕೊಂಡು ಹೋಗಲಾಯಿತು. ಬೆಳಗ್ಗೆ ಸುಮಾರು 4 ಗಂಟೆ ಸುಮಾರಿಗೆ ಗ್ರಾಮದ ಮುಖ್ಯ ದ್ವಾರದ ಬಳಿ ಬಂದಾಗ ಗ್ರಾಮಸ್ಥರು ದೇವಿಗೆ ಹೂವು,ಹಣ್ಣು, ಕಾಯಿ, ನೈವೇದ್ಯ ಅರ್ಪಿಸಿ ಕೃತಾರ್ಥರಾದರು. ನಂತರ ದೇವಿಯನ್ನು ಭವ್ಯ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತಂದು ಸ್ಥಾಪಿಸಲಾಯಿತು.

ಸಂಜೆ 4 ಗಂಟೆಗೆ ಕೆರೆಮ್ಮಾ ದೇವಿಯ ಸಹೋದರಿ ಅಂಕಲಮ್ಮಾ ದೇವಿ ದೇವಸ್ಥಾನದ ಬಳಿ ಕರಿ ಹರಿಯುವ ಬಂಡಿಯನ್ನು ವಿಶೇಷ ಅಲಂಕಾರದೊಂಗೆ ಸಿದ್ದಪಡಿಸಲಾಯಿತು. ಮಾನಕಾರ ಕುಟುಂಬಸ್ಥರು ಬಂಡಿಗೆ ಕಟ್ಟಲು, ಹಾಗೂ ಗ್ರಾಮದ ಮಹಾದ್ವಾರಕ್ಕೆ ಕಟ್ಟಲು ಕರಿಯನ್ನು (ಹಗ್ಗಕ್ಕೆ ಬೇವು ಕಟ್ಟಿ) ಒದಗಿಸಿದರು. ಮಜ್ಜಿಗೆ ಗೌಡರು ಕುಂಭವನ್ನು ಒದಗಿಸಿದರು. ಗ್ರಾಮದ ತಳವಾರರು ಕರಿ ಹರಿಯಲು ಖಡ್ಗವನ್ನು ಒದಗಿಸಿದರು. ಶಂಕರಾವ ಕುಲಕರ್ಣಿ ಖಡ್ಗದೊಂದಿಗೆ ಬಂಡಿಯನ್ನು ಏರಿದರು. ಮಜ್ಜಿಗೆ ಗೌಡರು ಬಾರಕೋಲ ಹಿಡಿದು ಸಾರಥ್ಯವನ್ನು ವಹಿಸಿದರು. ಕುಂಭ ಪೂಜೆಯ ನಂತರ ವಿವಿಧ ವಾದ್ಯಗಳೊಂದಿಗೆ ಕರಿ ಹರಿಯುವ ಬಂಡಿ ದೇವಸ್ಥಾನದತ್ತ ಮೆರವಣಿಗೆಯೊಂದಿಗೆ ಸಾಗಲಾಯಿತು. ದಾರಿಯುದ್ದಕ್ಕೂ ರೈತರು ತಮ್ಮ ಎತ್ತುಗಳನ್ನು ಬಂಡಿಗೆ ಕಟ್ಟಿ ಕೃಥಾರ್ಥರಾದರು. ಸಂಜೆ 6 ಗಂಟೆಗೆ ದೇವಸ್ಥಾನಕ್ಕೆ ಆಗಮಿಸಿದ ನಂತರ ದೇವರ ದರ್ಶನ ಪಡೆದು, ಕುಂಭ ಪೂಜೆಯ ನಂತರ ದಿಬ್ಬದ ಮೇಲಿಂದ ಬಂಡಿ ಓಡುವ ಮೈನವಿರೇಳಿಸುವ ದೃಶ್ಯಕ್ಕೆ ಸಾವಿರಾರು ಜನ ಸಾಕ್ಷಿಯಾದರು. ಸಂಜೆ 8 ಗಂಟೆಗೆ ಗ್ರಾಮದ ಮುಖ್ಯ ದ್ವಾರಕ್ಕೆ ಕಟ್ಟಿದ ಕರಿಯನ್ನು ಓಡುತ್ತಿರುವ ಬಂಡಿಯಿಂದ ಕುಲಕರ್ಣಿ ಕರಿಯನ್ನು ಖಡ್ಗದಿಂದ ಕತ್ತರಿಸುವದರೊಂದಿಗೆ ಜನಪದ ಜಾತ್ರೆ ಸಂಪನ್ನಗೊಂಡಿತು. ಕರಿ ಹರಿಯುವ ನಿಮಿತ್ತ ಗ್ರಾಮ ದೇವತೆ ಕರೆಯಮ್ಮಾ ದೇವಿ ಹೆಸರಿನಲ್ಲಿ ಕರಿ ಹರಿಯುವವರು, ಬಂಡಿ ಓಡಿಸುವವರು, ಬಂಡಿಯನ್ನು ಹಿಡಿಯುವ ತಳವಾರರು, ಬಂಡಿಯನ್ನು ಹೊತ್ತು ಓಡುವ ಎತ್ತುಗಳ ಸಹ ಉಪವಾಸವಿದ್ದು ಕರಿ ಕರಿದ ನಂತರ ಊಟ ಮಾಡುವದು ವಿಶೇಷವಾಗಿದೆ. ಪಿಐ ರಾಘವೇಂದ್ರ, ಎಎಸ್‍ಐ ವೆಂಕಟೇಶ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಚನ್ನವೀರ ಮಾಲಿ ಪಾಟೀಲ, ಶಶಿಕಾಂತ ಮಾಲಿ ಪಾಟೀಲ ಅಮೃತ ಮಾನಕರ, ಬಿಜೆಪಿ ತಾಲೂಕ ಅಧ್ಯಕ್ಷ ನೀಲಕಂಠ ಪಾಟೀಲ, ಸುರೇಶ ಕುಲಕರ್ಣಿ, ಮಾರ್ಥಂಡ ಕುಲಕರ್ಣಿ, ಈರಣ್ಣ ಕಾರ್ಗಿಲ, ಲಕ್ಷ್ಮೀ ಕಾಂತ ಕಂದಗೋಳ, ಯಶವಂತರಾವ ಪಾಟೀಲ, ನಾನಾಸಾಹೇಬ ಮಾನಕರ, ಪ್ರಕಾಶ ಜೋಶಿ, ಭೀಮರಾವ ಮಜ್ಜಿಗಿ, ಅಶೋಕ ಮಜ್ಜಿಗಿ, ಶರಣಗೌಡ ಪಾಟೀಲ, ಅಮೃತಗೌಡ ಘಟ್ಟದ, ಮಲ್ಲಿಕಾರ್ಜುನ ಪೂಜಾರಿ, ಶಂಕರಗೌಡ ರಾಮಗೂಂಡ, ಭೀಮರಾವ ಶಿರಗೂಂಡ, ಸುರೇಶ ಮೆಂಗನ್, ಶರಣಬಸಪ್ಪ ಧನ್ನಾ ಸೇರಿದಂತೆ ಸಾವಿರಾರು ಜನ ಪಾಲ್ಗೊಂಡಿದ್ದರು.