ಭಕ್ತರ ಶ್ರದ್ಧಾ ಕೇಂದ್ರ ಶ್ರೀಗಳ ಗದ್ದುಗೆ

ತುಮಕೂರು: ಬಡ ಮಕ್ಕಳ ಪಾಲಿನ ಶ್ರದ್ಧಾ ಕೇಂದ್ರವಾಗಿರುವ ಸಿದ್ದಗಂಗಾ ಮಠದಲ್ಲಿ ನಡೆದಾಡುವ ದೇವರು ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಐಕ್ಯರಾಗಿರುವ ಗದ್ದುಗೆ ಮಂದಿರ ಈಗ ಭಕ್ತರ ಪಾಲಿನ ಆರಾಧ್ಯ.
ಸುಮಾರು ೮೦ ವರ್ಷಗಳಿಗೂ ಅಧಿಕ ಕಾಲ ನಡೆದಾಡುವ ದೇವರಾಗಿ ಶ್ರೀಕ್ಷೇತ್ರಕ್ಕೆ ಆಗಮಿಸುತ್ತಿದ್ದ ಭಕ್ತರನ್ನು ಆಶೀರ್ವದಿಸುತ್ತಿದ್ದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ೧೧೧ ವರ್ಷಗಳ ಕಾಲ ಸಾರ್ಥಕ ಬದುಕು ನಡೆಸಿ ಶಿವೈಕ್ಯರಾದ ಬಳಿಕ ಶ್ರೀಗಳ ಗದ್ದುಗೆ ಭಕ್ತರ ಇಷ್ಟಾರ್ಥ ಸಿದ್ದಿಸುವ ಪ್ರಮುಖ ಶ್ರದ್ಧಾ ಕೇಂದ್ರವಾಗಿದೆ.
ಸಿದ್ದಗಂಗೆಯ ಪ್ರಮುಖ ಶ್ರದ್ಧಾ ಕೇಂದ್ರಗಳಲ್ಲಿ ಶ್ರೀಗಳು ಐಕ್ಯರಾಗಿರುವ ಗದ್ದುಗೆ ಮಂದಿರ ಭಕ್ತರ ಪಾಲಿನ ಶಿವಾಲಯ. ಶ್ರೀಕ್ಷೇತ್ರಕ್ಕೆ ಬರುವ ಭಕ್ತರೆಲ್ಲರೂ ಮೊದಲು ಶ್ರೀಗಳ ಗದ್ದುಗೆ ಮಂದಿರಕ್ಕೆ ತೆರಳಿ ಗದ್ದುಗೆ ದರ್ಶನ ಪಡೆದ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸುವುದು ಸಂಪ್ರದಾಯ.
ಶ್ರೀಕ್ಷೇತ್ರದಲ್ಲಿ ಶ್ರೀಗಳ ಗದ್ದುಗೆ ಮಂದಿರ ಭಕ್ತರ ಸೆಳೆಯುವ ಪ್ರಮುಖ ಧಾರ್ಮಿಕ ಕೇಂದ್ರ. ಗದ್ದುಗೆ ಮಂದಿರವನ್ನು ಶಿವಾಲಯದಂತೆ ಶ್ರೀಗಳ ಇಚ್ಛೆಯಂತೆ ಧಾರ್ಮಿಕ ವಿಧಿವತ್ತಾಗಿ ನಿರ್ಮಿಸಲಾಗಿದ್ದು, ಭಕ್ತರಿಗೆ ನೆಮ್ಮದಿ ನೀಡುವ ತಾಣವಾಗಿದೆ.


ಶ್ರೀಮಠದಲ್ಲಿ ನಡೆಯುವ ಶ್ರೀ ಸಿದ್ದಲಿಂಗೇಶ್ವರ ಜಾತ್ರೆ, ಶ್ರೀಗಳ ಪುಣ್ಯ ಸ್ಮರಣೆ, ಜನ್ಮ ಜಯಂತ್ಯೋತ್ಸವ ಸೇರಿದಂತೆ ಅನೇಕ ಧಾರ್ಮಿಕ ಸಮಾರಂಭಗಳಂದು ಗದ್ದುಗೆ ಮಂದಿರವನ್ನು ಅತ್ಯಾಕರ್ಷಕವಾಗಿ ಅಲಂಕರಿಸಲಾಗುತ್ತದೆ.
ಹಾಗೆಯೇ ಮಂದಿರದೊಳಗಿರುವ ಶ್ರೀಗಳ ಗದ್ದುಗೆಗೂ ವಿಶೇಷವಾಗಿ ಅಲಂಕಾರ ಮಾಡಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ನೆರವೇರುತ್ತದೆ. ಹೀಗಾಗಿ ಶ್ರೀಮಠಕ್ಕೆ ಬರುವ ಭಕ್ತರು ಗದ್ದುಗೆ ಮಂದಿರಕ್ಕೆ ಭೇಟಿ ನೀಡಿ ಶ್ರೀಗಳ ಗದ್ದುಗೆ ದರ್ಶನ ಮಾಡಿದರೆ ಶ್ರೀಗಳನ್ನೆ ನೋಡಿದಷ್ಟು, ಅವರಿಂದ ಆಶೀರ್ವಾದ ಪಡೆದಷ್ಟು ಧನ್ಯತೆಗೆ ಒಳಗಾಗುತ್ತಾರೆ.
ಪ್ರತಿನಿತ್ಯ ಶ್ರೀಗಳ ಗದ್ದುಗೆಗೆ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಧಾರ್ಮಿಕ ಪೂಜಾದಿಗಳು ನೆರವೇರಲಿದ್ದು, ಮಕ್ಕಳು, ಭಕ್ತಾದಿಗಳು ಪ್ರತಿನಿತ್ಯದ ಪೂಜೆಗೆ ಸಾಕ್ಷಿಯಾಗುತ್ತಾರೆ.
ಗದ್ದುಗೆಯಷ್ಟೆ ಪ್ರಾತಿನಿಧ್ಯವನ್ನು ಶ್ರೀಗಳ ಧ್ಯಾನ ಮಂದಿರವೂ ಹೊಂದಿದೆ. ಗದ್ದುಗೆ ದರ್ಶನ ಪಡೆದ ಭಕ್ತರು, ರಾಜಕಾರಣಿಗಳು, ಗಣ್ಯರು ಧ್ಯಾನ ಮಂದಿರಕ್ಕೆ ತೆರಳಿ ಕೆಲ ಹೊತ್ತು ಶ್ರೀಗಳ ಮೂರ್ತಿ ಮುಂದೆ ಧ್ಯಾನ ಮಾಡುವುದೂ ಉಂಟು.
ಶ್ರೀಗಳ ಧ್ಯಾನ ಮಂದಿರದಲ್ಲಿ ಕೊಂಚ ಧ್ಯಾನ ಮಾಡಿದರೆ ಮನಸ್ಸಿಗೆ ಶಾಂತಿ-ನೆಮ್ಮದಿ ದೊರೆಯುತ್ತದೆ ಎಂಬುದು ಭಕ್ತರ ಮನದಾಳದ ಮಾತು.
ಕಾಯಕವೇ ಕೈಲಾಸ ಎಂಬ ಶರಣರ ವಾಣಿಯನ್ನು ರೂಢಿಸಿಕೊಂಡಿದ್ದ ಶ್ರೀಗಳು ಐಕ್ಯರಾಗಿರುವ ಗದ್ದುಗೆ, ಧ್ಯಾನ ಮಂದಿರಗಳು ಭಕ್ತರ ಇಷ್ಟಾರ್ಥ ಸಿದ್ದಿಸುವ ಕೇಂದ್ರಗಳು. ಶ್ರೀಗಳು ಗದ್ದುಗೆಯಿಂದಲೇ ಮಠದ ಮಕ್ಕಳು, ಭಕ್ತ ಸಮೂಹಕ್ಕೆ ಆಶೀರ್ವದಿಸುತ್ತಾ ಶ್ರೀಕ್ಷೇತ್ರದ ನಿರಂತರ ಕಾಯಕಗಳಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ.