ಭಕ್ತರ ಮನೆಗೆ ಭಗವಂತ

ಕಲಬುರಗಿ,ಮಾ. 18: ಹೋಳಿ ಹುಣ್ಣಿಮೆಯಿಂದ ದವನದ ಹುಣ್ಣಿಮೆಯವರೆಗೂ ಆಂಧ್ರಪ್ರದೇಶದ ಶ್ರೀಶೈಲದಲ್ಲಿ ನಡೆಯುವ ಮಲ್ಲಿಕಾರ್ಜುನ ಜಾತ್ರೆಗೆ ಕಲ್ಯಾಣ ಕರ್ನಾಟಕ ಮತ್ತು ಮುಂಬೈ ಕರ್ನಾಟಕದಿಂದ ಪಾದಯಾತ್ರೆ ಮುಖಾಂತರ ತೆರಳುವದು ಶತಮಾನಗಳಿಂದಲೂ ನಡೆದು ಬಂದಿದೆ.
ಹಿಂದೆಲ್ಲ ಇಷ್ಟೊಂದು ವಾಹನ ಸೌಕರ್ಯ ಇರಲಿಲ್ಲ. ಕಾಡು ಮೇಡುಗಳಲ್ಲಿ ನಡೆದುಕೊಂಡೆ ಹೋಗಬೇಕಿತ್ತು. ಆಗ ಮರಳಿ ಊರಿಗೆ ಬರಲು ಒಂದು ತಿಂಗಳು ಬೇಕಾಗಿತ್ತು. ಯಾತ್ರಿಕರ ಪ್ರತಿ ಊರಿನವರ ಜೊತೆ ಶ್ರೀಶೈಲ ಮಲ್ಲಿಕಾರ್ಜುನನ( ಮಲ್ಲಯ್ಯ) ಪ್ರತೀಕವಾದ ಒಂದೊಂದು ಕಂಬಿಯೂ ಹೊರಡುವವು. ಊರು ದೊಡ್ಡದಿದ್ದರೆ ಒಂದಕ್ಕಿಂತ ಹೆಚ್ಚು ಕಂಬಿ ಹೊರಡುವವು. ಪಾದಯಾತ್ರೆಗೆ ಮುನ್ನ ಗ್ರಾಮದ ಹಲವಾರು ಭಕ್ತರ ಮನೆಗಳಿಗೆ ಕಂಬಿ ಮಲ್ಲಯ್ಯ ಭೇಟಿ ನೀಡಿದಾಗ,ಪೂಜೆ ನೈವೇದ್ಯ ಅರ್ಪಿಸುವರು.
ಕಂಬಿಯನ್ನು ಶ್ರೀಶೈಲಕ್ಕೆ ಹೊತ್ತೊಯ್ದು ಮರಳಿ ಊರಿಗೆ ತರುವದು ಆಯಾ ಊರಿನ ಜಂಗಮ ಕುಟುಂಬದ ಹಕ್ಕು ಮತ್ತು ಕರ್ತವ್ಯ .ಆ ಕುಟುಂಬದ ಗೌರವ ಮತ್ತು ಪ್ರತಿಷ್ಠೆಯ ವಿಷಯ ಕೂಡಾ.
ಹಿಂದೆ ವಾಹನ ಸೌಕರ್ಯವಿಲ್ಲದ ಕಾಲದಲ್ಲಿ ಜನರು ಕಾಲ್ನಡಿಗೆಯಲ್ಲೇ ಶ್ರೀಶೈಲಕ್ಕೆ ಹೋಗುತ್ತಿದ್ದರು. ಈಗಲೂ ಆ ಪರಂಪರೆ ಮುಂದುವರೆದಿದೆ. ಸುಮಾರು 500 ರಿಂದ 600 ಕಿ.ಮೀ. ದೂರ ಹೋಗುವರು. ಹೀಗೆ ದಿನಕ್ಕೆ 50 ರಿಂದ 60 ಕಿ.ಮೀ ದೂರ ನಡೆಯಬೆಕಾಗುತ್ತದೆ. ಭಕ್ತರಿಗೆ ಅಲ್ಲಲ್ಲಿ ಊಟ, ಉಪಹಾರ ವಸತಿ ವ್ಯವಸ್ಥೆ ಇರುತ್ತದೆ. ಕೆಲವು ಅವಶ್ಯ ವಸ್ತುಗಳಿಂದ ತೆರಳುವರು. ಶ್ರೀಶೈಲದಲ್ಲಿರುವ ಕೃಷ್ಣಾ ನದಿ ದಡದಲ್ಲಿ ವಿದ್ಯುಕ್ತವಾಗಿ ಕಂಬಿ ಮಲ್ಲಯ್ಯನಿಗೆ ಪೂಜೆ ಸಲ್ಲಿಸಲಾಗುವದು. ಆ ಸ್ಥಳಕ್ಕೆ ಪಾತಾಳ ಗಂಗೆ ಎಂದೂ ಕರೆಯುವರು.ನಂತರ ಕಂಬಿ ಮಲ್ಲಯ್ಯನನ್ನು ಮರಳಿ ದವನದ ಹುಣ್ಣಿಮೆಯಂದು ಗೋಲಗೇರಿ ಜಾತ್ರೆ ದಿನ ಬಂದು ಮರಳಿ ಊರಿಗೆ ತೆರಳಿ ಐದು ದಿನಗಳ ಕಾಲ ಆಯಾ ಗ್ರಾಮದಲ್ಲಿ ಮನೆ ಮನೆಗೆ ತೆರಳುವರು. ಆಸಮಯದಲ್ಲಿ ಕಂಬಿಗೆ ಜನರು ಬೆಲ್ಲ ಹಾಗೂ ಸಕ್ಕರೆ ನೈವೇದ್ಯ ಕೊಡುವ ಸಂಪ್ರದಾಯವಿದೆ.
-ಗುರು ಪಟ್ಟಣಶೆಟ್ಟಿ.ಕಲಬುರಗಿ