“ಭಕ್ತರ ದೇಣಿಗೆಯಿಂದ ಶ್ರೀನಾಗನಾಥೇಶ್ವರ ಗುಡಿ ಮಹದ್ವಾರ, ಗರ್ಭಗುಡಿ ಗೋಪುರಗಳ ನಿರ್ಮಾಣ”


ಸಂಜೆವಾಣಿ ವಾರ್ತೆ
ಸಿರಿಗೇರಿ ಜು 28. ಪುರಾತನ ಐತಿಹಾಸಿಕ ಹೊಯ್ಸಳರ ಕಾಲದ ಕಲೆ ವಿನ್ಯಾಸದಲ್ಲಿರುವ ಸಿರಿಗೇರಿ ಗ್ರಾಮದ ಗ್ರಾಮ ದೇವರು ಶ್ರೀ ನಾಗನಾಥೇಶ್ವರ ದೇವಸ್ಥಾನದ ಮಹದ್ವಾರದ ಗೋಪುರ, ಸ್ವಾಮಿಯ ಗರ್ಭಗುಡಿ ಗೋಪುರ, ಪಾರ್ವತಿ ದೇವಿ ದೇವಸ್ಥಾನದ ಗೋಪುರ, ಮೇಲ್ಛಾವಣೆ ವಿನ್ಯಾಸದ ನಿರ್ಮಾಣ ಕಾರ್ಯವು ಭರದಿಂದ ಸಾಗಿದೆ. ಸುಮಾರು 40 ಲಕ್ಷ ರೂ. ಗಳ ಅಂದಾಜು ಮೊತ್ತದಲ್ಲಿ ದೇವಸ್ಥಾನವನ್ನು ವಿನ್ಯಾಸಗೊಳಿಸುವ ಕೆಲಸವನ್ನು ದೇವಸ್ಥಾನದ ಸಮಿತಿ ಮತ್ತು ಗ್ರಾಮದ ಮುಖಂಡರಿಂದ ಕೈಗೆತ್ತಿಕೊಳ್ಳಲಾಗಿದೆ. ಸಂಪೂರ್ಣ ವೆಚ್ಚವು ಭಕ್ತರು, ದಾನಿಗಳ ದೇಣಿಗೆ ಹಣದಲ್ಲಿಯೇ ನಡೆಯುತ್ತಿದ್ದು. ದೇವಸ್ತಾನದ ಧರ್ಮದರ್ಶಿ ಬಿ.ಮಹಾರುದ್ರಗೌಡ ಇವರ ನೇತೃತ್ವದಲ್ಲಿ ದೇವಸ್ಥಾನದ ವಿನ್ಯಾಸದ ಕಾಮಗಾರಿ ನಡೆಸಲಾಗುತ್ತಿದೆ. ದೇವಸ್ಥಾನವನ್ನು ಹಳೆಯ ಮಾದರಿಯಿಂದ ಸಂಪೂರ್ಣ ಬದಲಿಸಿ ಹೊಸ ಮಾದರಿಯ ರೂಪ ನೀಡಲಾಗುತ್ತಿದೆ.
ಕಾಶೀ ವಿಶ್ವನಾಥ ದೇವಸ್ತಾನ ಗೋಪುರದ ಮಾದರಿ: ಶ್ರೀನಾಗನಾಥೇಶ್ವರ ದೇವಸ್ಥಾನದ ಗರ್ಭಗುಡಿಯ ಗೋಪುರವನ್ನು ಪುಣ್ಯಕ್ಷೇತ್ರ ಶ್ರೀಕಾಶಿ ವಿಶ್ವನಾಥ ದೇವಸ್ಥಾನದ ಗರ್ಭಗುಡಿಯ ಗೋಪುರದ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ದೇವಸ್ಥಾನದ ಮಹದ್ವಾರದ ಗೋಪುರವನ್ನು ರಾಜ ಗೋಪುರ ಮಾದರಿಯಲ್ಲಿ, ಮತ್ತು ಶ್ರೀಪಾರ್ವತಿದೇವಿಯ ಗರ್ಭಗುಡಿ ಗೋಪುರವನ್ನು ದೇವಿಯ ಸಾಮಾನ್ಯ ಗೋಪುರದ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ. ಸ್ವಾಮಿಯ ದೇವಸ್ಥಾನದ ಮುಂಬಾಗದ ಅಂಕಣ ಭಾಗದ ಮೇಲ್ಛಾವಣೆ ಮೇಲೆ ನಾಲ್ಕೂ ಮೂಲೆಯಲ್ಲಿ ಬಸವಣ್ಣನ ಮೂರ್ತಿಗಳು, ಮದ್ಯದಲ್ಲಿ ವಿವಿಧ ವಿನ್ಯಾಸದ ಚಿತ್ರಣದ ವಿನ್ಯಾಸ ಕಾರ್ಯವನ್ನು ಮುರುಡೇಶ್ವರದ ಶ್ರೀಧರ್, ಬಾಲು ಮತ್ತು ಅವರ ತಂಡದವರಿಂದ ನಡೆದಿದೆ.
ದೇವಸ್ಥಾನದ ಚಿತ್ರಣ ಬದಲಿಸಿ ಭಕ್ತರಿಗೆ ಅನುಕೂಲ: ಗೋಪುರಗಳ ಮತ್ತು ಮೇಲ್ಛಾವಣೆ ಕೆಲಸ ಪೂರ್ಣಗೊಂಡ ನಂತರ ಪುರಾತನ ಕಾಲದ ದೇವಸ್ಥಾನದ ಕಟ್ಟಡಕ್ಕೆ ಬಳಸಲಾಗಿರುವ ದೊಡ್ಡ ಗಾತ್ರದ ಕಲ್ಲುಗಳನ್ನು ಸಂಪೂರ್ಣ ಪಾಲೀಶ್ ಮಾಡಿಸಿ ಹೊಳಪು ನೀಡುವುದು, ಮೂರು ದಿಕ್ಕಿನಲ್ಲಿ ಭಕ್ತರಿಗೆ ಪ್ರವೇಶ ಮತ್ತು ದರ್ಶನಕ್ಕೆ ಅನುಕೂಲ ಮಾಡುವುದು, ಭಕ್ತರು ದೇವಸ್ಥಾನದಲ್ಲಿ ಮಾಡುವ ವಿವಾಹ ಕಾರ್ಯಗಳಿಗೆ ಗರ್ಭಗುಡಿ ಮುಂದೆಯೇ ಮಾಂಗಲ್ಯ ಧಾರಣೆ ಮಂಟಪ ನಿರ್ಮಿಸುವುದು, ದ್ವಜ ಸ್ಥಂಭವನ್ನು ಬದಲಿಸುವುದು ಮುಂತಾದ ಕೆಲಸಗಳಿಂದ ದೇವಸ್ಥಾನದ ಹಳೆಯ ವಿನ್ಯಾಸವನ್ನು ನವೀಕರಣ ಮಾಡುವ ಕೆಲಸವು ಭಕ್ತರು, ದಾನಿಗಳು ನೀಡುವ ದೇಣಿಗೆಯಿಂದ ನೆಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಮತ್ತು ಮುಖಂಡರ ಪರವಾಗಿ ಸಮಿತಿಯ ಕಾರ್ಯದರ್ಶಿ ಬಿ.ಅಮರೇಶಗೌಡ ಮಾಹಿತಿ ನೀಡಿದರು.  

One attachment • Scanned by Gmail