ಭಕ್ತರ ಜೀವನ ಸರಳಗೊಳಿಸುವವನೆ ನಿಜವಾದ ಗುರು: ಸುನಂದಾ ಬಹೆನಜಿ

ಬೀದರ್: ಜು.19:ಗುರುವಿಲ್ಲದೇ ಜೀವನ ಆರಂಭವೇ ಇಲ್ಲ. ಗುರುವಿನಿಂದಲೇ ಜ್ಞಾನ, ಮೋಕ್ಷ ಸಾಧ್ಯ. ಅಜ್ಞಾನ ಅಂಧಕಾರ, ಅಂಧಶೃದ್ಧೆ ಹೋಗಲಾಡಿಸಿ ಭಕ್ತರ ಜೀವನ ಸರಳಗೊಳಿಸುವವನೆ ನಿಜವಾದ ಗುರು ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಮುಖ ಸುನಂದಾ ಬಹೆನಜಿ ಹೇಳಿದರು.
ಅವರು ಪತಂಜಲಿ ಯೋಗ ಸಮಿತಿ ಹಾಗೂ ಸದ್ಗುರು ಗಣಪತರಾವ ಮಹಾರಾಜ ಸತ್ಸಂಗ ಸಮಿತಿ ಕುನ್ನೂರು ಬಿಜಾಪೂರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ನಗರದ ಅಮಲಾಪುರ ರಸ್ತೆಯ ಹೇಮರೆಡ್ಡಿ ಮಲ್ಲಮ್ಮ ಸಭಾಂಗಣದಲ್ಲಿ ಗುರು ಪೂರ್ಣಿಮಾ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡುತ್ತ ಗುರುವನ್ನು ಬ್ರಹ್ಮ, ವಿಷ್ಣು , ಮಹೇಶ್ವರನಿಗೆ ಹೋಲಿಸಲಾಗಿದೆ. ಆದರ್ಶ ಸಂತೃಪ್ತ ಜೀವನವನ್ನು ರೂಪಿಸಿಕೊಳ್ಳಲು ದೇವರ ಸಾಮಿಪ್ಯ ಸಾಧಿಸಲು ಗುರುವಿನ ಕೃಪೆ ಬೇಕು ಎಂದರು. ಮಾನವ ಜನ್ಮ ಸಾರ್ಥಕ ಮಾಡಿಕೊಳ್ಳಲು ಗುರು ತೋರಿದ ಮಾರ್ಗದಲ್ಲಿ ಸಾಗಬೇಕು. ಮನುಷ್ಯನ ಬದುಕು ಜಟಲತೆಯಿಂದ ಸರಳಗೊಳಿಸುವ ಏಕೈಕ ಮಾರ್ಗ ಅಧ್ಯಾತ್ಮ. ಇದರಿಂದ ಮಾತ್ರ ಜೀವನದಲ್ಲಿ ಶಾಂತಿ, ನೆಮ್ಮದಿ ಸಾಧ್ಯ . ಗುರುವೆಂಬ ಪದವು ಅಗಾಧವಾದ ಶಕ್ತಿಯಿಂದ ಕೂಡಿದೆ. ಗುರುವಿನ ಸ್ಥಾನ ಆದಿ ಅನಾದಿ ಕಾಲದಿಂದ ಬಂದಿದೆ. ಗುರು ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಸೀಮಿತವಾಗದೇ ಪ್ರತಿಯೊಂದು ಕ್ಷೇತ್ರಕ್ಕೆ ಅಗತ್ಯ. ಶಿಕ್ಷಣ, ಧಾರ್ಮಿಕ, ರಾಜಕೀಯ , ಸಾಮಾಜಿಕ ಸೇರಿ ವಿವಿಧ ಕ್ಷೇತ್ರಗಳಲ್ಲಿ ಗುರುವನ್ನು ಕಾಣುತ್ತೇವೆ. ಇಂದಿನ ಯಾಂತ್ರಿಕ ಜೀವನದಲ್ಲಿ ಒಡೆದು ಹೋಗುತ್ತಿರುವ ಸಮಾಜವನ್ನು ಒಂದುಗೂಡಿಸುವ ಮಾನವಕುಲದ ಉದ್ಧಾರಕ್ಕೆ ನಿತ್ಯ ಜೀವನದಲ್ಲಿ ಎದುರಾಗುವ ಲೌಕಿಕ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ಭಗವಂತನ ಸಾಕ್ಷಾತ್ಕಾರ ಬೇಕು. ಸರಳ ಸುಖಃ ಸಂಸಾರ ಸಾಗಿಸಲು ಗುರುಗಳ ಮಾರ್ಗದರ್ಶನ ಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ಮಹೇಶ ಬಿರಾದರ ಮಾನವನ ಸರ್ವತೋಮುಖ, ಸರ್ವಾಂಗೀಣ ಅಭಿವೃದ್ಧಿ ಹಿತ ಬಯಸುವವನೇ ಗುರುವೆಂದು ಮಹಾಪುರುಷರು ಸಾಧುಸಂತರು, ಯೋಗಪುರುಷರು ಹೇಳಿದ್ದಾರೆ. ಕಲ್ಲಿನಂತೆ ಇರುವ ಶಿಷ್ಯನಿಗೆ ಕಡಿದು ಸುಂದರ ಮೂರ್ತಿಯನ್ನಾಗಿಸಿ ಮಾಡುವ ಶಕ್ತಿ ಗುರುವಿಗಿದೆ. ಎಲ್ಲಾ ಕಾರ್ಯಗಳಿಗೆ ಮೊದಲು ಗುರು ಪೂಜೆ ಮಾಡಬೇಕು. ಇದು ಸರಳ ಮಾಡಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತದೆ ಎಂದು ಹೇಳಿದರು. ಪೂಜ್ಯ ನಾಗಲಿಂಗ ಮಹಾಸ್ವಾಮಿ ಕೈಲಾಸಮಠ ಹಾಲಹಳ್ಳಿ ಮಾತನಾಡಿದರು. ಕಾರ್ಯಕ್ರಮದ ಮೊದಲಿಗೆ ಶ್ರೀಮತಿ ಮನೋರಮಾ ಕಾಶಿ ಹಾಗೂ ಸುರೇಶಜಿ ಮಹಾಪುರುಷರ ಭಾವಚಿತ್ರಗಳಿಗೆ ಪೂಜೆ ನೆರವೇರಿಸಿದರು. ಸಮಾಜ ಸೇವಕರಾದ ಹಾಗೂ ಉದ್ದಿಮೆಗಳಾದ ಶಂಕರರಾವ ಚಿದ್ರಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಮನೋರಮ ಮೊಕಾಸಿ ಗಣಪತರಾವ ಮಹಾರಾಜರ ಕೃತಿ “ಸುಲಭ ಆತ್ಮಜ್ಞಾನ ಗ್ರಂಥ” ಪಠಣ ಮಾಡಿದರು. ಅರುಣ ಮೊಕಾಸಿ ಸಭಿಕರನ್ನು ಸ್ವಾಗತಿಸಿದರು. ಯೋಗೇಂದ್ರ ಯದಲಾಪುರೆ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಮೀನಾಕ್ಷಿ ಮಹೇಶ ಶೇಗದಾಳ ವಂದಿಸಿದರು. ನಂತರ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸತ್ಸಂಗ ಭಜನಾ ಮಂಡಳಿಗಳಾದ ವೀರಶೆಟ್ಟಿ ಕಾಗಾ, ಗುರುದತ್ತ ಗುರೂಜಿ ಸಹಜ ಸ್ಥಿತಿಯೋಗ, ಮಾಣಿಕಪ್ರಭು ಸೇವಾ ಸಮಿತಿ ಭಜನಾ ಮಂಡಳಿ, ಸದ್ಗುರು ಗಣಪತರಾವ ಮಹಾರಾಜ ಶಾಂತಿ ಕುಟಿರ ಕುನ್ನೂರ ಜಿಲ್ಲಾ ಬಿಜಾಪೂರ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅವರಿಂದ ಸತ್ಸಂಗ ಭಜನೆ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸೂರ್ಯಕಾಂತ ಕುರುಬಖೇಳಗಿ, ಎಚ್.ಬೆಟ್ಟದ ಚಾಳಕಾಪೂರ , ಮಹೇಶ ಶೇಗದಾಳ, ಸಿಂಧೂ ಮುಕಾಶಿ, ಮಹಾಲಕ್ಷ್ಮೀ ಕುಲಕರ್ಣಿ, ಪ್ರಬೋಧ ಮುಕಾಸಿ ಅರುಣ ಸಾಹುಕಾರ , ವಿಜಯಕುಮಾರ ಪೋಲೆ ಆಣದೂರ , ಬಾಬುರಾವ ದಿಗ್ವಾಲ್ , ಸತ್ಯವಾನ ಬೋಗಾರ , ಶಿವಾನಮದ ಚಾಳಕಾಪೂರ , ಶೋಭಾ ರೆಡ್ಡಿ , ಮಲ್ಲಿಕಾರ್ಜುನ ಬಿರಾದರ , ವಿಜಯಲಕ್ಷ್ಮೀ , ಜ್ಯೋತಿ ಸೂರ್ಯಕಾಂತ , ಜಗನ್ನಾಥ ಕೋಡಗೆ, ಪಂಡಿತ ಪಾಟೀಲ , ದೀಪಕ ಗಾದಗೆ, ಉತ್ತಮಕುಮಾರ ಪವಾರ, ರಾಧಿಕಾ ಬೋರಾಳೆ , ಮಹೇಶ ತೇಗಂಪೂರ , ಸಂಗೀತಾ ಪಂಚಾಳ , ಶರಣು ಸೋಲಪೂರ , ವಿದ್ಯಾವತಿ ಸಜ್ಜನ , ಶಿವಶಂಕ್ರಯ್ಯಾ ಸ್ವಾಮಿ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತಾಧಿಗಳು ಭಾಗವಹಿಸಿದರು.

ಕಾರ್ಯಕ್ರಮದ ಮೊದಲು ಅಮಲಾಪೂರ ರಸ್ತೆಯ ನಿಸರ್ಗ ಬಡಾವಣೆಯ ಅರುಣ ಮೊಕಾಶಿ ಮನೆಯಿಂದ ಹೇಮರೆಡ್ಡಿ ಮಲ್ಲಮ್ಮ ಸಭಾಂಗಣದವರೆಗೆ ವಿವಿಧ ಮಹಾಪುರುಷರ ಭಾವಚಿತ್ರಗಳ ಶೋಭಾಯಾತ್ರೆ, ಭಜನೆ, ನೃತ್ಯ, ಜೈಘೋಷಗಳೊಂದಿಗೆ ಜರುಗಿತು.