ಭಕ್ತರ ಗೋವಿಂದನಾಮ ಹರ್ಷೋದ್ಘಾರದ ನಡುವೆ ಚೆಲುವನ ವೈರಮುಡಿ ಉತ್ಸವ

ಮಂಡ್ಯ/ಮೇಲುಕೋಟೆ : ಐತಿಹಾಸಿಕ ಶ್ರೀ ಚೆಲುವನಾರಾಯಣಸ್ವಾಮಿಯವರ ವೈರಮುಡೀ ಉತ್ಸವ ಮೇಲುಕೋಟೆಯ ರಾಜಬೀದಿಯಲ್ಲಿ ಸಹಸ್ರಾರು ಮಂದಿ ಭಕ್ತರ ಹರ್ಷೋದ್ಘಾರದ ನಡುವೆ ವಿಜೃಂಭಣೆಯಿಂದ ನಡೆಯಿತು.
ಭಗವಂತನ ಕಿರೀಟ ಎಂದೇ ನಂಬಿರುವ ವೈರಮುಡಿ ಕಿರೀಟವನ್ನು ಗರುಡಾರೂಢನಾದ ಚೆಲುವನಾರಾಯಣನ ಮುಡಿಗೆ ಅಲಂಕರಿಸಲಾಗಿತ್ತು. ಜಿಲ್ಲಾಧಿಕಾರಿ ಡಾ. ಎಚ್.ಎನ್. ಗೋಪಾಲಕೃಷ್ಣ ಅವರು ಸ್ವಾಮಿಗೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು.
ರಾತ್ರಿ ಯಾಗಶಾಲೆ ಮತ್ತು ಗರುಡದೇವನ ಮೆರವಣಿಗೆಯ ನಂತರ ಮಹಾಮಂಗಳಾರತಿಯ ಪ್ರಾರ್ಥನೆ ಸಲ್ಲಿಸಿದ ಬಳಿಕ ರಾತ್ರಿ 8.10ಕ್ಕೆ ಆರಂಭವಾದ ವೈರಮುಡಿ ಉತ್ಸವ ಮುಂಜಾನೆ 3.30 ಗಂಟೆವರೆಗೂ ಸಾಂಗೋಂಪಾಂಗವಾಗಿ ನಡೆಯಿತು.
ದೇವಾಲಯದ ಎಡಭಾಗದಲ್ಲಿ ನಿರ್ಮಿಸಲಾಗಿರುವ ಮಂಟಪದಲ್ಲಿ ಸ್ವಾಮಿಗೆ ಮತ್ತೊಮ್ಮೆ ಮಂಗಳಾರತಿ ಮಾಡಲಾಯಿತು. ನಂತರ ಚತುರ್ವೀದಿಗಳಲ್ಲಿ ವೈರಮುಡಿ ಉತ್ಸವ ಸಂಭ್ರಮದಿಂದ ನೆರವೇರಿತು.
ವೈರಮುಡಿ ಮೆರವಣಿಗೆ :
ಮಂಡ್ಯ ಜಿಲ್ಲಾ ಖಜಾನೆಯಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ತರಲಾದ ವೈರಮುಡಿ ಮತ್ತು ರಾಜಮುಡಿ ಕಿರೀಟಗಳನ್ನು ಪಾರ್ವತಿ ಮಂಟಪದ ಬಳಿಯಿಂದ ಬಂಗಾರದ ಪಲ್ಲಕ್ಕಿಯಲ್ಲಿಟ್ಟು ಭವ್ಯ ಮೆರವಣಿಗೆಯಲ್ಲಿ 5.30ರ ವೇಳೆಗೆ ಶ್ರೀ ಚಲುವನಾರಾಯಣಸ್ವಾಮಿ ದೇವಸ್ಥಾನಕ್ಕೆ ತರಲಾಯಿತು.
ಶ್ರೀ ಚಲುವನಾರಾಯಣಸ್ವಾಮಿಯ ಸನ್ನಿಧಿಯಲ್ಲಿ ಜಿಲ್ಲಾಧಿಕಾರಿ ಡಾ. ಎಚ್.ಎನ್. ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಪಾಂಡವಪುರ ಉಪ ವಿಭಾಗಾಧಿಕಾರಿ ನಂದೀಶ್ ಅವರ ನೇತತ್ವದ ಅಧಿಕಾರಿಗಳ ತಂಡದ ಉಸ್ತುವಾರಿಯಲ್ಲಿ ವೈರಮುಡಿ ಹಾಗೂ ರಾಜಮುಡಿ ಕೀರೀಟ ಮತ್ತು ಆಭರಣಗಳನ್ನು ಪರಿಶೀಲನೆ ನಡೆಸಿ ನಂತರ ಪ್ರಧಾನ ಅರ್ಚಕರಿಗೆ ಹಸ್ತಾಂತರಿಸಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕರ ಸಮ್ಮುಖದಲ್ಲಿ ವೈರಮುಡಿಯನ್ನು ಪಡೆದು ಶ್ರೀ ರಾಮಾನುಜ ಚಾರ್ಯರ ಸನ್ನಿಧಿಯಲ್ಲಿ ಶ್ರೀ ಚಲುವನಾರಾಯಣಸ್ವಾಮಿ ಉತ್ಸವ ಮೂರ್ತಿಗೆ ಎಲ್ಲ ಆಭರಣಗಳೊಂದಿಗೆ ವೈರಮುಡಿ ಕಿರೀಟ ಧಾರಣೆ ಮಾಡಿ ಉತ್ಸವಕ್ಕೆ ಅಣಿಗೊಳಿಸಲಾಯಿತು.
ರಾತ್ರಿ 8-00ಕ್ಕೆ ಡಾ. ಎಚ್.ಎನ್. ಗೋಪಾಲಕೃಷ್ಣ ಅವರು ಪುಷ್ಪಾರ್ಚನೆ ಮಾಡಿದರು. ಬಳಿಕ ಶ್ರೀ ಚಲುವನಾರಾಯಣಸ್ವಾಮಿಯ ವೈರಮುಡಿ ಉತ್ಸವ ರಾಜಬೀದಿಗೆ ಬರುತ್ತಿದ್ದಂತೆ ಭಕ್ತರ ಗೋವಿಂದ ನಾಮ ಸ್ಮರಣೆಯ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.
ದೇವಾಲಯದ ಚತುರ್ವೀದಿಗಳಲ್ಲೂ ವೈರಮುಡೀ ಉತ್ಸವ ನೋಡಲು ಕಾತರದಿಂದ ಕಾಯುತ್ತಿದ್ದರು. ತಮ್ಮ ಬಳಿಗೆ ಬಂದ ವೈರಮುಡೀ ಕಿರೀಟಧಾರಣೆಯ ಚೆಲುವನ ಸೊಬಗನ್ನು ಭಕ್ತರು ಕಣ್ತುಂಬಿಕೊಂಡು ಪುನೀತರಾದರು. ಹಲವು ಭಕ್ತರು ವೈರಮುಡಿಯಿಂದ ಅಲಂಕತನಾದ ಗರುಡಾರೂಢ ಶ್ರೀ ಚಲುವನಾರಾಯಣನನ್ನು ಕಂಡು ಭಾವಪರವಶರಾದದ್ದು ಕಂಡುಬಂತು.
ದೀಪಾಲಂಕಾರ :
ವೈರಮುಡಿ ಉತ್ಸವದ ಅಂಗವಾಗಿ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯ, ಶ್ರೀ ಚಲುವನಾರಾಯಣಸ್ವಾಮಿ ದೇವಾಲಯ, ಕಲ್ಯಾಣಿ, ಮಂಟಪಗಳಿಗೆ, ಸರ್ಕಾರಿ ಕಚೇರಿ ಕಟ್ಟಡಗಳಿಗೆ ಹಾಗೂ ಮೇಲುಕೋಟೆ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಬೆಟ್ಟ ಸೇರಿದಂತೆ ವಿವಿಧೆಡೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿತ್ತು.
ಬಿಗಿ ಭದ್ರತೆ :
ವೈರಮುಡಿ ಉತ್ಸವದ ಹಿನ್ನೆಲೆಯಲ್ಲಿ ಮೇಲುಕೋಟೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಒಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ, 4 ಮಂದಿ ಡಿವೈಎಸ್ಪಿಗಳು, 16 ಇನ್ಸ್‌ಪೆಕ್ಟರ್‌ಗಳು, 31 ಪಿಎಸ್‌ಐಗಳು, 100 ಎಎಸ್‌ಐ, ಮುಖ್ಯಪೇದೆ, ಪೇದೆಗಳು, ಮಹಿಳಾ ಸಿಬ್ಬಂದಿಗಳು, ಸೇರಿ 600 ಕ್ಕೂ ಹೆಚ್ಚು ಮಂದಿ, 2 ರಾಜ್ಯ ಸಶಸ್ತ್ರ ಮೀಸಲು ಪಡೆ ಹಾಗೂ 7 ಜಿಲ್ಲಾ ಸಶಸ್ತ್ರ ಮೀಸಲು ಪಡೆ ಹಾಗೂ 2 ಕ್ಷಿಪ್ರ ಕಾರ್ಯಾಚರಣೆ ಪಡೆಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.