ಭಕ್ತರ ಕಷ್ಟ ಪರಿಹರಿಸಿದ್ದ ಸಾಯಿಬಾಬಾ

ಬೀದರ್:ಮೇ.29: ಸಾಯಿಬಾಬಾ ಭಕ್ತರ ಕಷ್ಟ ಪರಿಹರಿಸಿದ್ದರು ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಹೇಳಿದರು.
ಸಾಯಿಬಾಬಾ ಮಂದಿರದ ಜಾತ್ರಾ ಮಹೋತ್ಸವ ಪ್ರಯುಕ್ತ ಬೀದರ್ ತಾಲ್ಲೂಕಿನ ಕೊಳಾರ(ಕೆ) ಗ್ರಾಮದಲ್ಲಿ ಈಚೆಗೆ ನಡೆದ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಸಾಯಿಬಾಬಾ ರೋಗಿಗಳ ಕೈ ಮುಟ್ಟಿ ಕುಷ್ಠ ರೋಗ ಗುಣಪಡಿಸುತ್ತಿದ್ದರು. ಕುಷ್ಠ ರೋಗಿಗಳಿಗೆ ನವ ಜೀವನ ನೀಡಿದ್ದರು ಎಂದು ತಿಳಿಸಿದರು.
ತಮ್ಮ ಪವಾಡಗಳಿಂದಾಗಿಯೇ ಅವರು ಭಕ್ತರ ಆರಾಧ್ಯ ದೈವವಾಗಿದ್ದಾರೆ. ಸಾಯಿ ಬಾಬಾ ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ಓದಬೇಕು ಎಂದು ಹೇಳಿದರು.
ಭಾರತ ಸಾಧು, ಸಂತರು, ಸೂಫಿಗಳ ಪುಣ್ಯ ಭೂಮಿ. ಈ ಮಣ್ಣಿನಲ್ಲಿ ಜನಿಸಿದ ಎಲ್ಲರೂ ಧನ್ಯರು ಎಂದರು.
ಹಳ್ಳಿಗಳ ಜನ ಸೌಹಾರ್ದದಿಂದ ಬಾಳಬೇಕು. ಪರಸ್ಪರರ ಕಷ್ಟ- ಸುಖಗಳನ್ನು ಭಾಗಿಯಾಗಬೇಕು. ಪರೋಪಕಾರದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಇಂದು ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವೂ ಅವಶ್ಯಕವಾಗಿದೆ. ನೈತಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಮಕ್ಕಳು ತಂದೆ-ತಾಯಿ, ಗುರು ಹಾಗೂ ಹಿರಿಯರನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು.
ಕೊಳಾರ(ಕೆ) ಗ್ರಾಮಸ್ಥರು ಒಗ್ಗಟ್ಟಿನಿಂದ ಪ್ರತಿ ವರ್ಷ ಸಾಯಿಬಾಬಾ ಜಾತ್ರೆ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಪ್ರಮುಖರಾದ ಅಮರ ವಡಗೈ, ದಿಲೀಪ್ ವಡಗೈ, ಅನಿಲ್ ಕೋಟೆ, ಮಹೇಶ ಉಪಕಾರ, ರಾಹುಲ್ ಬಿರಾದಾರ, ಶಿವಕುಮಾರ ಪಟೇಲ್, ಪಂಡಿತ, ವಿಶಾಲ್, ಶಂಕರ ಶಿಂಧೆ ಮೊದಲಾದವರು ಉಪಸ್ಥಿತರಿದ್ದರು.