ಭಕ್ತರೇ ನಿಜವಾದ ದೇವರು 

ಸಾಣೇಹಳ್ಳಿ, ನ.7;  ಗುರುವಿಗೆ ಅಂಜಿ ಶಿಷ್ಯ, ಶಿಷ್ಯನಿಗೆ ಅಂಜಿ ಗುರು ನಡೆಯಬೇಕು’ ಎಂದು ಇಲ್ಲಿನ ಶ್ರೀ ಶಿವಕುಮಾರ ಕಲಾಸಂಘ ಆಯೋಜಿಸಿದ್ದ ನಾಟಕೋತ್ಸವದ ನೇತೃತ್ವ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಮಾತನಾಡಿದರು. ಭಕ್ತರು ಒಲಿದರೆ ಯಾವುದೂ ಅಸಾಧ್ಯವಲ್ಲ. ಈ ಕಾರಣಕ್ಕಾಗಿಯೇ ಶಿವಕುಮಾರ ಸ್ವಾಮಿಜಿಗಳು ಭಕ್ತರೇ ನಿಜವಾದ ದೇವರು ಎಂದು ಭಾವಿಸಿ . ಶಿವಕುಮಾರ ಶ್ರೀಗಳು ಪಟ್ಟಕ್ಕೆ ಬಂದಾಗ ಸಮಾಜ ಒಡೆದ ಮಡಕೆಯಂತಿತ್ತು. ಅದನ್ನು ಒಂದುಗೂಡಿಸಿ ಅದ್ಭುತವಾಗಿ ಸಮಾಜ ಕಟ್ಟಿದರು. ಬಸವಣ್ಣನವರನ್ನು ನಾವಾರೂ ನೋಡಿಲ್ಲ; ಆದರೆ ಶಿವಕುಮಾರ ಶ್ರೀಗಳವರನ್ನು ನಾವೆಲ್ಲರೂ ಬಲ್ಲೆವು. ನಾವು ಸ್ವಾಮಿಗಳಾಗಿ 45 ವರ್ಷಗಳಾಗಿವೆ. ಇಲ್ಲಿ ಏನಾದರೂ ಕೆಲಸ ಕಾರ್ಯಗಳು ಆಗಿದ್ದರೆ ಅದು ನಮ್ಮಿಂದ ಅಲ್ಲ; ಶಿವಕುಮಾರ ಶ್ರೀಗಳಿಂದಾಗಿ ಆಗಿದೆ. ನೆಲ ವಿಷವಾದರೆ ಸರಿಪಡಿಸಬಹುದು; ಮನಸ್ಸು ವಿಷವಾದರೆ ಹೊರ ಹಾಕುವುದು ಕಷ್ಟ. ಬಸವಣ್ಣನವರು ಹೇಳುವಂತೆ `ತಾವೂ ಮಾಡರು, ಮಾಡುವರ ನೋಡಿ ಸಹಿಸರು’ ಎನ್ನುವಂತೆ ಒಳ್ಳೆಯ ಕೆಲಸಗಳನ್ನು ಮಾಡಲು ವಿಘ್ನಗಳು ಜಾಸ್ತಿ. ಈ ವಿಘ್ನಗಳನ್ನು ಮೆಟ್ಟಿ ನಿಲ್ಲುವವರನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಇನ್ನೊಬ್ಬರ ಬೆಳವಣಿಗೆಯನ್ನು ಪ್ರೋತ್ಸಾಹಿಸಿದರೆ ಮಾತ್ರ ಅವರೂ ಬೆಳೆಯಲು ಸಾಧ್ಯ. ಹೇಳೋದು ವೇದಾಂತ ಹಾಕುವುದು ಗಾಳ ಎನ್ನುವಂತೆ ಹಲವರು ನಡೆದುಕೊಳ್ಳುತ್ತಿದ್ದಾರೆ. ವಿದ್ಯಾವಂತ, ಬುದ್ಧಿವಂತನಾಗಿ ಜನರು ತಲೆತೂಗುವಂತೆ ಮಾತನಾಡಬಹುದು. ಆದರೆ ಒಳಗೆ ರೋಷ, ದ್ವೇಷಗಳಿದ್ದರೆ ಆ ವಿದ್ಯೆಗೆ ಬೆಲೆಯಿಲ್ಲ. ಮನೆಯಲ್ಲಿನ ಹಿರಿಯರು ಕಿರಿಯರನ್ನು ಪ್ರೋತ್ಸಾಹಿಸಿದರೆ ಮನೆತನ ಅದ್ಭುತ ಪ್ರಗತಿ ಸಾಧಿಸಲು ಸಾಧ್ಯ. ಯಾರೂ ದಡ್ಡರಲ್ಲ; ಅವರಿಗೆ ಸರಿಯಾದ ಪ್ರೇರಣೆ, ಸ್ಫೂರ್ತಿ ತುಂಬಿದರೆ ಅವನೂ ಮೇಲೆ ಬರಬಲ್ಲ. ಇದಕ್ಕೆ ನಾವೇ ಉದಾಹರಣೆ. ನಾವು ಫೇಲಾಗುವುದರಲ್ಲಿ ದಾಖಲೆ ಬರೆದಿದ್ದೇವೆ. ಆದರೆ ಹಿರಿಯ ಗುರುಗಳು ಪ್ರೋತ್ಸಾಹಿಸಿದ್ದರ ಫಲವಾಗಿ ಬಿಎ ಮತ್ತು ಎಂಎಗಳಲ್ಲಿ ರ‍್ಯಾಂಕ್ ಪಡೆಯಲು ಸಾಧ್ಯವಾಯಿತು. ಬುದ್ಧಿ ಶಕುನಿಯ ಕುತಂತ್ರ ಬುದ್ಧಿಯಾಗದೆ ಧರ್ಮರಾಯ, ಬುದ್ಧ, ಗಾಂಧಿ, ಬಸವಣ್ಣನಾಗಬೇಕಿದೆ. ನಿರಂತರ 25 ವರ್ಷಗಳ ಫಲವಾಗಿ ಇಷ್ಟು ಶಿಸ್ತು, ಸಂಯಮ ಸಾಧ್ಯವಾಗಿದೆ. ಯಾರೇ ಬಂದರು, ಬಾರದೇ ಇದ್ದರೂ ಪ್ರೇಕ್ಷಕರು ಬಂದೇ ಬರುವರು. ಕಾರಣ ಇದು ಜಾತ್ಯತೀತ ಕಾರ್ಯಕ್ರಮ. ಕಲೆಗೆ ಜಾತಿಯಿಲ್ಲ. ಶಿವಕುಮಾರ ಶ್ರೀಗಳು ರಂಗಭೂಮಿಯನ್ನು ತತ್ವ ಪ್ರಸಾರಕ್ಕಾಗಿ ಬಳಸಿಕೊಂಡಿದ್ದರು. ಸ್ವತಃ ಲೇಖಕರು, ನಿರ್ದೇಶಕರು, ಸಂಘಟಕರಾಗಿ ಕಲಾಸಂಘ ಆರಂಭಿಸಿದರು. ನಾವೂ ಸಹ ಪೂರ್ವಾಶ್ರಮದಲ್ಲಿ ನಾಟಕಗಳಲ್ಲಿ ಅಭಿನಯಿಸಿದ್ದೆವು. ಅದೂ ಸ್ತ್ರೀ ಪಾತ್ರ ಮಾಡಿದ್ದೆವು. ಈದೂ ಸಹ ನಮಗೆ ಒಳ್ಳೆಯ ಸಂಸ್ಕಾರವನ್ನು ಕೊಟ್ಟಿದೆ. ಬಸವಣ್ಣನ ಪಾತ್ರ ಮಾಡುವವರು ಸ್ವಲ್ಪಮಟ್ಟಿಗಾದರೂ ಸಾತ್ವಿಕ ಗುಣ ಬೆಳೆಸಿಕೊಳ್ಳಬೇಕಾಗುತ್ತದೆ. ಕರೋನಾದ ಬಗ್ಗೆ ತಾತ್ಸಾರ ಸಲ್ಲದು. ಎಚ್ಚರಿಕೆ ಅತ್ಯಗತ್ಯ. ಸಭೆ ಸಮಾರಂಭಗಳಲ್ಲಿ ಶಾಲುಗಳ ಬದಲಾಗಿ ಟವೆಲ್ಲು, ಪುಸ್ತಕ, ಹಣ್ಣು, ಕೊಬ್ಬರಿ ಕೊಡುವ ಸಂಸ್ಕೃತಿಯನ್ನು ಬೆಳೆಸಿದ್ದೇವೆ ಎಂದರು.