ಭಾಲ್ಕಿ:ಅ.14:ದಸರಾ ಹಬ್ಬದ ಅಂಗವಾಗಿ ಮಹಾರಾಷ್ಟ್ರದ ತುಳಜಾಪೂರ ಭವಾನಿ ದೇವಿಯ ದರುಶನ ಪಡೆಯುವ ಭಕ್ತರ ಅನುಕೂಲಕ್ಕಾಗಿ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಬಸ್ ಡಿಪೆÇೀ ವ್ಯವಸ್ಥಾಪಕ ಭದ್ರಪ್ಪ ಹುಡಗೆ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಗುರುವಾರ ಭಾಲ್ಕಿ-ತುಳಜಾಪೂರ ವಿಶೇಷ ಬಸ್ ಸಂಚಾರಕ್ಕೆ ಚಾಲನೆ ನೀಡುವ ಮುನ್ನ ಭವಾನಿ ದೇವಿಯ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಭಾಗದಲ್ಲಿ ತುಳಜಾ ಭವಾನಿಯ ಅಸಂಖ್ಯಾತ ಭಕ್ತರಿದ್ದಾರೆ. ಬರುವ ಹುಣ್ಣಿಮೆ ವರೆಗೂ ತಾಯಿ ತುಳಜಾ ಭವಾನಿಯ ದರುಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತೆರಳುತ್ತಾರೆ.
ಹಾಗಾಗಿ ಭಕ್ತರ ಅನುಕೂಲಕ್ಕಾಗಿ ಭಾಲ್ಕಿಯಿಂದ-ತುಳಜಾಪೂರಕ್ಕೆ ಪ್ರತಿದಿನ ಬೆಳಿಗ್ಗೆ 8ಕ್ಕೆ ವಿಶೇಷ ಬಸ್ ಓಡಿಸಲಾಗುತ್ತದೆ. ಭಕ್ತರ ಸಂಖ್ಯೆ ಹೆಚ್ಚಾದಲ್ಲಿ ಹೆಚ್ಚುವರಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಜತೆಗೆ ಪಟ್ಟಣ ಸೇರಿ ಯಾವುದೇ ಹಳ್ಳಿಯಿಂದ 40-50 ಭಕ್ತರು ತುಳಜಾಪೂರಕ್ಕೆ ಹೋಗಲು ಸಿದ್ಧರಾದರೇ ಅಂತಹ ಊರಿಗೆ ಬಸ್ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಸಂಚಾರ ನಿರೀಕ್ಷಕ ಬಸೀರ್ ಅಹ್ಮೇದ್, ಸಂಚಾರಿ ನಿರೀಕ್ಷಕ ಶಿವರಾಜ್ ಇದ್ದರು.