ಭಕ್ತರಿಗೆ ಪಂಗನಾಮ: ದೇವಲ್‍ಗಾಣಗಾಪುರ ದತ್ತಾತ್ರೇಯ ದೇವಸ್ಥಾನದ ಅರ್ಚಕರ ವಿರುದ್ಧ ಪ್ರಕರಣ ದಾಖಲು

ಕಲಬುರಗಿ.ಜೂ.23: ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ತಾಲ್ಲೂಕಿನ ಸುಕ್ಷೇತ್ರ ದೇವಲ್‍ಗಾಣಗಾಪುರ ದತ್ತಾತ್ರೇಯ ದೇವಸ್ಥಾನದ ಅರ್ಚಕರು ದೇವರ ಹೆಸರಿನಲ್ಲಿ ಭಕ್ತರಿಗೆ ಪಂಗನಾಮ ಹಾಕಿರುವ ದೂರಿನ ಹಿನ್ನೆಲೆಯಲ್ಲಿ ದೇವಲ್ ಗಾಣಗಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾಧಿಕಾರಿಗಳೂ ಹಾಗೂ ದೇವಸ್ಥಾನದ ಅಧ್ಯಕ್ಷರೂ ಆದ ಯಶವಂತ್ ವಿ. ಗುರುಕರ್ ಅವರು ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಲವು ಅರ್ಚಕರು ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‍ಸೈಟ್ ತೆರೆದು ಭಕ್ತರಿಗೆ ವಂಚಿಸಿದ್ದಾರೆ ಎಂಬುದು ಬಯಲಿಗೆ ಬಂದ ಹಿನ್ನೆಲೆಯಲ್ಲಿ ದೇಶದ ಮೂಲೆಮೂಲೆಗಳಿಂದ ಭಕ್ತರು ಇರುವುದನ್ನು ಬಂಡವಾಳ ಮಾಡಿಕೊಂಡ ಅರ್ಚಕರಿಗೆ ಈಗ ಸಂಕಷ್ಟ ಎದುರಾಗಿದೆ.
ದೇವಸ್ಥಾನದ ಅಧಿಕೃತ ವೆಬ್‍ಸೈಟ್ ಹೊರತುಪಡಿಸಿ ಅರ್ಚಕರೇ ಏಳೆಂಟು ನಕಲಿ ವೆಬ್‍ಸೈಟುಗಳನ್ನು ಸೃಷ್ಟಿಸಿದ್ದಾರೆ. ದರ್ಶನ, ವಿಶೇಷ ಪೂಜೆ, ಅರ್ಚನೆ ಸೇರಿ ದೂರದ ಊರಿನಲ್ಲಿಯೇ ಕುಳಿತು ಆನ್‍ಲೈನ್ ಬುಕಿಂಗ್ ಮಾಡುವ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆಂಬ ದೂರುಗಳು ಬಂದಿವೆ.
ದೇವಸ್ಥಾನಕ್ಕೆ ಸಲ್ಲಿಸುವ ದಾನವನ್ನು ಕೂಡ ವಂಚಕರು ತಮ್ಮ ಖಾತೆಗಳಿಗೆ ಹಾಕಿಕೊಂಡು ಸರ್ಕಾರದ ಬೊಕ್ಕಸಕ್ಕೆ ಕೋಟಿ, ಕೋಟಿ ರೂ.ಗಳನ್ನು ವಂಚಿಸಿದ್ದಾರೆ. ದೇವಸ್ಥಾನದ ಹುಂಡಿ ಎಣಿಕೆ ವೇಳೆಯೂ ಸಿಸಿ ಕ್ಯಾಮೆರಾಗಳನ್ನು ಮುಚ್ಚಿ ಮೋಸ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರ ಸೂಚನೆಯ ಮೇರೆಗೆ ದೇವಲ್ ಗಾಣಗಾಪೂರದ ಪೋಲಿಸ್ ಠಾಣೆಯಲ್ಲಿ ಏಳು ಜನ ಅರ್ಚಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ನಾಮದೇವ್ ಅವರು ದೇವರ ಹೆಸರಿನಲ್ಲಿ ಭಕ್ತರಿಗೆ ಮೋಸ ಹಾಗೂ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ವಲ್ಲಭ್ ತಂದೆ ದಿನಕರ್ ಭಟ್ ಪೂಜಾರಿ, ಅಂಕುರ್ ತಂದೆ ಆನಂದರಾವ್ ಪೂಜಾರಿ, ಪ್ರತೀಕ್ ತಂದೆ ಸದಾಶಿವ್ ಪೂಜಾರಿ, ಗಂಗಾಧರ್ ತಂದೆ ಶ್ರೀಕಾಂತ್ ಭಟ್ಟ ಪೂಜಾರಿ, ಶರತ್ ಭಟ್ ತಂದೆ ನಂದುಭಟ್ ಪೂಜಾರಿ ಅವರ ವಿರುದ್ಧ ದೂರನ್ನು ದೇವಲ್ ಗಾಣಗಾಪುರ ಪೋಲಿಸ್ ಠಾಣೆಗೆ ಸಲ್ಲಿಸಿದ್ದರು.
ಪ್ರಕರಣ ಬಯಲಿಗೆ ಬರುತ್ತಿದ್ದಂತೆಯೇ ಕೇವಲ ಅರ್ಧ ಗಂಟೆಯಲ್ಲಿ ನಕಲಿ ವೆಬ್‍ಸೈಟ್‍ಗಳು ಡಿಲಿಟ್ ಆಗಿವೆ. ಸುಮಾರು ಮೂರ್ನಾಲ್ಕು ವರ್ಷಗಳಿಂದ ವಂಚನೆ ನಡೆಯುತ್ತಿದ್ದು, ದೇವಸ್ಥಾನದಿಂದ ಮುಜರಾಯಿ ಇಲಾಖೆಗೆ ಬರಬೇಕಾದ ಕೋಟ್ಯಾಂತರ ರೂ.ಗಳ ಆದಾಯವನ್ನು ಖದೀಮರು ಎಗರಿಸಿದ್ದಾರೆ. ನಷ್ಟದ ಹಣವನ್ನು ಅವರಿಂದಲೇ ವಸೂಲಿ ಮಾಡುವ ಸಾಧ್ಯತೆ ಇದೆ.