ಭಕ್ತರಿಂದ ಕಾವಡಾ ಯಾತ್ರೆ: ಪವಿತ್ರ ಜಲಹೊತ್ತು ಭಕ್ತರ ಕಾಲ್ನಡಿಗೆ

ಬೀದರ್:ಆ.22: ನಗರದ ಪಾಪನಾಶ ಶಿವಲಿಂಗ ದೇವಸ್ಥಾನದ ಭಜನಾ ಮಂಡಳಿಯವರ ನೇತೃತ್ವದಲ್ಲಿ ಭಕ್ತರು ಸೋಮವಾರ ಕಾವಡಾ ಯಾತ್ರೆ ಆರಂಭಿಸಿದರು.

ತಾಲ್ಲೂಕಿನ ಗಾಯಮುಖ ದೇವಸ್ಥಾನದಲ್ಲಿ ಮಡಿ ಸ್ನಾನ ಮಾಡಿ, ಕೇಸರಿ ಬಟ್ಟೆ ಧರಿಸಿ ವಿಶೇಷ ಪೂಜೆ ಸಲ್ಲಿಸಿದರು. ಅನಂತರ ಬಿಂದಿಗೆಗಳಲ್ಲಿ ಪವಿತ್ರ ನೀರು ಸಂಗ್ರಹಿಸಿ ಕಟ್ಟಿಗೆಯ ಎರಡು ಭಾಗಕ್ಕೆ ಕಟ್ಟಿಕೊಂಡು ಬೀದರ್-ಭಾಲ್ಕಿ ಹೆದ್ದಾರಿ ಮೂಲಕ ಹೆಜ್ಜೆ ಹಾಕಿದರು.

ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಎಲ್ಲ ವಯೋಮಾನದವರು ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಪವಿತ್ರ ನೀರಿನಿಂದ ಪಾಪನಾಶ ಶಿವಲಿಂಗಕ್ಕೆ ಅಭಿಷೇಕ ಮಾಡಿ, ಯಾತ್ರೆ ಕೊನೆಗೊಳಿಸುತ್ತಾರೆ.

ಪಾಪನಾಶ ಭಜನಾ ಮಂಡಳಿಯ ಅಧ್ಯಕ್ಷ ಶಿವಕುಮಾರ ಶೆಟಕಾರ, ಅರವಿಂದ, ಶಿವಾನಂದ ಪಾಟೀಲ, ಮಹೇಶ ಪಾಟೀಲ, ಧೂಳಪ್ಪ ಇತರೆ ಮುಖಂಡರು ಹಾಜರಿದ್ದರು.