ಬ.ಕಲ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ ಅಭ್ಯರ್ಥಿ ಕಣಕ್ಕೆ

ಬೀದರ.ಮಾ.25: ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್‌ ಮುಸ್ಲಿಮ್ ಕಾರ್ಡ್‌ ಬಳಸಿದ ಬೆನ್ನಲ್ಲೇ ಆಲ್‌ ಇಂಡಿಯಾ ಮುಸ್ಲಿಮ್‌ ಲೀಗ್(ಸೆಕ್ಯುಲರ್‌) ಅಭ್ಯರ್ಥಿ ಫರ್ಜನಾ ಬೇಗಂ ನಾಮಪತ್ರ ಸಲ್ಲಿಸುವ ಮೂಲಕ ಕಣಕ್ಕೆ ಇಳಿದಿದ್ದಾರೆ. ಇದೀಗ ಆಲ್‌ ಇಂಡಿಯಾ ಮಜ್ಲೀಸ್‌ ಇತ್ತೇಹಾದುಲ್‌ ಮುಸ್ಲಮಿನ್ (ಎಐಎಂಐಎಂ) ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದೆ.

ಹೈದರಾಬಾದ್‌ನಲ್ಲಿ ಬುಧವಾರ ಎಐಎಂಐಎಂ ಪ್ರಧಾನ ಕಾರ್ಯದರ್ಶಿಯಾದ ತೆಲಂಗಾಣದ ಶಾಸಕ ಅಹಮ್ಮದ್‌ ಪಾಶಾ ಖಾದ್ರಿ ಅವರು ಅಬ್ದುಲ್‌ ರಜಾಕ್‌ ಸಲೀಂ ಉರ್ಫ್ ಬಾಬಾ ಚೌಧರಿ ಅವರಿಗೆ ಪಕ್ಷದ ಬಿ.ಫಾರಂ ನೀಡಿದರು. ಅಬ್ದುಲ್‌ ರಜಾಕ್‌ ನಗರಸಭೆ ಸದಸ್ಯರಾಗಿದ್ದರು. ಅವರ ತಾತಾ ಹಾಗೂ ತಂದೆ ಸಹ ಹಿಂದೆ ನಗರಸಭೆ ಸದಸ್ಯರಾಗಿದ್ದರು. ಅಬ್ದುಲ್‌ ರಜಾಕ್‌ ಒಮ್ಮೆ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿ ಸೋತಿದ್ದಾರೆ.ಎಐಎಂಐಎಂ ಪ್ರಮುಖ ಅಸಾದುದ್ದಿನ್‌ ಓವೈಸಿ ಜನವರಿಯಲ್ಲಿ ಬೀದರ್‌ನಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಮುನ್ಸೂಚನೆ ನೀಡಿದ್ದರು. ಅದರಂತೆ ಪಕ್ಷ ಬಸವಕಲ್ಯಾಣದ ನಗರಸಭೆ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಅಬ್ದುಲ್‌ ರಜಾಕ್‌ ಅವರಿಗೆ ಟಿಕೆಟ್‌ ಕೊಡುವ ಮೂಲಕ ರಾಜ್ಯ ರಾಜಕೀಯಕ್ಕೂ ಧುಮುಕಿದೆ.
‘ಕಾಂಗ್ರೆಸ್‌ ಮೊದಲಿನಿಂದಲೂ ಮುಸ್ಲಿಮ್‌ರನ್ನು ಬಳಸಿಕೊಂಡು ಬಂದಿದೆ. ಅವರಿಗೆ ಅಲ್ಪಸಂಖ್ಯಾತರ ಮತಗಳು ಬೇಕು. ಅಲ್ಪಸಂಖ್ಯಾತರ ಅಭ್ಯರ್ಥಿ ಬೇಕಿಲ್ಲ. ಹೀಗಾಗಿ ಮುಸ್ಲಿಮರ ಹಿತವನ್ನು ಕಾಪಾಡಲು ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ’ ಎಂದು ಎಐಎಂಐಎಂ ಜಿಲ್ಲಾ ಘಟಕದ ಅಧ್ಯಕ್ಷ ಮನ್ಸೂರ್ ಅಹಮ್ಮದ್ ಖಾದ್ರಿ ತಿಳಿಸಿದರು.