ಬ.ಕಲ್ಯಾಣ ಉಪ ಚುನಾವಣೆ: 3 ನಾಮಪತ್ರಗಳು ಸಲ್ಲಿಕೆ

ಬೀದರ.ಮಾ.25‌: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಎರಡನೆಯ ದಿನವಾದ ಬುಧವಾರ ಮೂರು ನಾಮಪತ್ರಗಳು ಸಲ್ಲಿಕೆಯಾಗಿವೆ.

ಕಾಂಗ್ರೆಸ್‌ ಅಭ್ಯರ್ಥಿ ಮಾಲಾ ಉರ್ಫ್‌ ಮಲ್ಲಮ್ಮ ನಾರಾಯಣರಾವ್ ಅವರು ಕುಟುಂಬದ ಸದಸ್ಯರೊಂದಿಗೆ ನಾಮಪತ್ರ ಸಲ್ಲಿಸಿದರು. ಹಿಂದೂಸ್ತಾನ್ ಜನತಾ ಪಾರ್ಟಿಯ ವೆಂಕಟೇಶ ಸ್ವಾಮೀಜಿ ಹಾಗೂ ಆಲ್‌ ಇಂಡಿಯಾ ಮುಸ್ಲಿಮ್‌ ಲೀಗ್(ಸೆಕ್ಯುಲರ್‌) ಅಭ್ಯರ್ಥಿ ಫರ್ಜನಾ ಬೇಗಂ ನಾಮಪತ್ರ ದಾಖಲು ಮಾಡಿದರು.

ಮಧ್ಯಾಹ್ನ 2.50ಕ್ಕೆ ಒಮ್ಮೆಲೇ ಮೂವರು ಅಭ್ಯರ್ಥಿಗಳು ಬಂದ ಕಾರಣ ನಾಮಪತ್ರ ಸ್ವೀಕರಿಸಲು ವಿಳಂಬವಾಯಿತು. ಮಧ್ಯಾಹ್ನ 3 ಗಂಟೆ ಒಳಗೆ ಕಚೇರಿಗೆ ಬಂದ ಕಾರಣ ಎಲ್ಲರಿಗೂ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು. ಮೂವರೂ ಅಭ್ಯರ್ಥಿಗಳು ಚುನಾವಣಾಧಿಕಾರಿ ಭುವನೇಶ ಪಾಟೀಲ ಅವರಿಗೆ ನಾಮಪತ್ರ ಸಲ್ಲಿಸಿದರು.