ಬ್ಲ್ಯಾಕ್ ಫಂಗಸ್ ಸಮಸ್ಯೆ : ೪೧ ಪ್ರಕರಣ – ಉಚಿತ ಚಿಕಿತ್ಸೆ

ಕೊರೊನಾ ಇಳಿಮುಖ : ಸಿದ್ಧತೆ ನಿರ್ಲಕ್ಷ್ಯ ಬೇಡ – ಜಿಲ್ಲಾಡಳಿತಕ್ಕೆ ಸೂಚನೆ
ರಾಯಚೂರು.ಜೂ.೦೩- ಜಿಲ್ಲೆಯಲ್ಲಿ ಕೊರೊನಾ ಪ್ರಭಾವ ನಿಧಾನಕ್ಕೆ ಇಳಿಮುಖವಾಗಿದ್ದರೂ, ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯೆ ವಹಿಸದೇ ಕೊರೊನಾ ನಿಯಂತ್ರಣಕ್ಕೆ ಎಲ್ಲಾ ಸಿದ್ಧತೆಗಳನ್ನು ಯಥಾರೀತಿಯಲ್ಲಿ ನಿರ್ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ಸೂಚಿಸಿದರು.
ಅವರಿಂದು ರಿಮ್ಸ್ ಆಸ್ಪತ್ರೆಯ ಆವರಣದಲ್ಲಿ ೨೦ ಕೆಎಲ್ ಆಕ್ಸಿಜನ್ ಟ್ಯಾಂಕ್ ಉದ್ಘಾಟನಾ ಪೂರ್ವ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಜಿಲ್ಲಾಡಳಿತದ ನಿರಂತರ ಪ್ರಯತ್ನದಿಂದ ಮತ್ತು ವೈದ್ಯರ ಪರಿಶ್ರಮದಿಂದ ಜಿಲ್ಲೆಯಲ್ಲಿ ಕೊರೊನಾ ಇಳಿಮುಖವಾಗುತ್ತಿದೆ. ಆದರೆ, ಕೊರೊನಾ ಇಳಿಮುಖ ಹಿನ್ನೆಲೆಯಲ್ಲಿ ವಿಶ್ರಾಂತಗೆ ಜಾರದೇ, ಕೊರೊನಾ ಮತ್ತೇ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಳ್ಳುವಂತಹ ಸಂದರ್ಭ ಒದಗಿ ಬಂದರೂ, ಅದನ್ನು ಎದುರಿಸಲು ಸನ್ನದ್ಧರಾಗಿರಬೇಕೆಂದು ಹೇಳಿದರು. ಕೊರೊನಾ ಮಹಾಮಾರಿ ನಿಯಂತ್ರಣಕ್ಕೆ ಬರುತ್ತಿರುವಾಗಲೇ ಬ್ಲ್ಯಾಕ್ ಫಂಗಸ್ ಜಿಲ್ಲೆಗೆ ಮತ್ತೊಂದು ಸಮಸ್ಯೆಯಾಗಿದೆ. ಇಲ್ಲಿವರೆಗೂ ೪೧ ಪ್ರಕರಣಗಳು ಪತ್ತೆಯಾಗಿವೆ. ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ೪೫ ದಿನಗಳ ಕಾಲ ಚಿಕಿತ್ಸೆ ನೀಡಬೇಕಾಗಿದೆ. ಈ ಎಲ್ಲಾ ಸೋಂಕಿತರಿಗೆ ಸರ್ಕಾರ ಉಚಿತವಾಗಿ ಚಿಕಿತ್ಸೆ ನೀಡುತ್ತಿದೆಂದು ಹೇಳಿದರು. ಕೊರೊನಾ ಸೋಂಕಿತರ ಇಳಿಮುಖಕ್ಕೆ ಜಿಲ್ಲಾಡಳಿತದ ಕಾರ್ಯ ಶ್ಲಾಘನೀಯವಾಗಿದೆ. ಪ್ರತಿ ಗ್ರಾಮಗಳಿಗೆ ತೆರಳಿ ಅಲ್ಲಿ ಸೋಂಕಿತರನ್ನು ಪತ್ತೆ ಹಚ್ಚಿ, ಅವರನ್ನು ಪ್ರತ್ಯೇಕಿಸುವ ಮೂಲಕ ಪ್ರಕರಣಗಳು ಹೆಚ್ಚದಂತೆ ನಿಯಂತ್ರಿಸಲಾಗಿದೆ.
ಆಕ್ಸಿಜನ್ ಸಮಸ್ಯೆಯಾಗದಂತೆ ರಿಮ್ಸ್ ಆಸ್ಪತ್ರೆಯಲ್ಲಿ ೨೦ ಕೆಎಲ್ ಆಕ್ಸಿಜನ್ ಘಟಕವನ್ನು ಇಂದು ಆರಂಭಿಸಲಾಗಿದೆ. ಜಿಲ್ಲೆಗೆ ೩೦ ಆಕ್ಸಿಜನ್ ಕಾನ್ಸಂಟ್ರೇಟರ್ ಸಲಕರಣೆಗಳನ್ನು ಕಳುಹಿಸಲಾಗಿತ್ತು. ಈಗ ಮತ್ತೇ ೨೦ ಕಾನ್ಸಂಟ್ರೇಟರ್ ಬಂದಿವೆ. ಪ್ರಸ್ತುತ ಕೊರೊನಾ ನಿಯಂತ್ರಣಕ್ಕೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಜಿಲ್ಲೆಯಲ್ಲಿ ೧೦ ಲಕ್ಷ ಕಿಲೋ ಮೀಟರ್ ಸಂಚರಿಸಿದ ಹಳೆ ಬಸ್‌ಗಳನ್ನು ಮಾರಾಟ ಮಾಡುವುದು, ಆಕ್ಸಿಜನ್ ಬಸ್‌ಗಳನ್ನಾಗಿ ಮತ್ತು ಐಸಿಯು ಬಸ್‌ಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಸ್ಥಳೀಯ ಸಂಸದರು, ಶಾಸಕರು ತಮ್ಮ ವಿವೇಚನಾ ಅನುದಾನದಿಂದ ಇವುಗಳನ್ನು ಕೊರೊನಾ ಚಿಕಿತ್ಸೆಗೆ ಬಳಸಲು ಸಿದ್ಧತೆ ನಡೆಸಲಾಗುತ್ತಿದೆ. ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಅನುದಾನದಲ್ಲಿ ೧೦ ಲಕ್ಷ ನೀಡಿ, ಆಕ್ಸಿಜನ್ ಬಸ್ ಪರಿವರ್ತನೆಗೆ ನೆರವಾಗಿದ್ದಾರೆ. ಇದನ್ನು ಜಿಲ್ಲಾಡಳಿತಕ್ಕೆ ಹಸ್ತಾಂರಿಸಲಾಗಿದೆ.
ರಾಜ್ಯದಲ್ಲಿ ಲಾಕ್ ಡೌನ್ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ. ತಜ್ಞರ ಅಭಿಪ್ರಾಯ ಪಡೆದು ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಅಲ್ಲದೇ ಕೊರೊನಾ ರಾಜ್ಯದಲ್ಲಿ ೫ ರಿಂದ ೭ ಸಾವಿರಕ್ಕೆ ಇಳಿದ ನಂತರ ಲಾಕ್ ಡೌನ್ ತೆರವಿಗೆ ನಿರ್ಧರಿಸಲಾಗುತ್ತದೆ. ಸ್ವಲ್ಪ ಸಡಲಿಕೆಯೊಂದಿಗೆ ಪ್ರಸ್ತುತ ಲಾಕ್ ಡೌನ್ ಮುಂದುವರೆಸುವ ಬಗ್ಗೆ ಮುಖ್ಯಮಂತ್ರಿ ನಿರ್ಧಾರ ಕೈಗೊಳ್ಳಲಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ, ಕರಡಿ ಸಂಗಣ್ಣ, ಶಾಸಕ ಡಾ.ಶಿವರಾಜ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.