ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಬ್ರಿಮ್ಸ್ನಲ್ಲಿ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ

ಬೀದರ:ಜೂ.2: ರಾಜ್ಯದವರೇ ಆದ ಡಿ.ವಿ. ಸದಾನಂದ ಗೌಡ, ಕೇಂದ್ರದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿದ್ದರೂ ಕರ್ನಾಟಕಕ್ಕೆ ಸೂಕ್ತ ಪ್ರಮಾಣದಲ್ಲಿ ಕೋವಿಡ್-19 ಮತ್ತು ಶೀಲೀಂದ್ರ ಸೋಂಕಿನಿಂದ ನರಳುತ್ತಿರುವವರಿಗೆ ಅತ್ಯಾವಶ್ಯಕ ಚುಚ್ಚುಮದ್ದು, ಔಷಧ ದೊರಕದಿರುವುದು ನಿಜಕ್ಕೂ ದೌರ್ಭಾಗ್ಯವೇ ಸರಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಿಷಾದ ವ್ಯಕ್ತಪಡಿಸಿದ್ದಾರೆ.

ಸಮುದ್ರದ ನಂಟು ಉಪ್ಪಿಗೆ ಬರ ಎನ್ನುವ ಸ್ಥಿತಿ ಕರ್ನಾಟಕದ್ದಾಗಿದೆ, ರಾಜ್ಯದ ಸಂಸದರಾದ ಸದಾನಂದ ಗೌಡರೇ ರಾಸಾಯನಿಕ ಸಚಿವರಾಗಿದ್ದರೂ, ರಾಜ್ಯದಲ್ಲಿ ಅತಿ ಹೆಚ್ಚು ಜನರು ಕೋವಿಡ್ ಸೋಂಕಿನಿಂದ ಬಳಲಿ, ಹಾಸಿಗೆಯಲ್ಲೇ ನರಳಿ ಸಾಯುತ್ತಿದ್ದಾಗ ಅಗತ್ಯ ಪ್ರಮಾಣದಲ್ಲಿ ಆಕ್ಸಿಜನ್, ರೆಮಿಡಿಸಿವೀರ್ ಸಿಗಲಿಲ್ಲ, ಇತರ ರಾಜ್ಯಗಳಿಗೆ ಯತೇಚ್ಛವಾಗಿ ಹಂಚಿಕೆ ಮಾಡಿದರೂ ರಾಜ್ಯಕ್ಕೆ ಮಾತ್ರ ಅತ್ಯಲ್ಪ ಪ್ರಮಾಣದಲ್ಲಿ ಹಂಚಿಕೆ ಮಾಡಲಾಯಿತು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.ಈಗ ಕಪ್ಪು ಶಿಲೀಂಧ್ರ ಸೋಂಕು ಅಥವಾ ಮ್ಯೂಕೋರ್ಮೈಕೋಸಿಸ್ ನಿಂದ ಬಳಲುತ್ತಿರುವವರಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಸರ್ಕಾರ ಪ್ರಕಟಿಸಿದ್ದರೂ ಅವರ ಜೀವ ಉಳಿಸಲು ಅಗತ್ಯವಾದ ಆಂಪೋಟೆರಿಸಿನ್ ಬಿ ಲಭ್ಯವಾಗುತ್ತಿಲ್ಲ.
ಬೀದರ್ ಬ್ರಿಮ್ಸ್ ಆಸ್ಪತ್ರೆಯಲ್ಲಿ 10 ಮಂದಿ ಮ್ಯೂಕೋರ್ಮೈಕೋಸಿಸ್ ಸೋಂಕಿನಿಂದ ಬಳಲುತ್ತಿದ್ದು, ಇವರ ಚಿಕಿತ್ಸೆಗೆ ಪ್ರತಿನಿತ್ಯ 70 ವಯಲ್ ಆಂಪೋಟರಿಸಿನ್ ಬಿ ಚುಚ್ಚುಮದ್ದಿನ ಅಗತ್ಯವಿದೆ. ಆದರೆ ಇಲ್ಲಿ ಇಂದು ಲಭ್ಯವಿದ್ದಿದ್ದು ಕೇವಲ 16 ವಯಲ್ ಹೀಗಾಗಿ 3 ಜನರಿಗೆ ಮಾತ್ರವೇ ಇದು ಸಾಕಾಯಿತು. ಉಳಿದವರ ಪಾಡೇನು.

ಈಗಾಗಲೇ ಹಲವು ವೈದ್ಯರು ಚುಚ್ಚುಮದ್ದಿನ ಕೊರತೆಯಿಂದ ಕಪ್ಪು ಶಿಲೀಂಧ್ರ ಸೋಂಕಿತರ ಕಣ್ಣು ತೆಗೆಯಬೇಕಾಗಿ ಬರುತ್ತಿದೆ. ಹಲವರು ಪ್ರಾಣ ಬಿಡುತ್ತಿದ್ದಾರೆ. ನಾವೂ ಏನೂ ಮಾಡುವ ಸ್ಥಿತಿಯಲ್ಲಿ ಇಲ್ಲದೆ ಕೈಚೆಲ್ಲಿ ಕುಳಿತಿದ್ದೇವೆ ಎಂದು ಕಣ್ಣೀರು ಹಾಕುತ್ತಿದ್ದಾರೆ. ಸರ್ಕಾರಕ್ಕೆ ಇದು ಕಾಣುತ್ತಿಲ್ಲವೇ.

ಕೂಡಲೇ ರಾಜ್ಯ ಆರೋಗ್ಯ ಸಚಿವರು ಕೇಂದ್ರ ಸಚಿವರೊಂದಿಗೆ ಮಾತನಾಡಿ, ತಕ್ಷಣವೇ ರಾಜ್ಯದಲ್ಲಿರುವ ಸೋಂಕಿತರ ಚಿಕಿತ್ಸೆಗೆ ಅಗತ್ಯವಾದಷ್ಟು ಚುಚ್ಚುಮದ್ದು ತರಿಸಿಕೊಳ್ಳಬೇಕು. ಕೂಡಲೇ ಬೀದರ ಬ್ರಿಮ್ಸ್ ಗೆ ಅಗತ್ಯ ಪ್ರಮಾಣದ ವಯಲ್ ಚುಚ್ಚುಮದ್ದು ಪೂರೈಸಬೇಕು ಎಂದು ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.