ಬ್ಲ್ಯಾಕ್ ಫಂಗಸ್ ಔಷಧಿ ಕೊರತೆ – ಡೀನ್ ಹೇಳಿಕೆ ಗೊಂದಲ

ರಾಯಚೂರು.ಜೂ.೦೨- ಬ್ಲ್ಯಾಕ್ ಫಂಗಸ್‌ಗೆ ಔಷಧಿ ಕೊರತೆಯಿಲ್ಲವೆಂಬ ಹೇಳಿಕೆ ಬಗ್ಗೆ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಅವರು, ಈ ರೀತಿ ರಿಮ್ಸ್ ಡೀನ್ ಡಾ.ಬಸವರಾಜ ಪೀರಾಪೂರು ಅವರು ಜನರನ್ನು ತಪ್ಪು ದಾರಿಗೆಳೆಯುವುದು ಸರಿಯಲ್ಲವೆಂದಿದ್ದಾರೆ.
ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಔಷಧಿ ಕೊರತೆಯಿರುವುದಾಗಿ ಸ್ವತಃ ರಾಜ್ಯ ವೈದ್ಯಕೀಯ ಸಚಿವರು ಹೇಳಿದ್ದಾರೆ. ರಿಮ್ಸ್ ಆಸ್ಪತ್ರೆಯಲ್ಲಿ ೩೬ ಬ್ಲ್ಯಾಕ್ ಫಂಗಸ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬ ಸೋಂಕಿತರಿಗೆ ಕನಿಷ್ಟ ೭ ಎಂಪೋಟೇರಿಸಿನ್ ಬಿ ಇಂಜಕ್ಷನ್ ಅಗತ್ಯವಾಗಿದೆ. ಸರಿಸುಮಾರು ೨೫೦ ಕ್ಕೂ ಅಧಿಕ ಇಂಜಕ್ಷನ್ ಅಗತ್ಯವಿದೆ. ಆದರೆ, ಜಿಲ್ಲೆಗೆ ಕೇವಲ ೧೫೦ ಮಾತ್ರ ಇಂಜಕ್ಷನ್ ಬಂದಿವೆ. ಈ ಮಾಹಿತಿ ಸ್ಪಷ್ಟವಾಗಿದ್ದರೂ, ಪೀರಾಪೂರು ಅವರು ಬ್ಲ್ಯಾಕ್ ಫಂಗಸ್‌ಗೆ ಔಷಧಿ ಕೊರತೆಯಿಲ್ಲವೆಂದು ಹೇಳಿರುವುದು ಜನರನ್ನು ದಾರಿ ತಪ್ಪಿಸುವಂತಾಗುತ್ತದೆ.
ಒಬ್ಬ ವೈದ್ಯಾಧಿಕಾರಿಯಾಗಿ ಸ್ಥಳೀಯ ಜನರ ಹಿತದೃಷ್ಟಿಯಿಂದ ಮಾಹಿತಿ ನೀಡಬೇಕು. ಇಲ್ಲಿವರೆಗೂ ಮೂರು ಹಂತಗಳಲ್ಲಿ ಮಾತ್ರ ಇಂಜಕ್ಷನ್ ಬಿಡುಗಡೆಯಾಗಿವೆ. ಮೊದಲು ೫೦, ನಂತರ ೪೦ ಮತ್ತು ೬೦ ಇಂಜಕ್ಷನ್ ನೀಡಲಾಗಿದೆ. ಇನ್ನೂ ೧೦೦ ಕ್ಕೂ ಅಧಿಕ ಇಂಜಕ್ಷನ್ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಈ ರೀತಿ ತಪ್ಪು ಹೇಳಿಕೆ ನೀಡಿ, ಜನರಿಗೆ ಚಿಕಿತ್ಸೆ ನೀಡದೇ, ತೊಂದರೆ ನೀಡುವಂತಹ ಕೆಲಸ ಆಗಬಾರದು. ಸರ್ಕಾರಕ್ಕೆ ಮನವಿ ಮಾಡಿ, ಅಗತ್ಯ ಇಂಜಕ್ಷನ್‌ಗಳು ಜಿಲ್ಲೆಗೆ ಬರುವಂತೆ ಮಾಡಬೇಕಾಗಿದೆ.
ರಿಮ್ಸ್ ಡೀನ್ ಡಾ.ಬಸವರಾಜ ಪೀರಾಪೂರು ಅವರು ತಕ್ಷಣವೇ ಈ ಹೇಳಿಕೆ ಹಿಂಪಡೆದುಕೊಂಡು ಸ್ಪಷ್ಟಣೆ ನೀಡಬೇಕು. ಈ ರೀತಿಯ ತಪ್ಪು ಹೇಳಿಕೆಗಳನ್ನು ಪೀರಾಪೂರು ಅವರು ನೀಡುತ್ತಲೇ ಬಂದಿದ್ದಾರೆ. ಕೊರೊನಾ ಸಂದರ್ಭದಲ್ಲೂ ಕೊರತೆಗಳ ಬಗ್ಗೆ ಸರಿಯಾಗಿ ಮಾಹಿತಿ ನೀಡದೇ, ದಾರಿ ತಪ್ಪಿಸುವುದರಿಂದ ಜಿಲ್ಲೆಯಲ್ಲಿ ಭಾರೀ ಜೀವ ಹಾನಿಗೆ ಕಾರಣವಾಯಿತು. ಆಸ್ಪತ್ರೆಯಲ್ಲಿ ಔಷಧಿ ಕೊರತೆಯಿದ್ದರೂ ಎಲ್ಲಾ ಸರಿ ಇದೆಂದು ಹೇಳುವ ಧೋರಣೆ ಒಬ್ಬ ವೈದ್ಯರಿಗೆ ಸೂಕ್ತವಲ್ಲ.
ಜನರಿಗೆ ಸೂಕ್ತವಾದ ಚಿಕಿತ್ಸೆ ದೊರೆಯುವ ರೀತಿಯಲ್ಲಿ ನಾವು ಕೆಲ ನಿರ್ವಹಿಸಬೇಕಾಗಿದೆ.
ಈ ಸಮಸ್ಯೆ ಇಲ್ಲಿಗೆ ಮುಗಿದಿದೆ ಎನ್ನುವ ರೀತಿಯಲ್ಲಿ ಹೇಳಿಕೆ ನೀಡುವುದು ಸರಿಯಲ್ಲ. ಕೊರೊನಾ ಮತ್ತು ಬ್ಲ್ಯಾಕ್ ಫಂಗಸ್ ಅಪಾಯ ಇನ್ನೂ ಇರುವುದರಿಂದ ಜನರನ್ನು ಸುರಕ್ಷಿತವಾಗಿ ಇರಿಸುವತ್ತ ನಾವೆಲ್ಲ ಗಮನ ಹರಿಸಬೇಕಾಗಿದೆ. ವೈದ್ಯರು ಈ ಬಗ್ಗೆ ತೀವ್ರ ಆತಂಕಿತರಾಗಿರುವಾಗ ರಿಮ್ಸ್ ಡೀನ್ ತಪ್ಪು ಮಾಹಿತಿ ನೀಡಿ, ಎಲ್ಲವೂ ಸರಿ ಇದೆಂದು ಹೇಳುವುದು ಎಷ್ಟು ಸರಿಯೆಂದು ಹೇಳಿದರೇ, ಚಿಕಿತ್ಸೆ ನೀಡುವ ವೈದ್ಯರ ವೈದ್ಯರ ಗತಿಯೇನಾಗಬೇಕು. ಇದೆಲ್ಲದರ ಬಗ್ಗೆ ಪೂರ್ವಪರ ಯೋಚನೆ ಮೂಲಕ ಹೇಳಿಕೆ ನೀಡುವಂತಾಗಬೇಕು.