ಬ್ಲ್ಯಾಕ್ ಫಂಗಸ್ ಉಲ್ಬಣ; ೩೯ ಬಲಿ

A doctor assists a Covid-19 coronavirus patient with Black Fungus, a deadly and rare fungal infection, as he receives treatments at the NSCB hospital in Jabalpur, on May 20, 2021. (Photo by Uma Shankar MISHRA / AFP)


ಬೆಂಗಳೂರು, ಮೇ.೩೧- ರಾಜ್ಯದೆಲ್ಲೆಡೆ ದಿನೇ ದಿನೇ ಬ್ಲ್ಯಾಕ್ ಫಂಗಸ್(ಕಪ್ಪು ಶಿಲೀಂಧ್ರ) ಸೋಂಕು ಹರಡುವಿಕೆ ಹೆಚ್ಚಾಗುತ್ತಿದ್ದು, ಈವರೆಗೆ ೩೯ ಮಂದಿ ಸಾವನ್ನಪ್ಪಿರುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ.
ರಾಜ್ಯದ ವಿವಿಧ ಜಿಲ್ಲೆಗಳು ಒಳಗೊಂಡಂತೆ ಒಟ್ಟಾರೆಯಾಗಿ ೧೨೫೦ ಮಂದಿಯಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. ಅತಿ ಹೆಚ್ಚು ಅಂದರೆ ೫೨೧ ಪ್ರಕರಣಗಳು ಬೆಂಗಳೂರಿನಲ್ಲೇ ಪತ್ತೆಯಾಗಿವೆ.
ಉಳಿದಂತೆ ಧಾರವಾಡದಲ್ಲಿ ೧೧೯, ಕಲಬುರಗಿ ೧೦೨, ಬಾಗಲಕೋಟೆ ೬೮, ವಿಜಯಪುರ ೫೭, ಕೋಲಾರ ೪೨, ಶಿವಮೊಗ್ಗ ೩೮, ರಾಯಚೂರು ೩೬, ಬೆಳಗಾವಿ ೩೫ ಮತ್ತು ಮೈಸೂರಿನಲ್ಲಿ ೩೫ ಪ್ರಕರಣಗಳು ದೃಢವಾಗಿವೆ. ರಾಜ್ಯದ ೨೮ ಜಿಲ್ಲೆಗಳಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ ಎಂದು ತಿಳಿಸಲಾಗಿದೆ.
ಒಟ್ಟಾರೆ ಪ್ರಕರಣಗಳಲ್ಲಿ ಕೇವಲ ೧೮ ಮಂದಿ ಗುಣಮುಖ
ರಾಗಿದ್ದಾರೆ. ಉಳಿದ ೧೧೯೩ ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಇನ್ನು, ಈ ಕುರಿತು ಆರೋಗ್ಯ ಸಚಿವ ಡಾ.ಕೆ.
ಸುಧಾಕರ್ ಪ್ರತಿಕ್ರಿಯಿಸಿ, ನಿನ್ನೆ ೧೮ ಸೋಂಕಿತರು ಚೇತರಿಸಿ
ಕೊಂಡಿದ್ದಾರೆ. ಸದ್ಯ ೧,೧೯೩ ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಸಮಸ್ಯೆಯಾಗದಂತೆ ಅಗತ್ಯ ಔಷಧ ವಿತರಿಸಲಾಗುತ್ತಿದೆ ಎಂದರು.
ರಾಜ್ಯಕ್ಕೆ ಈವರೆಗೆ ೮ ಸಾವಿರದಿಂದ ೧೦ ಸಾವಿರ ವಯಲ್ಸ್ ದೊರೆತಿದೆ ಎಂದ ಅವರು, ಕಪ್ಪು ಶಿಲೀಂಧ್ರ ಸೋಂಕಿಗೆ ಔಷಧಿ ಒದಗಿಸಲು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಎಂಟಕ್ಕೂ ಹೆಚ್ಚು ಕಂಪನಿಗಳ ಜೊತೆ ಚರ್ಚಿಸಿದ್ದಾರೆ. ಸುಮಾರು ೮೦ ಸಾವಿರ ವಯಲ್ಸ್ ಮಾರುಕಟ್ಟೆಯಲ್ಲಿದೆ ಎಂದು ಹೇಳಿದರು.