ಬ್ಲ್ಯಾಕ್ ಫಂಗಸ್‍ಗೆ ನಿವೃತ್ತ ಪೋಲಿಸ್ ಅಧಿಕಾರಿ ಮಹಾಂತೇಶ್ ಬಲಿ

ಕಲಬುರಗಿ:ಮೇ.30: ಮಹಾಮಾರಿ ಬ್ಲ್ಯಾಕ್ ಫಂಗಸ್ ಸೋಂಕಿಗೆ ನಿವೃತ್ತ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಮಹಾಂತೇಶ್ ಅವರು ಬಲಿಯಾಗಿದ್ದಾರೆ. ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ಭಾನುವಾರ ಅಸುನೀಗಿದರು.
ಮಹಾಂತೇಶ್ ಅವರು ಕಲಬುರ್ಗಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು. ಮೂಲತ: ವಿಜಯಪುರ ಜಿಲ್ಲೆಯವರು. ಇತ್ತೀಚೆಗಷ್ಟೇ ಸೇವಾ ನಿವೃತ್ತಿಯನ್ನು ಹೊಂದಿದ್ದರು.
ನಗರದ ಅಕ್ಕಮಹಾದೇವಿ ಕಾಲೋನಿಯಲ್ಲಿ ವಾಸವಾಗಿದ್ದ ಮಹಾಂತೇಶ್ ಅವರು ಕೆಲವು ದಿನಗಳ ಹಿಂದೆಯಷ್ಟೇ ಮಹಾಮಾರಿ ಕೊರೋನಾ ಸೋಂಕಿಗೆ ಒಳಗಾಗಿದ್ದರು. ಆ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದಾಗ್ಯೂ, ಮಹಾಮಾರಿ ಬ್ಲ್ಯಾಕ್ ಫಂಗಸ್ ಒಕ್ಕರಿಸಿದ್ದರಿಂದ ಅವರು ಬದುಕುಳಿಯಲಿಲ್ಲ.
ಈಗಾಗಲೇ ನಗರದ ಅಶೋಕ್ ನಗರ ಪೋಲಿಸ್ ಠಾಣೆಯ ಮುಖ್ಯ ಪೇದೆಯೊಬ್ಬರು ಬ್ಲ್ಯಾಕ್ ಫಂಗಸ್‍ಕ್ಕೆ ಬಲಿಯಾಗಿದ್ದು, ಮಹಾಂತೇಶ್ ಅವರ ಸಾವು ಎರಡನೇಯದು ಆಗಿದೆ. ಬ್ಲ್ಯಾಕ್ ಫಂಗಸ್ ಕುರಿತು ಜಿಲ್ಲಾಡಳಿತವು ಗಂಭೀರ ಕ್ರಮಗಳಣ್ನು ಕೈಗೊಳ್ಳಬೇಕಾಗಿದೆ.